ಕೆರೆ ತೂಬು, ತಡೆಗೋಡೆ ನಿರ್ವಹಣೆಯಲ್ಲಿ ವೈಫಲ್ಯ

7
ಚನ್ನಗಿರಿ: ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ದೂರು

ಕೆರೆ ತೂಬು, ತಡೆಗೋಡೆ ನಿರ್ವಹಣೆಯಲ್ಲಿ ವೈಫಲ್ಯ

Published:
Updated:

ಚನ್ನಗಿರಿ: ತಾಲ್ಲೂಕಿನಲ್ಲಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕೆರೆಗಳ ತೂಬು ಹಾಗೂ ತಡೆಗೋಡೆಗಳ ನಿರ್ವಹಣೆಯಲ್ಲಿ ಇಲಾಖೆ ವೈಫಲ್ಯವನ್ನು ತೋರಿದೆ ಎಂದು ಹಲವು ಗ್ರಾಮಗಳ ಗ್ರಾಮಸ್ಥರ ದೂರಾಗಿದೆ.ಉದಾಹರಣೆಗೆ ಉಬ್ರಾಣಿ ಹೋಬಳಿಯ ಮಲಹಾಳ್ ಗ್ರಾಮದ ಕೆರೆಯ ತೂಬಿನ ಸುತ್ತಮುತ್ತ ತೂಬು ಕಾಣದಂತೆ ಗಿಡಗಂಟೆಗಳು ಬೆಳೆದು ನಿಂತಿವೆ. ಇದರಿಂದ ಕೆರೆಯ ನೀರು ಸುಗಮವಾಗಿ ಹರಿದು ಹೋಗಲು ಸಾಧ್ಯವಾಗುವುದಿಲ್ಲ. ಈ ರೀತಿ ಇದೊಂದೇ ಗ್ರಾಮದ ಕೆರೆ ಇರದೇ ತಾಲ್ಲೂಕಿನ ಸುಮಾರು 300 ಕ್ಕಿಂತ ಹೆಚ್ಚು ಕೆರೆಗಳಿದ್ದು, ಇದರಲ್ಲಿ ಬಹುತೇಕ ಕೆರೆಗಳಲ್ಲಿ ತೂಬು ಕಾಣದಂತೆ ಗಿಡಗಂಟಿಗಳು ಬೆಳೆದು ನಿಂತಿರುವ ದೃಶ್ಯ ಸಾಮಾನ್ಯವಾಗಿ ನೋಡಬಹುದಾಗಿದೆ.ಇನ್ನು 150 ಕ್ಕಿಂತ ಹೆಚ್ಚು ಕೆರೆಗಳಿಗೆ ತಡೆಗೋಡೆಗಳೇ ಇರುವುದಿಲ್ಲ. ಇದರಿಂದ ಮಳೆಗಾಲದಲ್ಲಿ ನೀರು ಏರಿಯ ಮೇಲೆ ಬಿದ್ದು ತಡೆಗೋಡೆಯ ಮಣ್ಣು ಕೊಚ್ಚಿಕೊಂಡು ಹೋಗಿ ಕೆರೆಗೆ ಸೇರುವಂತಾಗಿದೆ. ಅಷ್ಟೇ ಅಲ್ಲದೇ ಹಲವಾರು ಕೆರೆಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.ಈ ಕಾರಣದಿಂದ ಬೇಸಗೆ ಸಮಯದಲ್ಲಿ ಕೆರೆಯಲ್ಲಿ ನೀರು ಮಾಯವಾಗಿ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಉಂಟಾಗುತ್ತದೆ. ಜತೆಗೆ ಕೆರೆಗಳಲ್ಲಿ ಹೇರಳವಾಗಿ ಜಲಸಸ್ಯಗಳು ನೀರು ಕಾಣದಂತೆ ಬೆಳೆದು ನಿಂತಿವೆ. ಇದಕ್ಕೆಲ್ಲಾ ಸಣ್ಣ ನೀರಾವರಿ ಇಲಾಖೆ ಕೆರೆಗಳ ನಿರ್ವಹಣೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯವೇ ಪ್ರಮುಖವಾಗಿ ಕಾರಣವಾಗಿದೆ.ಉಬ್ರಾಣಿ ಏತ ನೀರಾವರಿ ಯೋಜನೆ ಅಡಿ ತಾಲ್ಲೂಕಿನ 87 ಕೆರೆಗಳಿಗೆ ಭದ್ರಾ ನದಿಯ ನೀರನ್ನು ತುಂಬಿಸಲಾಗುತ್ತಿದೆ. ಇದುವರೆಗೆ ಕೆರೆಗಳಲ್ಲಿ ನೀರು ಇಲ್ಲದೇ ರೈತರು ತೊಂದರೆ ಅನುಭವಿಸುವಂತಾಗಿತ್ತು. ಅದೇ ಈಗ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಒತ್ತುವರಿ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಗೊಪ್ಪೇನಹಳ್ಳಿ ಗ್ರಾಮದ ಕೆರೆ 21.21 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಸುಮಾರು 10 ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಒತ್ತುವರಿ ಮಾಡಿರುವುದರಿಂದ ಕೇವಲ 10 ಎಕರೆ ಪ್ರದೇಶದಲ್ಲಿ ಮಾತ್ರ ನೀರು ಸಂಗ್ರಣೆಯಾಗಿದೆ.ಒತ್ತುವರಿ ಮಾಡಿದ ಪ್ರದೇಶಕ್ಕೆ ನೀರು ನುಗ್ಗಿ ಅಡಿಕೆ ಹಾಗೂ ಮೆಕ್ಕೆಜೋಳ ಮುಂತಾದ ಬೆಳೆಗಳು ಹಾನಿಯಾಗಿವೆ ಎಂದು ಈ ಭಾಗದ ರೈತರು ಬೊಬ್ಬೆ ಹಾಕುತ್ತಿದ್ದಾರೆ. ಒತ್ತುವರಿ ನಿಯಂತ್ರಣ ಮಾಡದೇ ಹೋದರೇ ಇಡೀ ಅಚ್ಚುಕಟ್ಟು ಪ್ರದೇಶವೇ ಮಾಯವಾಗುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ.ತಾಲ್ಲೂಕಿನಲ್ಲಿ ಹಲವಾರು ಕೆರೆಗಳ ತಡೆಗೋಡೆಗಳನ್ನು ಕೇವಲ ಒಂದು ವರ್ಷದ ಹಿಂದೆ ನಿರ್ಮಿಸಿದ್ದು, ಕಳಪೆ ಕಾಮಗಾರಿಯಿಂದ ಈಗಾಗಲೇ ಒಡೆದು ಹಾಳಾಗಿವೆ. ಮೊದಲು ಎಲ್ಲಾ ಕೆರೆಗಳ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ನೀರು ಬಳಕೆದಾರರ ಸಂಘಗಳನ್ನು ಸ್ಥಾಪನೆ ಮಾಡಬೇಕಾಗಿದೆ. ಈ ಮೂಲಕ ಆಯಾ ಗ್ರಾಮದ ಕೆರೆ ನಿರ್ವಹಣೆಯನ್ನು ಬಳಕೆದಾರರು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.ಸಣ್ಣ ನೀರಾವರಿ ಇಲಾಖೆಯವರು ಕೇವಲ ಕಾಮಗಾರಿಗಳನ್ನು ಮಾಡಲು ಇಚ್ಚಿಸುತ್ತಾರೆ. ಆದರೆ ನಿರ್ವಹಣೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಾರೆ. ಆದ್ದರಿಂದ ಕೆರೆಗಳ ತೂಬು ಹಾಗೂ ತಡೆಗೋಡೆಗಳ ನಿರ್ವಹಣೆ ಕಾರ್ಯವನ್ನು ನೀರು ಬಳಕೆದಾರರ ಸಂಘಗಳಿಗೆ ವಹಿಸುವುದು ಸೂಕ್ತ ಎನ್ನುತ್ತಾರೆ ರೈತರಾದ  ತಿಪ್ಪೇಶಪ್ಪ, ಜಗದೀಶ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry