ಕೆರೆ ಸಂರಕ್ಷಣೆ ನೆಪದಲ್ಲಿ ಕ್ರಿಕೆಟಿಗರ ನೋಟ

ಸೋಮವಾರ, ಜೂಲೈ 22, 2019
26 °C

ಕೆರೆ ಸಂರಕ್ಷಣೆ ನೆಪದಲ್ಲಿ ಕ್ರಿಕೆಟಿಗರ ನೋಟ

Published:
Updated:

ಮೊನ್ನೆ ಶನಿವಾರ ಎಂದಿನಂತಿರಲಿಲ್ಲ ಹಲಸೂರು ಕೆರೆಯ ಮುಖ್ಯದ್ವಾರದ ಪ್ರಾಂಗಣ. ನಿತ್ಯ ವಾಕಿಂಗ್‌ಗೆ ಬರುವವರು, ಕೆರೆಯ ಮುಂಭಾಗದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಮುಖ್ಯದ್ವಾರದ ಬಳಿ ಕಣ್ಣು ಹಾಯಿಸುತ್ತಿದ್ದರು. ಅವರಲ್ಲೊಂದಷ್ಟು ಕುತೂಹಲ. ಇಲ್ಲೇನೋ ವಿಶೇಷವಿದೆ ಎನ್ನುವ ಕಾತುರ.ಕೆಲವೊಂದಷ್ಟು ಜನ ನೇರವಾಗಿ ಬಂದವರೇ ಒಂದೆಡೆ ಇಡಲಾಗಿದ್ದ ಬಿಳಿ ಬಣ್ಣದ ದೊಡ್ಡ ಬೋರ್ಡ್ ಮೇಲೆ ತಮ್ಮ ಸಹಿ ಹಾಕುತ್ತಿದ್ದರು. ಜೊತೆಗೆ `ಕೆರೆ ಉಳಿಸಲು ಕೈ ಜೋಡಿಸಿ~ ಎನ್ನುವ ಭಿತ್ತಿ ಪತ್ರ ಹಿಡಿದು ಘೋಷಣೆ ಹಾಕುತ್ತಿದ್ದವರಿಗೆ ದನಿಗೂಡಿಸಿದರು. ಸಸಿ ನೆಟ್ಟು ನೀರೆರೆದರು. `ಯುನೈಟೆಡ್ ವೇ~ ಕೆರೆಗಳ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಕಂಡುಬಂದ ದೃಶ್ಯಗಳಿವು.ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಥ್ ನೀಡಿದರು. ಮಕ್ಕಳ ಸಂಭ್ರಮ, ಉತ್ಸಾಹವನ್ನು ಕಂಡು ಅಲ್ಲಿ ವಾಕಿಂಗ್ ಮಾಡುತ್ತಿದ್ದ ಹಿರಿಯರೂ ಕಾರ್ಯಕ್ರಮದತ್ತ ಮುಖ ಮಾಡಿದರು. ಕೆರೆಗಳ ರಕ್ಷಣೆಗೆ `ಯುನೈಟೆಡ್ ವೇ~ ಜೊತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈ ಜೋಡಿಸಿತ್ತು.

 

ಬಿ.ಎಂ.ಎಸ್, ಚಿನ್ಮಯ ವಿದ್ಯಾಲಯ, ಅಶ್ವಿನಿ ಚಾರಿಟಬಲ್ ಟ್ರಸ್ಟ್ ಹಾಗೂ ಮೇರಿ ಲ್ಯಾಂಡ್ ಪ್ರೌಢಶಾಲೆಯ ವಿದ್ಯಾರ್ಥಿಗಳೂ ಆಗಮಿಸಿ ರಂಗು ತುಂಬಿದರು.ನಗರದಲ್ಲಿ ಸಾಕಷ್ಟು ಕೆರೆಗಳಿದ್ದರೂ ಸರಿಯಾದ ನಿರ್ವಹಣೆಯ ಕೊರತೆಯಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ನಿಷ್ಕಾಳಜಿ ಹೀಗೆಯೇ ಮುಂದುವರಿದರೆ ಮುಂದಿನ ಜನಾಂಗಕ್ಕೆ ಕೆರೆ ಎಂದರೇನು ಎಂದು ಹೇಳಿಕೊಡಬೇಕಾದ ಅನಿವಾರ್ಯತೆ ಎದುರಾಗಬಹುದು.ಈ ಸಂಕಷ್ಟ ಎದುರಾಗದಿರಲಿ ಎನ್ನುವ ಕಾಳಜಿಯಿಂದ `ಯುನೈಟೆಡ್ ವೇ~ ಕೆರೆ ಸಂರಕ್ಷಣೆಗೆ ಮುಂದಾಗಿದೆ. ಇದಕ್ಕೆ ಕ್ರಿಕೆಟಿಗರಾದ ಆರ್.ಪಿ. ಸಿಂಗ್ ಹಾಗೂ ಅಮಿತ್ ಮಿಶ್ರಾ ಸಹ ಬೆಂಬಲ ಸೂಚಿಸಿದರು.ಕ್ರಿಕೆಟಿಗರನ್ನು ಕೇವಲ ಕ್ರೀಡಾಂಗಣದಲ್ಲಿ ಕಂಡು ಅಥವಾ ಟೀವಿಯಲ್ಲಿ ನೋಡಿ ಖುಷಿಪಟ್ಟಿದ್ದ ಸಾರ್ವಜನಿಕರಿಗೆ ಸಾಮಾಜಿಕ ಕಾಳಜಿಯ ಜೊತೆಗೆ ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡ ಸಂಭ್ರಮ. `ಕೆರೆಗಳ ನಗರ~ದಲ್ಲಿ (ಲೇಕ್ ಸಿಟಿ) `ಕೆರೆ ಉಳಿಸಿ~ ಅಭಿಯಾನ ನಡೆಸುತ್ತಿರುವುದು ಇದು ಎರಡನೇ ವರ್ಷ. ಕಳೆದ ವರ್ಷ ಸಹ ಇದೇ ಸಂಸ್ಥೆ ಕೈಕೊಂಡನಹಳ್ಳಿ ಮತ್ತು ಉತ್ತರಹಳ್ಳಿಯ ಕರೆಗಳ ಸಂರಕ್ಷಣೆಗೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಯಾವುದೇ ಕೆಲಸ ಮಾಡಬೇಕಾದರೂ ಸ್ಥಳೀಯರ ಬೆಂಬಲ ಅಗತ್ಯವೆಂಬ ಮಾತು ಹೊಸದೇನಲ್ಲ. ಆದ್ದರಿಂದ `ಯುನೈಟೆಡ್ ವೇ~ ಸಂಸ್ಥೆ ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರ ನೆರವು ಪಡೆದುಕೊಂಡಿತ್ತು. `ನಮ್ಮ ಮನೆಯ ಅಂಗಳದ ಕೆರೆಯ ಪರಿಸರ ಚೆನ್ನಾಗಿರಲಿ~ ಎನ್ನುವ ಸದುದ್ದೇಶದಿಂದ ಸ್ಥಳೀಯರೂ ಸಂಸ್ಥೆಯವರಿಗೆ ಸೂಕ್ತ ಸಹಾಯ ಮಾಡಿ, `ಕೆರೆಗಳ ಪುನರುಜ್ಜೀವನ~ಕ್ಕೆ ತಮ್ಮ ಬೆಂಬಲವಿದೆ ಎನ್ನುವುದನ್ನು ಸಾರಿದರು.`ನಗರದಲ್ಲಿನ ಕೆರೆಗಳ ಬಗ್ಗೆ ನಮ್ಮ ನಿಷ್ಕಾಳಜಿ ಹೀಗೆಯೇ ಮುಂದುವರಿದರೆ, ಅಪಾಯದ ತೂಗುಗತ್ತಿ ತಪ್ಪಿದ್ದಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೆರೆಗಳ ಉಳಿವಿಗೆ ಕಾರ್ಯಗಳನ್ನು ಮಾಡಲಿ. ನಾವು ನಮ್ಮ ಅಕ್ಕಪಕ್ಕದ ಕೆರೆಗಳನ್ನು ರಕ್ಷಿಸಲು ಕೈ ಜೋಡಿಸೋಣ. ಒಟ್ಟಿನಲ್ಲಿ ನಮ್ಮ ಉದ್ದೇಶ ಸಫಲವಾದರೆ ಸಾಕು~ ಎಂದು `ಯುನೈಟೆಡ್ ವೇ~ನ ಅಧ್ಯಕ್ಷ ಸಾಬು ಥಾಮಸ್ ನುಡಿದರು.ಕೆರೆ ರಕ್ಷಣೆಗೆ ಮಾಡಬೇಕಾದ್ದೇನು ಎನ್ನುವುದರ ಬಗ್ಗೆ ಕೆಲ ಗಣ್ಯರು ಮಾತನಾಡಿದರು. ಆದರೆ, ಎಲ್ಲರ ಚಿತ್ತ ಸಹಜವಾಗಿ ಕ್ರಿಕೆಟಿಗ ಆರ್.ಪಿ. ಸಿಂಗ್ ಮೇಲಿತ್ತು. ಕ್ರೀಡಾಂಗಣದಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ಎದುರು ಕರಾರುವಾಕ್ಕಾಗಿ ಬೌಲಿಂಗ್ ದಾಳಿ ನಡೆಸುವಂತೆ ಈ ಕಾರ್ಯಕ್ರಮದಲ್ಲೂ ಅವರು ಮಾತಿನ ಬೌಲಿಂಗ್ ಮಾಡಿದರು.`ನೀರಿನ ಕೊರತೆ ಹೆಚ್ಚಾಗುತ್ತಿರುವ ಕೆರೆಗಳಲ್ಲಿ, ನೀರು ನಿಲ್ಲುವಂತೆ ಮಾಡಲು ವ್ಯವಸ್ಥೆ ಮಾಡಬೇಕು. ಈ ಅಭಿಯಾನ ಎಲ್ಲರಿಗೂ ಸ್ಫೂರ್ತಿದಾಯಕ~ ಎಂದರು.ವಿವಿಧ ಸಂಸ್ಥೆಗಳು ಕೆರೆ ಉಳಿಸುವ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಆಶಾದಾಯಕ ಬೆಳವಣಿಗೆ. ಇದರ ಜೊತೆಗೆ ಸಾರ್ವಜನಿಕರ ಕಾಳಜಿಯೂ ಕೊಂಚ ಸೇರಿದರೆ ಈ ಕಾರ್ಯ ಬೇಗನೆ ಮುಗಿಯುತ್ತದೆ. ಕಲುಷಿತ ವಾತಾವರಣದಿಂದ ಬೇಗನೆ ಮುಕ್ತಿ ಪಡೆಯಲೂ ಸಾಧ್ಯವಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry