ಬುಧವಾರ, ಏಪ್ರಿಲ್ 21, 2021
23 °C

ಕೆರೆ ಬರಿದಾದರೆ ಅಂತರ್ಜಲವೂ ಬರಿದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕೇವಲ 10 ಮೀಟರ್‌ಗೂ ಮೇಲ್ಮಟ್ಟದಲ್ಲಿದ್ದ ಕಾಲವೊಂದಿತ್ತು. ಈಗ ಯಾರೂ ಊಹಿಸಿಕೊಳ್ಳಲಾಗದ ಮಟ್ಟಕ್ಕೆ ತಳ ಕಂಡಿರುವ ಕಟುಸತ್ಯ ಎಲ್ಲರ ಕಣ್ಣೆದುರಿಗೆ ಇದೆ. ಇಂತಹ ಕಣ್ಣೆದುರಿಗಿನ ತಳಮಳಕ್ಕೆ ಕಾರಣಗಳನ್ನು ಹುಡುಕಾಡಿದರೆ ಕೆರೆ-ಕಟ್ಟೆಗಳನ್ನು ನೀರು ನಿಲ್ಲುವ ಮಟ್ಟಕ್ಕೆ ನಿರ್ವಹಣೆ ಮಾಡದೆ ಕೈಚೆಲ್ಲಿರುವವರತ್ತ ಬೆರಳು ತೋರುವುದು ಸಹಜ. ಸಮುದ್ರ ಮಟ್ಟದಿಂದ ಸುಮಾರು 800 ಮೀಟರ್ ಎತ್ತರದಲ್ಲಿರುವ ತುಮಕೂರು ಜಿಲ್ಲೆಯಲ್ಲಿ ವರ್ಷ ಕಾಲ ತುಂಬಿ ಹರಿಯುವ ಯಾವುದೇ ಜೀವ ನದಿ ಇಲ್ಲ. ನೀರು ಹಿಡಿದಿಟ್ಟುಕೊಳ್ಳಲು, ಅಂತರ್ಜಲ ವೃದ್ಧಿಸಲು ಕೆರೆಗಳೆ ನಿಜವಾದ ಅಕ್ಷಯಪಾತ್ರೆ. ಆದರೆ, ಅವುಗಳ ಸರಿಯಾದ ನಿರ್ವಹಣೆ ಮಾಡದಿದ್ದರೆ ಪರಿಸ್ಥಿತಿ ಏನಾಗುತ್ತದೆ ಎನ್ನುವ ವಾಸ್ತವದ ‘ತಾಪ’ ಕಳೆದ ಬೇಸಿಗೆಯಲ್ಲೇ ನಗರದ ಜನತೆಗೂ ತಟ್ಟಿದೆ.ದೂರದ ಯಾವುದೋ ಕುಗ್ರಾಮದಲ್ಲಿ ಕೆರೆ ‘ಜಲ ಮೂಲ’ದ ಹಾದಿ ಮುಚ್ಚಿ, ಹೊಟ್ಟು ಕೆರೆಯಾಗಿರುವುದರ ಮಾತು ಬೇಡ. ನಗರದ ಹೃದಯ ಭಾಗದಲ್ಲೇ ಇರುವ ತುಮಕೂರು ನಗರದ ಹೃದಯ ಭಾಗದ ಅಮಾನಿಕೆರೆಯ ಹಿಂದಿರುವ ‘ಕಣ್ಣೀರ ಕಥೆ’ ಕೆದಕಿದರೆ ಜೀವ ವೈವಿಧ್ಯಕ್ಕೆ, ಸುತ್ತಲಿನ ಪರಿಸರದ ನೈರ್ಮಲ್ಯಕ್ಕೆ ಅಷ್ಟೇ ಏಕೆ ಭೂಗರ್ಭದಲ್ಲಿರುವ ಅಂತರ್ಜಲಕ್ಕೆ ಕೆರೆ ಎಷ್ಟು ಮುಖ್ಯ ಎನ್ನುವುದು ಮನದಟ್ಟಾಗುತ್ತದೆ.ಕೇವಲ ಎರಡು ವರ್ಷಗಳ ಹಿಂದಿನವರೆಗೂ ಅಮಾನಿಕೆರೆ ಕೆಸರಿನ ಮಡುವು. ಇಡೀ ನಗರದ ಕೊಳಕು ತುಂಬಿಕೊಂಡು ನಗರಕ್ಕಾಗುವಷ್ಟು ಸೊಳ್ಳೆಗಳನ್ನು ಉತ್ಪತ್ತಿ ಮಾಡುವ ತಿಪ್ಪೆಗುಂಡಿ ಹಾಗೂ ರೋಗರುಜಿನ ಹರಡುವ ತಾಣವಾಗಿತ್ತು. ಕೆರೆಯಿಂದ ಹೊಮ್ಮುತ್ತಿದ್ದ ದುರ್ವಾಸನೆ ಸಹಿಸಲಾಗದೆ ಬಸ್ಸು, ವಾಹನಗಳಲ್ಲಿ ಹೋಗುವ ಪ್ರಯಾಣಿಕರು ಮತ್ತು ಪಾದಚಾರಿಗಳು ಕೆರೆ ದಂಡೆ ದಾಟುವವರೆಗೂ ಮೂಗುಮುಚ್ಚಿಕೊಂಡು ಹೋಗಬೇಕಿತ್ತು.ಕೆರೆ ಸುಸ್ಥಿತಿಯಲ್ಲಿದ್ದಾಗ ಎಡ ಹಾಗೂ ಬಲ ದಂಡೆಗೆ ಪ್ರತ್ಯೇಕ ತೂಬು ಕಾಲುವೆಗಳು 750 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುತ್ತಿತ್ತು. ಅಂತರ್ಜಲ ವೃದ್ಧಿಗೂ ಕಾರಣವಾಗಿತ್ತು.ದೂರದೂರುಗಳಿಂದ ಪಕ್ಷಿಗಳು ಬಂದು ಈ ಕೆರೆಯಲ್ಲಿ ಮಿಂದೆದ್ದು ಹೋಗುತ್ತಿದ್ದವು. ಜಲಚರಗಳಿಗೂ ಆಶ್ರಯ ತಾಣವಾಗಿತ್ತು. ಯಾವಾಗ ನಗರದ ಕೊಳಚೆ ನೀರು ಕೆರೆಗೆ ಹರಿಯಲು ಶುರುವಾಯಿತೋ ನೋಡಿ ಇಡೀ ಕೆರೆ ಸಂಪೂರ್ಣ ಮಲೀನ ಆಗಿಹೋಯಿತು. ಕೆರೆ ಅಭಿವೃದ್ಧಿಪಡಿಸಲು ಕೋಡಿ ಒಡೆದು ಬತ್ತಿಸಲಾಯಿತು. ಪರಿಣಾಮ ಪಶುಪಕ್ಷಿಗಳಿಗೂ ನೀರಲ್ಲದಂತಾಯಿತು. ಜಲಚರಗಳು ನಾಮಾವಶೇಷವಾದವು.ಅಷ್ಟೇ ಏಕೆ ಒಂದು ಬೇಸಿಗೆ ಕಳೆಯುವುದರೊಳಗೆ ಕೆರೆ ಸುತ್ತಮುತ್ತಲಿನ ಮೂರ್ನಾಲ್ಕು ವಾರ್ಡುಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿ ಹೋದವು. ಅಂದು ಬತ್ತಿ ಹೋದ ಕೊಳವೆ ಬಾವಿಗಳು ಇಂದಿಗೂ ‘ಬಂಜೆತನ’ ನೀಗಿಸಿಕೊಂಡಿಲ್ಲ. ಕೆರೆ ಕಾಮಗಾರಿ ಬೇಗ ಪೂರ್ಣಗೊಳಿಸಿ ನೀರು ಸಂಗ್ರಹಿಸಿಕೊಳ್ಳುವ ಸ್ಥಿತಿಗೆ ತರುವಂತೆ ಪಾಲಿಕೆಯ ಚುನಾಯಿತ ಮಂಡಳಿ ಟುಡಾ ಮೇಲೆ ಒತ್ತಡ ಹಾಕಿದ್ದು ಎಲ್ಲರಿಗೂ ನೆನಪಿರಬಹುದು. ಅಂದರೆ ಒಂದು ಕೆರೆ ಜೀವಂತವಿದ್ದರೆ ಎಷ್ಟು ಉಪಯೋಗವಿದೆ ಎನ್ನುವುದನ್ನು ಇದಕ್ಕಿಂತ ಬಿಡಿಸಿಹೇಳಬೇಕಿಲ್ಲ.ಸಂಘಸಂಸ್ಥೆಗಳು, ಪರಿಸರವಾದಿಗಳ ಹೋರಾಟ, ಮಾಧ್ಯಮಗಳ ವರದಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಪ್ರಯತ್ನದ ಫಲವಾಗಿ ಕೊನೆಗೂ ಅಮಾನಿಕೆರೆಗೆ ಮರಳಿ ‘ಪಾವಿತ್ರ್ಯ’ ತಂದುಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಕೆರೆಯ ಸಮಗ್ರ ಅಭಿವೃದ್ಧಿಗೆ ಸುಮಾರು 13.58 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಕೆರೆ ಸಂರಕ್ಷಣಾ ಯೋಜನೆಯಡಿ ನೀಡಿದೆ. ಬಹುತೇಕ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಈ ಬಾರಿಯ ಮಳೆಗಾಲಕ್ಕೆ ಕೆರೆಯಲ್ಲಿ ನೀರು ಸಂಗ್ರಹವಾಗುವ ನಿರೀಕ್ಷೆಯೂ ಇದೆ.ಅಮಾನಿಕೆರೆ ಏನು? ಎತ್ತ?: ಅಮಾನಿಕೆರೆಗೆ ಅತ್ಯಂತ ಪುರಾತನ ಇತಿಹಾಸವಿದೆ. ಕ್ರಿ.ಶ.1130ರಲ್ಲಿ ಚೋಳ ರಾಜೇಂದ್ರ ಕಟ್ಟಿಸಿದ. ಇದರ ಮೂಲ ವಿಸ್ತೀರ್ಣ 948 ಎಕರೆ ಇತ್ತು ಎನ್ನುವ ಮಾಹಿತಿ ಇತಿಹಾಸದ ಪುಟಗಳಲ್ಲಿದೆ. 1906ರ ತುಮಕೂರು ಕಸಬಾ ನಕಾಶೆ ತೆಗೆದು ನೋಡಿದರೆ ಕೆರೆಯ ವಿಸ್ತೀರ್ಣ ಮತ್ತು ಅದರ ಗಡಿ, ಹಿನ್ನೀರು ನಿಲ್ಲುತ್ತಿದ್ದ ಜಾಗ ಸ್ವಷ್ಟವಾಗಿ ಕಾಣಿಸುತ್ತದೆ. ಆದರೆ, ಇಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡುವ ದಾಖಲೆ ಪ್ರಕಾರ ವಾಸ್ತವದಲ್ಲಿ ಅಮಾನಿಕೆರೆ ವಿಸ್ತೀರ್ಣ ಕೇವಲ 512 ಎಕರೆ ಮಾತ್ರ. ಆದರೆ, ಉಳಿದ 400ಕ್ಕೂ ಹೆಚ್ಚು ಎಕರೆ ಎಲ್ಲಿ? ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜವೇ.ಇದೇ ಪ್ರಶ್ನೆ ಇಟ್ಟುಕೊಂಡೇ ನಗರದ ಹಿರಿಯ ನಾಗರಿಕರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ 1906ರ ನಕಾಶೆಯಲ್ಲಿರುವ ದಾಖಲೆ ಪ್ರಕಾರ ಅಮಾನಿಕೆರೆಯನ್ನು ಸರ್ವೇ ಮಾಡಿಸಿ, ಗಡಿ ಗುರುತಿಸಿದ್ದೀರಾ? ಎಂದು ಮಾಹಿತಿ ಕೇಳಿದ್ದಾರೆ. ಆದರೆ, ಇಂದಿಗೂ ಮಾಹಿತಿ ಸಿಕ್ಕಿಲ್ಲ. 1906ರ ನಕಾಶೆ ನಮ್ಮ ಬಳಿ ಇಲ್ಲ ಎಂದು ಸಾಗಹಾಕಿದ್ದಾರೆ. ಸಾಮಾನ್ಯ ನಾಗರಿಕನಿಗೆ ಸಿಗುವ ದಾಖಲೆಗಳು ಜವಾಬ್ದಾರಿಯುತ ಇಲಾಖೆಗಳಿಗೆ ಸಿಗುವುದಿಲ್ಲ ಎಂದರೆ ಹೇಗೆ? ಎನ್ನುವುದು ಅವರ ದೂರು.‘ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದ ಅಮಾನಿಕೆರೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಟುಡಾಕ್ಕೆ ವರ್ಗಾಯಿಸಿದಾಗ 506 ಎಕರೆಯನ್ನಷ್ಟೇ ದಾಖಲೆಯಲ್ಲಿ ತೋರಿಸಿದರು. ಕೆರೆಯ ಗಡಿ ಗುರುತಿಸಲು ಭೂಮಾಪನ ಇಲಾಖೆಯಿಂದ ಅಳತೆ ಮಾಡಿಸಿದಾಗ ಒಟ್ಟು 512 ಎಕರೆ ಲಭ್ಯವಾಗಿದೆ. ಒಂದೂವರೆ ಎಕರೆಯಷ್ಟು ಒತ್ತುವರಿಯಾಗಿರುವುದು ಕಂಡುಬಂತು. ಅದರಲ್ಲಿ 19 ಗುಂಟೆ ಹೊರತುಪಡಿಸಿ ಉಳಿದ ಒತ್ತುವರಿ ತೆರವುಗೊಳಿಸಲಾಗಿದೆ. ಎರಡು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ 19 ಗುಂಟೆಗೆ ಕೈಹಾಕಿಲ್ಲ. ತೀರ್ಪು ಬಂದ ತಕ್ಷಣ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎನ್ನುತ್ತಾರೆ ಟುಡಾ ಆಯುಕ್ತ ಆದರ್ಶಕುಮಾರ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.