ಮಂಗಳವಾರ, ಜನವರಿ 28, 2020
29 °C
ಮಸ್ಕಂನ ಗೌಡನಕೆರೆ, ರಾಜಕಾಲುವೆ ಜಿಲ್ಲಾಧಿಕಾರಿ ವೀಕ್ಷಣೆ

ಕೆರೆ ಮಾಯ: ತಹಶೀಲ್ದಾರ್ ಧೋರಣೆಗೆ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ನಗರದ ಮಸ್ಕಂನಲ್ಲಿ ಒತ್ತುವರಿ­ಯಾಗಿರುವ ಗೌಡನಕೆರೆ ಮತ್ತು ಅದಕ್ಕೆ ನೀರು ಹರಿದುಬರುವ ರಾಜಕಾಲುವೆಯನ್ನು ಎಂಟು ದಿನಗಳಲ್ಲಿ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಿ.ಕೆ.ರವಿ ಆದೇಶಿಸಿದ್ದಾರೆ.ನಗರದ ಗೌತಂನಗರಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಗೌಡನ­ಕೆರೆಯನ್ನು ವೀಕ್ಷಿಸಿದ ಅವರು ಸರ್ವೇ ನಂಬರ್ 64ರಲ್ಲಿ ಇದ್ದ ಕೆರೆ ಸಂಪೂರ್ಣ ಮಾಯವಾಗಿದ್ದನ್ನು ಕಂಡು ಅವಾಕ್ಕಾದರು.ಇತ್ತೀಚೆಗೆ ತಹ­ಶೀಲ್ದಾರರು ತಮಗೆ ವರದಿ ನೀಡಿ, ಕೆರೆ ಒತ್ತುವರಿಯಾಗಿಲ್ಲ ಎಂದು ತಿಳಿಸಿದ್ದರು. ಆದರೆ ಇಲ್ಲಿ ಕೆರೆಯೇ ಕಾಣುತ್ತಿಲ್ಲವಲ್ಲ. ತಹಶೀಲ್ದಾರ­ರಿಗೆ ಸ್ವಲ್ಪವೂ ವಿವೇಚನೆ ಬೇಡವೆ ಎಂದು ಖಾರವಾಗಿ ಕೇಳಿ­ದರು.ಕೆರೆ ಒತ್ತುವರಿಯಾಗಿದೆ ಎಂದು ತಾವು ಹೇಳಿದರೂ ತಹಶೀಲ್ದಾರರು ಕೇಳಲಿಲ್ಲ ಎಂದು ಸ್ಥಳದಲ್ಲಿ ಹಾಜರಿದ್ದ ನಾಡ ಕಚೇರಿ ಸಿಬ್ಬಂದಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ­ದರು. ಪಕ್ಕದಲ್ಲಿಯೇ ಇರುವ ಲೇಔಟ್‌ಗೆ ಕೆರೆಯಲ್ಲಿ ದಾರಿಗೆ ಜಾಗವನ್ನು ನೀಡಿದ ಬಗ್ಗೆ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭೀಮನೇಡಿ ಅವರನ್ನು ತರಾಟೆಗೆ ತೆಗೆದು­ಕೊಂಡರು.ರಸ್ತೆಯನ್ನು ತೆರವುಗೊಳಿಸಿ, ಲೇಔಟ್‌ಗೆ ನೀಡಿದ್ದ ಅನುಮತಿಯನ್ನು ಮರುಪರಿಶೀಲಿಸು­ವಂತೆ ಸೂಚನೆ ನೀಡಿದರು. ಗೌಡನಕೆರೆ ಒತ್ತುವರಿಯಾಗಿರುವ ಬಗ್ಗೆ ತಹ­ಶೀಲ್ದಾರರಿಗೆ ಹಲವಾರು ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ನಂತರ ಲೋಕಾಯುಕ್ತರಿಗೆ ದೂರು ನೀಡಿದ ನಂತರ ತಹಶೀಲ್ದಾರರು ಕಠಿಣ ಕ್ರಮ ಕೈಗೊಳ್ಳುವ ಬದಲು ಒಂದೊಂದು ಬಾರಿ ಒಂದೊಂದು ವರದಿ­ಯನ್ನು ಸರ್ಕಾರಕ್ಕೆ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ತಿಳಿಸಿ­ದರು.ಈ ಮುನ್ನ ಗೌಡನಕೆರೆಗೆ ನೀರು ಹರಿದುಬರುವ ರಾಜಕಾಲುವೆ ಗೌತಂ­ನಗರದ ಬಳಿ ಇರುವ ಮುಖ್ಯ ರಸ್ತೆ­ಯಲ್ಲಿ ಅತಿಕ್ರಮಿಸಿರುವುದನ್ನು ಜಿಲ್ಲಾಧಿ­ಕಾರಿ ವೀಕ್ಷಿಸಿದರು. ರಾಜಕಾಲುವೆ ಮತ್ತು ಗೌಡನಕೆರೆ ಇರುವ ಪ್ರದೇಶ­ವನ್ನು ಎಂಟು ದಿನಗಳೊಳಗೆ ಸರ್ವೇ ಮಾಡಿ ಸಂಪೂರ್ಣ ವರದಿಯನ್ನು ತಮಗೆ ಸಲ್ಲಿಸುವಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.ನಗರಸಭೆಯ ಕುವೆಂಪು ಬಸ್‌­ನಿಲ್ದಾಣಕ್ಕೆ ಭೇಟಿ ನೀಡಿ, ಬಸ್ ನಿಲ್ದಾ­ಣದ ಅವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಮಹಾತ್ಮಗಾಂಧಿ ಪ್ರತಿಮೆ­ಯನ್ನು ಸ್ಥಳಾಂತರಿಸುವ ಜಾಗವನ್ನು ಸಹ ವೀಕ್ಷಿಸಿದರು.ನಗರ ಹೊರವಲಯದ ಲಕ್ಷ್ಮೀ­ಸಾಗರ ಕೆರೆ, ಊರಿಗಾಂಪೇಟೆ ರಾಜ­ಕಾಲುವೆ ಒತ್ತುವರಿಯಾಗಿರುವ ಪ್ರದೇಶ­ವನ್ನು ಅವರು ವೀಕ್ಷಿಸಿ­ದರು.

ನಗರಸಭೆ ಆಯುಕ್ತ ಬಾಲಚಂದ್ರ, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭೀಮನೇಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರಿಧರ್, ಉಪತಹಶೀಲ್ದಾರ್ ವೆಂಕಟ­ರಾಮಯ್ಯ , ಕಂದಾಯ ಸಹಾಯಕ ವಿಜಯದೇವ್ ಮತ್ತಿತರರಿದ್ದರು.

ಪ್ರತಿಕ್ರಿಯಿಸಿ (+)