ಕೆರೆ ಒತ್ತುವರಿ: ತಹಶೀಲ್ದಾರ್ ಪರಿಶೀಲನೆ

7

ಕೆರೆ ಒತ್ತುವರಿ: ತಹಶೀಲ್ದಾರ್ ಪರಿಶೀಲನೆ

Published:
Updated:

ಕೋಲಾರ: ನಗರದ ಕೋಲಾರಮ್ಮ ಕೆರೆಯಲ್ಲಿ ಒತ್ತುವರಿ ಪ್ರದೇಶವನ್ನು ವಶಪಡಿಸಿಕೊಳ್ಳುವ ಸಲುವಾಗಿ ನಡೆದಿರುವ ಬಂಡು ನಿರ್ಮಾಣದ ಕೆಲಸವನ್ನು ಮಂಗಳವಾರ ತಹಶೀಲ್ದಾರ್ ಎಸ್.ಎಂ.ಮಂಗಳಾ ಪರಿಶೀಲಿಸಿದರು.ಮಧ್ಯಾಹ್ನ 1.15ರ ವೇಳೆಗೆ ಕೆರೆ ಆವರಣಕ್ಕೆ ಬಂದ ತಹಶೀಲ್ದಾರ್, ಕೆರೆಯನ್ನು ಒತ್ತುವರಿ ಮಾಡಿಕೊಂಡು ಬೆಳೆಗಳನ್ನು ಬೆಳೆದಿದ್ದವರಿಗೆ ಸೂಚನೆಗಳನ್ನು ನೀಡಿ, ಕೂಡಲೇ ಸ್ಥಳವನ್ನು ತೆರವು ಮಾಡಬೇಕು ಎಂದು ಹೇಳಿದರು.ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದವರೊಬ್ಬರಿಗೆ ಮಾಹಿತಿ ನೀಡುವ ಸಲುವಾಗಿ ಕೆರೆಯ ವಿಸ್ತೀರ್ಣವನ್ನು ಈಗಾಗಲೇ ಅಳತೆ ಮಾಡಿ ಸಣ್ಣ ನೀರಾವರಿ ಇಲಾಖೆಗೆ ಮಾಹಿತಿ ನೀಡಲಾಗಿದೆ. ಒತ್ತುವರಿಯನ್ನು ತೆರವು ಮಾಡಬೇಕು ಎಂಬ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕೆರೆಯ ಸುತ್ತ ಬಂಡು ನಿರ್ಮಿಸಲಾಗುತ್ತಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ಕೆರೆಯ ಅಂಗಳದಲ್ಲಿ 18 ಎಕರೆಯಷ್ಟು ಒತ್ತುವರಿಯಾಗಿದೆ. ಅಲ್ಲಿ ಸರ್ಕಾರಿ ಕಚೇರಿ, ವಿದ್ಯಾರ್ಥಿನಿಲಯ ಕಟ್ಟಡಗಳೂ ಇವೆ. ಅವುಗಳನ್ನು ಹೊರತುಪಡಿಸಿ, ಉಳಿದ ಒತ್ತುವರಿದಾರರಿಗೆ ಸೂಚನೆಗಳನ್ನು ನೀಡಲಾಗಿದೆ. ಒತ್ತುವರಿ ಪ್ರದೇಶವನ್ನು ವಶಪಡಿಸಿಕೊಂಡು ಸಣ್ಣ ನೀರಾವರಿ ಇಲಾಖೆಗೆ ನೀಡಲಾಗುವುದು ಎಂದು ತಿಳಿಸಿದರು. ಕಂದಾಯ ಅಧಿಕಾರಿ ನಾಗರಾಜ್, ಎಂಜಿನಿಯರ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry