ಕೆಲವು ಪ್ರಥಮಗಳ ಕುರಿತು...

7

ಕೆಲವು ಪ್ರಥಮಗಳ ಕುರಿತು...

Published:
Updated:

ಏಕದಿನ ಕ್ರಿಕೆಟ್ ಎನ್ನುವುದು ಹುಟ್ಟಿಕೊಂಡಾಗಲೇ ಚೆಂಡು-ದಾಂಡಿನ ಆಟದ ವಿಶ್ವಕಪ್ ನಡೆಸಬಹುದೆಂದು ಯೋಚನೆ ಮೂಡಿದ್ದು. 1975ರಲ್ಲಿ ಮೊದಲ ಬಾರಿಗೆ ವಿಶ್ವ ಮಟ್ಟದಲ್ಲಿ ದೊಡ್ಡದೊಂದು ಕ್ರಿಕೆಟ್ ಟೂರ್ನಿ ನಡೆದಾಗ ಅನೇಕ ಪ್ರಥಮಗಳ ಹೊಸ ಅಧ್ಯಾಯ ತೆರೆದುಕೊಂಡಿತು. ಅಂಥ ಕೆಲವು ಗಮನ ಸೆಳೆಯುವಂಥ ಪ್ರಥಮಗಳ ವಿವರಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ.* ಏಕದಿನ ಕ್ರಿಕೆಟ್ ಹುಟ್ಟು ಪಡೆದಿದ್ದು 7ನೇ ಜೂನ್ 1971ರಲ್ಲಿ. ಮೊಟ್ಟ ಮೊದಲ ಏಕದಿನ ವಿಶ್ವಕಪ್ ನಡೆದಿದ್ದು 1975ರಲ್ಲಿ. ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ್ದು ಭಾರತ ಹಾಗೂ ಇಂಗ್ಲೆಂಡ್ (ಲಾರ್ಡ್ಸ್, 7ನೇ ಜೂನ್). ವಿಶೇಷವೆಂದರೆ ಇದಕ್ಕೂ ಮುನ್ನ 18 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ನಡೆದಿದ್ದವು. ಆಗ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದ ಅಂಗಳಗಳಲ್ಲಿಯೇ ಏಕದಿನ ಪಂದ್ಯಗಳು ನಡೆದಿದ್ದು. ಮೊದಲ ವಿಶ್ವಕಪ್‌ನಲ್ಲಿ ಟೆಸ್ಟ್ ಮಾನ್ಯತೆ ಹೊಂದಿದ್ದ ಆರು ರಾಷ್ಟ್ರಗಳು ಹಾಗೂ ಆಗ ಐಸಿಸಿ ಸಹ ಸದಸ್ಯ ರಾಷ್ಟ್ರಗಳಾಗಿದ್ದ ಪೂರ್ವ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಪಾಲ್ಗೊಂಡಿದ್ದವು. ಶ್ರೀಲಂಕಾ ಆಗ ಟೆಸ್ಟ್ ಆಡುವ ರಾಷ್ಟ್ರದ ಮಾನ್ಯತೆ ಹೊಂದಿರಲಿಲ್ಲ ಎನ್ನುವುದು ಗಮನ ಸೆಳೆಯುವ ಅಂಶ.

* ವಿಶ್ವಕಪ್‌ನಲ್ಲಿ ಮೊದಲ ಬೌಲ್ ಎಸೆದಿದ್ದು ಭಾರತದ ಮದನ್‌ಲಾಲ್ ಹಾಗೂ ಅದನ್ನು ಎದುರಿಸಿದ್ದು ಇಂಗ್ಲೆಂಡ್‌ನ ಜಾನ್ ಜೇಮ್ಸನ್. ಮೊದಲ ಕ್ಯಾಚ್ ಪಡೆದಿದ್ದು ಭಾರತ ತಂಡದ ನಾಯಕರಾಗಿದ್ದ ಶ್ರೀನಿವಾಸ್ ವೆಂಕಟರಾಘವನ್. ಇಂಗ್ಲೆಂಡ್ ವಿರುದ್ಧವೇ ಚೊಚ್ಚಲ ಪಂದ್ಯ ಆಡಿದ್ದ ಮೋಹಿಂದರ್ ಅಮರ್ನಾಥ್ ಎಸೆತದಲ್ಲಿ. ಅಮರ್ನಾಥ್ ಅವರು ಜೇಮ್ಸನ್ ರೂಪದಲ್ಲಿ ವಿಶ್ವಕಪ್‌ನ ಪ್ರಥಮ ವಿಕೆಟ್ ಪಡೆದ ಶ್ರೇಯ ಹೊಂದಿದ್ದಾರೆ.* ಇಂಗ್ಲೆಂಡ್‌ನ ಡಿ.ಎಲ್.ಅಮೀಸ್ ಅವರು ಭಾರತದ ವಿರುದ್ಧವೇ ವಿಶ್ವಕಪ್‌ನ ಮೊದಲ ಶತಕ ಗಳಿಸಿದ್ದು. ಅವರು 137 ರನ್ ಗಳಿಸಿದ್ದರು. ವಿಚಿತ್ರವೆಂದರೆ ಭಾರತ ಅದೇ ಪಂದ್ಯದಲ್ಲಿ ಗಳಿಸಿದ್ದ ಒಟ್ಟು ಮೊತ್ತ 60 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 132 ರನ್. ಸುನಿಲ್ ಗಾವಸ್ಕರ್ ಔಟಾಗದೆ ಉಳಿದಿದ್ದರು. ಆದರೆ ಅವರು 174 ಎಸೆತಗಳಲ್ಲಿ ಗಳಿಸಿದ್ದು ಕೇವಲ 36 ರನ್. ಭಾರತ ಪರ ಆ ಪಂದ್ಯದಲ್ಲಿ ಗರಿಷ್ಠ ಮೊತ್ತ ಗಳಿಸಿದ್ದು ಜಿ.ಆರ್.ವಿಶ್ವನಾಥ್ (59 ಎಸೆತಗಳಲ್ಲಿ 37 ರನ್). ಎದುರಾಳಿ ತಂಡವು (ಭಾರತ) ಗಳಿಸಿದ್ದ ಒಟ್ಟು ಮೊತ್ತಕ್ಕಿಂತ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಶ್ರೇಯಕ್ಕೆ ಪಾತ್ರರಾಗಿದ್ದು ಡಿ.ಎಲ್. ಅಮೀಸ್. ಏಕದಿನ ಕ್ರಿಕೆಟ್‌ನಲ್ಲಿ ಅಂಥದೊಂದು ಘಟನೆ ನಡೆದಿದ್ದು ಅದೇ ಮೊದಲು.

* ಇಂಗ್ಲೆಂಡ್‌ನವರು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುನ್ನೂರಕ್ಕೂ ಅಧಿಕ ರನ್ ಗಳಿಸಿದ್ದು. ಇಂಗ್ಲೆಂಡ್ 60 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಿತ್ತು. ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದ್ದು ಕೂಡ ಅದೇ ಮೊದಲು. ಭಾರತ ವಿರುದ್ಧದ ಪಂದ್ಯದಲ್ಲಿಯೇ ಇಂಗ್ಲೆಂಡ್ 202 ರನ್‌ಗಳಿಂದ ಜಯ ಪಡೆದಿದ್ದು, ದೊಡ್ಡ ಮೊತ್ತದ ಅಂತರದಲ್ಲಿ ತಂಡವೊಂದು ವಿಜಯ ಸಾಧಿಸಿದ ಮೊದಲ ಘಟನೆ. ಕೀಥ್ ಫ್ಲೆಚರ್ ಹಾಗೂ ಅಮೀಸ್ ವಿಶ್ವಕಪ್‌ನಲ್ಲಿ ಮೂರಂಕಿಯ ಜೊತೆಯಾಟವಾಡಿದ ಮೊದಲ ಜೋಡಿ. ಎರಡನೇ ವಿಕೆಟ್‌ನಲ್ಲಿ ಇವರಿಬ್ಬರೂ 176 ರನ್ ಕಲೆಹಾಕಿದ್ದರು. ಅಮೀಸ್ ಅವರು 18 ಬೌಂಡರಿ ಗಳಿಸುವ ಮೂಲಕವೂ ಗಮನ ಸೆಳೆದಿದ್ದರು. ಹದಿನೈದಕ್ಕೂ ಹೆಚ್ಚು ಬೌಂಡರಿಗಳನ್ನು ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಇವರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry