ಶನಿವಾರ, ಡಿಸೆಂಬರ್ 14, 2019
25 °C

ಕೆಲಸದ ಜೊತೆ ಭಾವನೆ ಸೇರಿಸಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲಸದ ಜೊತೆ ಭಾವನೆ ಸೇರಿಸಬಾರದು

ಜಿ.ಸತ್ಯವತಿ ಮೈಸೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1991ರ ಕೆಎಎಸ್ ಅಧಿಕಾರಿಯಾಗಿರುವ ಅವರಿಗೆ ಇತ್ತೀಚೆಗೆ ತಾನೆ ಐಎಎಸ್ ಬಡ್ತಿ ದೊರಕಿದೆ. ಮಧುಗಿರಿ ಬಳಿಯ ಕರ್ನಾಟಕ ಆಂಧ್ರಪ್ರದೇಶದ ಗಡಿ ಭಾಗದ ಹಳ್ಳಿಯಿಂದ ಬಂದ ಅವರ ಮಾತೃಭಾಷೆ ತೆಲುಗು. ಆದರೆ ಅಪ್ಪಟ ಕನ್ನಡತಿ. ಓದಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ.ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದೇ ವಿಷಯದಲ್ಲಿ ಎಂಫಿಲ್ ಕೂಡ ಮಾಡಿದ್ದಾರೆ. ಬೀದರ್‌ನಲ್ಲಿ ಉಪ ವಿಭಾಗಾಧಿಕಾರಿಯಾಗಿ ತಮ್ಮ ಸೇವೆ ಆರಂಭಿಸಿದ ಅವರು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಕಳೆದ 20 ವರ್ಷಗಳಿಂದ ಉನ್ನತ ಹುದ್ದೆಯಲ್ಲಿಯೇ ಕೆಲಸ ಮಾಡುತ್ತಿರುವ ಅವರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

                                       ======

ಹೆಣ್ಣು ಮಕ್ಕಳು ಎಂದರೆ ಭಾವನೆಗಳ ಖನಿಜ. ಅವರಿಗೆ ಮನೆಯೇ ಒಂದು ಜಗತ್ತು. ಕೆಲಸಕ್ಕೆ ಬಂದರೂ ಆ ಜಗತ್ತು ಅವರನ್ನು ಬಿಡುವುದೇ ಇಲ್ಲ. ಯಾರಾದರೂ ಏನಾದರೂ ಹೇಳಿದರೆ ಗಂಗಾ ಕಾವೇರಿ ಹರಿಯಲು ಆರಂಭವಾಗುತ್ತದೆ. ಕಣ್ಣೀರು ಧಾರೆಯಾಗುತ್ತದೆ. ಆದರೆ ಹೆಣ್ಣು ಮಕ್ಕಳು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಯಾರೇ ನಮ್ಮನ್ನು ಟೀಕೆ ಮಾಡಿದರೂ ಅದು ನಮಗಲ್ಲ. ನಾವು ನಿರ್ವಹಿಸುತ್ತಿರುವ ಹುದ್ದೆಗೆ ಎಂದುಕೊಳ್ಳಬೇಕು. ಸತ್ಯವತಿಯೇ ಬೇರೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೇ ಬೇರೆ ಅಂದುಕೊಂಡಾಗ ಮಾತ್ರ ಸಮತೋಲನ ಸಾಧ್ಯ. ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸದಸ್ಯರು ಸಿಇಒ ವಿರುದ್ಧ ಕಿಡಿಕಾರುತ್ತಾರೆ.ಅವರು ಕಿಡಿ ಕಾರುವುದು ಸಿಇಒ ವಿರುದ್ಧವೇ ವಿನಾ ಸತ್ಯವತಿಯ ಮೇಲಲ್ಲ ಎನ್ನುವುದು ನಮ್ಮ ಗಮನದಲ್ಲಿರಬೇಕು. ನಾನು ಕಚೇರಿಗೆ ಬಂದಾಗ ಆ ಹುದ್ದೆಯ ವ್ಯಕ್ತಿಯೇ ವಿನಾ ನಾನು ನಾನಲ್ಲ. ನಾನು ನಾನಾಗಿರುವುದು ಮನೆಯಲ್ಲಿ ಮಾತ್ರ. ಅಲ್ಲಿ ನಾನು ಮಗಳು, ಅಮ್ಮ, ಸೊಸೆ, ಅಕ್ಕ, ತಂಗಿ ಎಲ್ಲಾ ಹೌದು. ಆದರೆ ಕಚೇರಿಯಲ್ಲಿರುವಾಗ ನಾನು ನಾನು ಹುದ್ದೆಯ ಮೇಲಿರುವವಳು ಅಷ್ಟೆ. ಅಲ್ಲಿ ಹುದ್ದೆ ಮುಖ್ಯವೇ ವಿನಾ ನಾನು ಮುಖ್ಯ ಅಲ್ಲ.ಮನೆಯ ಕೆಲಸ ಸಮಸ್ಯೆಯಲ್ಲ...

ಉನ್ನತ ಹುದ್ದೆಯಲ್ಲಿರುವ ಮಹಿಳೆ ಮನೆಯ ಕೆಲಸಗಳಿಗಾಗಿ ಆಲೋಚಿಸಬೇಕಾಗಿಲ್ಲ. ಯಾಕೆಂದರೆ ಮನೆಯ ಕೆಲಸ ಮಾಡಲು, ಅಡುಗೆ ಮಾಡಲು ಆಳುಗಳಿರುತ್ತಾರೆ. ಅದಕ್ಕೆ ಅದೊಂದು ದೊಡ್ಡ ಸಮಸ್ಯೆಯಲ್ಲ. ಆದರೆ ಮನೆ ಎಂದರೆ ಮನೆಯ ಕೆಲಸವಲ್ಲ. ಅದೊಂದು ಭಾವನೆ. ಮನುಷ್ಯ ಸಂಬಂಧ. ಮನೆಯವರಿಗಾಗಿ ಸಮಯವನ್ನು ಹೊಂದಿಸಿಕೊಳ್ಳುವುದೇ ಕಷ್ಟ. ಜವಾಬ್ದಾರಿಯ ಹುದ್ದೆಯಲ್ಲಿದ್ದಾಗ ಅದು ನಮ್ಮ ಎಲ್ಲ ಸಮಯವನ್ನು ತಿಂದು ಹಾಕುತ್ತದೆ.ಅದಕ್ಕೆ ಮನೆ ಮತ್ತು ಕೆಲಸ ಎರಡನ್ನೂ ನಿರ್ವಹಿಸುವುದು ಕಷ್ಟ. ಆದರೆ ನಾನು ಅದೃಷ್ಟವಂತೆ. ನಾವು ನಾಲ್ಕು ಮಂದಿ ಸಹೋದರಿಯರು. ಒಬ್ಬ ತಮ್ಮ. ನಮ್ಮ ತಂದೆ ವೈದ್ಯರು. ಮನೆಯಲ್ಲಿ ಮಕ್ಕಳು ಮನೆ ಕೆಲಸವನ್ನು ಕಲಿಯಬೇಕು ಎನ್ನುವುದಕ್ಕಿಂತಲೂ ಓದಬೇಕು. ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಏನನ್ನಾದರೂ ಸಾಧಿಸಬೇಕು ಎಂಬ ಭಾವನೆಯನ್ನು ಇಟ್ಟುಕೊಂಡು ನಮ್ಮನ್ನು ಬೆಳೆಸಿದರು. ಮನೆಯ ಕೆಲಸ ಇದ್ದೇ ಇರುತ್ತದೆ.ಆದರೆ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎನ್ನುವ ಭಾವನೆಯನ್ನು ನಮ್ಮಲ್ಲಿ ತುಂಬಿದರು. ಯಾವುದೇ ಪರಿಸ್ಥಿತಿ ಬಂದರೂ ಎದೆಗುಂದಬಾರದು ಎಂಬ ಧೈರ್ಯ ತುಂಬಿದರು. ಅದಕ್ಕೆ ನಾನು ಕಂಡು ಕೇಳರಿಯದ ದೆಹಲಿಗೆ ಉನ್ನತ ಶಿಕ್ಷಣಕ್ಕೆ ಒಬ್ಬಳೇ ಹೋದಾಗಲೂ ನನಗೆ ಭಯವಾಗಲಿಲ್ಲ. ನಾನು ಕೆಎಎಸ್ ಮಾಡಿ ಮೊದಲ ಬಾರಿಗೆ ಬೀದರ್‌ಗೆ ಹೋದಾಗ ಅಲ್ಲಿ ಕೋಮು ಗಲಭೆ ನಡೆಯುತ್ತಿತ್ತು. ಅದನ್ನು ನಿಯಂತ್ರಿಸುವಾಗಲೂ ಭಯ ನನ್ನ ಬಳಿ ಸುಳಿಯಲೇ ಇಲ್ಲ.ಸಮಯ ಕಡಿಮೆ, ಒತ್ತಡ ಜಾಸ್ತಿ


ಒಳ್ಳೆಯ ಗಂಡ, ಒಳ್ಳೆಯ ಅತ್ತೆ ಮಾವ, ತಂದೆ ತಾಯಿ ಎಲ್ಲ ಇದ್ದರೆ ಮಹಿಳೆಯರಿಗೆ ಕೆಲಸ ಮಾಡುವುದು ಸುಲಭ. ಮನೆಯ ಜಗತ್ತು ಒಳ್ಳೆಯದಾಗಿದ್ದರೆ ಮಹಿಳೆಯರ ಹೊರಗಿನ ಜಗತ್ತೂ ಚೆನ್ನಾಗಿಯೇ ಇರುತ್ತದೆ. ಕಿರಿಕಿರಿಯ ಗಂಡ, ಕುಂತಿದ್ದಕ್ಕೂ ನಿಂತಿದ್ದಕ್ಕೂ ಪ್ರಶ್ನೆ ಮಾಡುವ ಅತ್ತೆ ಮಾವ, ಅಪ್ಪ ಅಮ್ಮ ಇದ್ದರೆ ಮಹಿಳೆಯರು ತಮ್ಮ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಕಷ್ಟ.ಯಾಕೆಂದರೆ ಮನೆಯ ಜಗತ್ತು ಅವರ ಕೆಲಸದ ಜಾಗಕ್ಕೂ ಬಂದು ಬಿಡುತ್ತದೆ. ಮನೆಯ ಒತ್ತಡ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಉನ್ನತ ಹುದ್ದೆಯಲ್ಲಿರುವವರಿಗೆ ಸಮಯ ಕಡಿಮೆ. ಒತ್ತಡ ಜಾಸ್ತಿ. ಈ ಸ್ಥಿತಿಯನ್ನು ಮನೆಯವರೂ ಅರ್ಥ ಮಾಡಿಕೊಂಡರೆ ಚೆನ್ನ.ಕೆಲಸ ಮೊದಲು, ಕುಟುಂಬ ನಂತರ

ಯಾವುದೇ ಕೆಲಸ ಮಾಡುವಾಗ ಕೆಲಸ ಮೊದಲು. ಕುಟುಂಬ ನಂತರ. ಉನ್ನತ ಹುದ್ದೆಯಲ್ಲಿಯಂತೂ ಇದು ಅನಿವಾರ್ಯ. ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುವುದು ಕಷ್ಟ. ದಿನದ ಯಾವುದೇ ಸಮಯದಲ್ಲಾದರೂ ಕೆಲಸ ಧುತ್ತನೆ ಬಂದು ಬಿಡಬಹುದು. ಆದರೆ ಕೆಲಸದಲ್ಲಿರುವ ಮಹಿಳೆಯರು ಮನೆಗೆ ಹೋದ ಮೇಲೆ ಕೆಲಸದ ಒತ್ತಡವನ್ನು ಮರೆಯಬೇಕು. ನಿದ್ದೆಯಲ್ಲೂ ಕೆಲಸದ ವಿಚಾರವನ್ನೇ ಕನವರಿಸುವುದನ್ನು ಬಿಡಬೇಕು.ಮನೆಯ ಪ್ರಪಂಚವೇ ಬೇರೆ. ಅಲ್ಲಿನ ಬೇಕು ಬೇಡಗಳೇ ಬೇರೆ. ಅದಕ್ಕೆ ಬದ್ಧರಾಗಿಬೇಕು. ಕೆಲಸದ ಒತ್ತಡದಲ್ಲಿ ಪತಿ, ಮಕ್ಕಳು, ತಂದೆ ತಾಯಿಗಳ ನಿರೀಕ್ಷೆಯನ್ನು ಪೂರೈಸುವುದು ಕಷ್ಟ. ಕೌಟುಂಬಿಕ ಸಭೆ ಸಮಾರಂಭಗಳಿಗೆ ಹೋಗುವುದು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಕರೂ ತಪ್ಪು ತಿಳಿಯುವುದಿಲ್ಲ. ಯಾಕೆಂದರೆ ನಮ್ಮ ಹುದ್ದೆಯ ಜವಾಬ್ದಾರಿ ಅವರಿಗೂ ಗೊತ್ತಿರುತ್ತದೆ. ಅದಕ್ಕೆ ನಾನು ಬರಲಿಲ್ಲ ಎಂದು ಅವರು ಬೇಸರ ಮಾಡಿಕೊಳ್ಳುವುದಿಲ್ಲ.ಇಷ್ಟೆಲ್ಲಾ ಹೇಳಿದ ಮೇಲೂ ನನಗೆ ಅಂತ ಒಂದಿಷ್ಟು ಸಮಯ ಬೇಕು. ಮನರಂಜನೆ ಬೇಕು. ಸಾಮಾನ್ಯವಾಗಿ ಭಾನುವಾರ ಮಧ್ಯಾಹ್ನದ ನಂತರದ ಸಮಯ ಅದು ನನ್ನ ಸಮಯ. ಆ ಸಮಯವನ್ನು ನಾನು ಬೇರೆ ಯಾರಿಗೂ ನೀಡಲು ಬಯಸುವುದಿಲ್ಲ.

 

ನನ್ನ ಮನೆಯ ಮುಂದೆ ಒಳ್ಳೆಯ ಗಾರ್ಡನ್ ಇದೆ. ಗಾರ್ಡನಿಂಗ್ ಮಾಡುತ್ತೇನೆ. ಸಾವಯವ ಕೃಷಿ ನನ್ನ ಆಯ್ಕೆ. ಗಾರ್ಡನಿಂಗ್‌ನಲ್ಲಿಯೂ ಸಾವಯವವನ್ನೇ ಬಳಸುತ್ತೇನೆ. ಟಿವಿ ನೋಡೋದು ಕಡಿಮೆ. ಯಾವಾಗಲಾದರೂ ಒಳ್ಳೆಯ ಸಿನಿಮಾ ನೋಡುತ್ತೇನೆ.ಕ್ರೀಡೆ ನನ್ನ ಹವ್ಯಾಸ. ನಾನು ಬ್ಲ್ಯಾಕ್ ಬೆಲ್ಟ್ ಹೋಲ್ಡರ್. ಈಗ ಉನ್ನತ ಹುದ್ದೆಗೆ ಬಂದ ನಂತರ ಅದರ ಪ್ರಾಕ್ಟೀಸ್ ಕಡಿಮೆಯಾಗಿದೆ. ಆದರೂ ಸಮಯ ಸಿಕ್ಕಾಗಲೆಲ್ಲಾ ಅಭ್ಯಾಸ ಮಾಡುತ್ತೇನೆ. ಮನೆಯ ಮುಂದೆ ವಾಕಿಂಗ್ ಮಾಡುತ್ತೇನೆ. ಕುಕ್ಕರಹಳ್ಳಿ ಕೆರೆಗೂ ವಾಕಿಂಗ್ ಹೋಗ್ತೇನೆ. ಅಡುಗೆ ಮಾಡೋದು ಕೂಡ ನನಗೆ ಪ್ರೀತಿ. ಹೊಸ ರುಚಿ ಮಾಡೋದು ಖುಷಿ ಕೊಡತ್ತೆ.ಟೀಕೆಗಳಿಗೆ ಹೆದರಬಾರದು...

 ನನಗೆ ನನ್ನ ವೀಕ್‌ನೆಸ್ ಏನು ಮತ್ತು ಸ್ಟ್ರೆಗ್ತ್ ಏನು ಎನ್ನುವುದು ಗೊತ್ತು. ಯಶಸ್ವಿ ಮಹಿಳೆಯಾಗಬೇಕು ಎನ್ನುವವರು ಇದನ್ನು ಗೊತ್ತು ಮಾಡಿಕೊಳ್ಳಬೇಕು. ಟೀಕೆಗಳಿಗೆ ಹೆದರ ಬಾರದು. ಭಾವನೆಯನ್ನು ಕೆಲಸದೊಂದಿಗೆ ಮಿಕ್ಸ್ ಮಾಡಬಾರದು. ಒತ್ತಡ ಎಷ್ಟೇ ಇದ್ದರೂ ಯಾರೂ ಐಸಿಯುನಲ್ಲಿ ಇರುವುದಿಲ್ಲ.ಅವರನ್ನು ರಕ್ಷಿಸುವ ಕೆಲಸ ನಮ್ಮದಲ್ಲ. ಅಷ್ಟು ಅರ್ಜಂಟ್ ಕೂಡ ಇರುವುದಿಲ್ಲ. ಮಹಿಳೆಗೆ ಟೀಕೆ ಬರುವುದು ಸಹಜ. ಅದು ಸಹಜ ಎಂದುಕೊಂಡರೆ ಸಾಕಷ್ಟು ಸಮಸ್ಯೆಗಳು ಕಡಿಮೆಯಾಗುತ್ತದೆ. ಒತ್ತಡವೂ ಕಡಿಮೆಯಾಗುತ್ತದೆ. ವಿಲ್ ಪವರ್ ಇದ್ದರೆ ಎಲ್ಲವೂ ಸುಗಮವಾಗುತ್ತದೆ.ಇಷ್ಟೆಲ್ಲಾ ಹೇಳಿದ ಮೇಲೂ ನನಗೆ ನನ್ನ ತಂದೆಯೇ ಮಾರ್ಗದರ್ಶಿ. ನನ್ನ ಯಶಸ್ಸಿನ ಮೂಲ ಕಾರಣವೇ ಅವರು. ಅವರಿಗಾಗಿ ಒಂದಿಷ್ಟು ಸಮಯ ಮೀಸಲಿಡಬೇಕು ಎಂದು ಅನ್ನಿಸುತ್ತದೆ. ಆದರೆ ಅವರು ಯಾವಾಗಲೂ ನನಗಿಂತ ಬ್ಯುಸಿ. ಆದರೂ ಅಪ್ಪನಿಗಾಗಿ ಒಂದಿಷ್ಟು ಸಮಯ ಮಾಡಿಕೊಳ್ಳಲೇ ಬೇಕು.ನಿರೂಪಣೆ: ರವೀಂದ್ರ ಭಟ್ಟ

(ಆಡಳಿತ ಸೂತ್ರ ಹಿಡಿದ ಯಶಸ್ವಿ ಮಹಿಳೆಯರ ಮನದಾಳದ ಮಾತುಗಳಿಗೆ ಭೂಮಿಕೆಯಾಗಿರುವ ಈ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತದೆ).

ಪ್ರತಿಕ್ರಿಯಿಸಿ (+)