ಕೆರೆ, ಕಾಲುವೆ ನುಂಗುತ್ತಿದೆ ರಿಯಲ್‌ಎಸ್ಟೇಟ್ ದಂಧೆ

7

ಕೆರೆ, ಕಾಲುವೆ ನುಂಗುತ್ತಿದೆ ರಿಯಲ್‌ಎಸ್ಟೇಟ್ ದಂಧೆ

Published:
Updated:
ಕೆರೆ, ಕಾಲುವೆ ನುಂಗುತ್ತಿದೆ ರಿಯಲ್‌ಎಸ್ಟೇಟ್ ದಂಧೆ

ಶಿಡ್ಲಘಟ್ಟ:  ತಾಲ್ಲೂಕಿನಲ್ಲಿ ನಗರೀಕರಣ ಹಾಗೂ ರಿಯಲ್ ಎಸ್ಟೇಟ್ ಅಭಿವೃದ್ಧಿಯಿಂದ ರೈತರ ಜಮೀನು, ನೀರು ಹರಿಯುವ ಕಾಲುವೆ ಮತ್ತು ಚೆಕ್ ಡ್ಯಾಮ್ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಿಸುತ್ತಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ತಾಲ್ಲೂಕಿನ ಬುಸ್ನಳ್ಳಿ ಕೆರೆಯ ನೀರಿನ ಕಾಲುವೆ.ತಾಲ್ಲೂಕಿನ ಹಾರಡಿ ಗ್ರಾಮದ ಗುಟ್ಟದಿಂದ ಹರಿಯುವ ನೀರಿನ ಕಾಲುವೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಮಿಸಿರುವ ಚೆಕ್ ಡ್ಯಾಮ್ ಅಕ್ಕಪಕ್ಕದಲ್ಲಿ ಲೇಔಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಮಣ್ಣಿನಿಂದ ಎಲ್ಲವೂ ಮುಚ್ಚಲ್ಪಡುತ್ತಿವೆ.‘ಹಾರಡಿ ಗುಟ್ಟದಿಂದ ಮಳೆ ನೀರು ಹರಿದು ಬುಸ್ನಳ್ಳಿ ಕೆರೆಗೆ ಹೋಗುವಂತೆ ಕಾಲುವೆಯನ್ನು ನಿರ್ಮಿಸಲಾಗಿತ್ತು. ಹಾರಡಿ ಗ್ರಾಮದಿಂದ ಹೊರಕ್ಕೆ ಹರಿಯುವ ನೀರೂ ಸಹ ಇದೇ ಕಾಲುವೆಗೆ ಸೇರುತ್ತದೆ. 2004- 05ರಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚೆಕ್ ಡ್ಯಾಮ್ ಕೂಡ ನಿರ್ಮಿಸಲಾಗಿತ್ತು. ಆದರೆ ಹಾರಡಿಯಿಂದ ಎಚ್.ಕ್ರಾಸ್ ಕಡೆ ಹೋಗುವ ದಾರಿಯಲ್ಲಿ ನಡೆಯುತ್ತಿರುವ ಲೇಔಟ್ ಕಾಮಗಾರಿಯು ಜೀವ ಜಲದ ಹಾದಿಯನ್ನೇ ಮುಚ್ಚಿಹಾಕುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳದಿದ್ದರೆ ಕಾಲುವೆ, ಚೆಕ್‌ಡ್ಯಾಮ್‌ಗಳ ಕುರುಹು ಕೂಡ ಉಳಿಯುವುದಿಲ್ಲ’ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸುತ್ತಾರೆ. ‘ಕೆರೆಗಳ ಹೂಳೆತ್ತಲು ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ರಾಜಕಾಲುವೆ, ಗೋಕುಂಟೆ, ಕೆರೆಗಳಿಗೆ ನೀರು ಹರಿಯುವ ಹಳ್ಳಗಳು, ತೊರೆಗಳು ಮೊದಲಾದವುಗಳು ಅತಿ ಅವಶ್ಯಕ ಮತ್ತು ಮುಖ್ಯವಾದವು.

 

ಇವುಗಳ ಚಹರೆಯನ್ನೇ ಬದಲಿಸುತ್ತಿರುವ ನಗರೀಕರಣವನ್ನು ಪ್ರತಿಯೊಬ್ಬರು ವಿರೋಧಿಸಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಈಗಿರುವ ನೀರಿನ ಅಭಾವ ದುಪ್ಪಟ್ಟಾಗುತ್ತದೆ ಮತ್ತು ಎಲ್ಲರ ಜೀವನ ದುರ್ಭರವಾಗುತ್ತದೆ. ಜಮೀನು ಒತ್ತುವರಿ ಪಿಡುಗನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿವಾರಿಸಬೇಕು’ ಎಂದು ಯುವ ಮುಖಂಡ ತರಬಳ್ಳಿ ಭಾಸ್ಕರರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry