ಸೋಮವಾರ, ಮಾರ್ಚ್ 8, 2021
25 °C

ಕೆಲಸವೇ ಇಲ್ಲದ ಸಂತಸವೆಲ್ಲಿ?

ಪೃಥ್ವಿರಾಜ್ ಎಂ.ಎಚ್. Updated:

ಅಕ್ಷರ ಗಾತ್ರ : | |

ಕೆಲಸವೇ ಇಲ್ಲದ ಸಂತಸವೆಲ್ಲಿ?

ಸ್ವಾತಿ ಬೇಡೆಕರ್

ಗಡ್ಡ ಮತ್ತು ಮೀಸೆ ಬಂದರೆ ಹುಡುಗರು ಹೇಗೆ ಸಹಜವಾಗೇ ಇರುತ್ತಾರೋ ಹಾಗೆಯೇ ಹುಡುಗಿಯರು ಕೂಡ ತಮ್ಮ ಋತುಚಕ್ರದ ಸಮಯದಲ್ಲಿ ಸಹಜವಾಗೇ ಇರಬೇಕು. ಹಾಗೇ, ಅದರ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು ಎನ್ನುತ್ತಾರೆ ಸ್ವಾತಿ ಬೇಡೆಕರ್.

ಗುಜರಾತ್ ಮೂಲದ ಸ್ವಾತಿ ಬೇಡೆಕರ್ ‘ವಾತ್ಸಲ್ಯ’ ಎಂಬ ಫೌಂಡೇಶನ್ ಆರಂಭಿಸಿ ಗ್ರಾಮೀಣ ಹೆಣ್ಣು ಮಕ್ಕಳಿಗೆ ಅತಿ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವಿತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.‘ಸಖಿ’ ಎಂಬ ಬ್ರ್ಯಾಂಡ್‌ನ ಈ ನ್ಯಾಪ್‌ಕಿನ್ ಗುಜರಾತ್ ರಾಜ್ಯದೆಲ್ಲೆಡೆ ಬಹು ಜನಪ್ರಿಯವಾಗಿದೆ. ತಮ್ಮ ಫೌಂಡೇಶನ್ ಮೂಲಕ ಕಾರ್ಖಾನೆ ಆರಂಭಿಸಿ ಪರಿಸರಸ್ನೇಹಿ ಮತ್ತು ತುಂಬಾ ಆರೋಗ್ಯಯುತ  ಆಗಿರುವ ನ್ಯಾಪ್‌ಕಿನ್‌ಗಳನ್ನು ತಯಾರು ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಮೂಲಕ ಬಡ ಹೆಣ್ಣು

ಮಕ್ಕಳಿಗೆ ನ್ಯಾಪ್‌ಕಿನ್‌ವಿತರಣೆ ಮಾಡುತ್ತಿದ್ದಾರೆ.ಸ್ವಾತಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆಯನ್ನು ಆರಂಭಿಸಿದ ಸ್ವಾತಿ, ಹಳ್ಳಿ ಜನರ ಬದುಕಿನ ಕಷ್ಟಗಳನ್ನು ಅರಿತರು. ಅದರಲ್ಲೂ ಹೆಣ್ಣು ಮಕ್ಕಳ ಶೋಷಣೆಯ ಬದುಕು ಕಂಡು ಮರುಗಿದವರು. ಋತುಚಕ್ರದ ವೇಳೆಯಲ್ಲಿ ಐದು ದಿನಗಳ ಕಾಲ ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿರಲಿಲ್ಲ.ಆ ಸಮಯದಲ್ಲಿ ಹಳೆಯ ಬಟ್ಟೆ ಉಪಯೋಗಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಅಶುದ್ಧ ಬಟ್ಟೆಯನ್ನು ಉಪಯೋಗಿಸಿ ಕೆಲ ಹೆಣ್ಣು ಮಕ್ಕಳು ಮೃತಪಟ್ಟಿದ್ದನ್ನು ಕಣ್ಣಾರೆ ಕಂಡಿರುವುದಾಗಿ ಸ್ವಾತಿ ಹೇಳುತ್ತಾರೆ.ಈ ಹಂತದಲ್ಲಿ ಸ್ವಾತಿ, ಪಾಠ ಮಾಡಿ ಅರಿವು ಮೂಡಿಸುವುದಕ್ಕಿಂತ ಈ ಬಡ ಹೆಣ್ಣು ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಆಲೋಚಿಸಿದರು. ಸ್ವಾತಿ ಅವರ ಪತಿ ವ್ಯಾಪಾರ ಮಾಡುತ್ತಿದ್ದರಿಂದ ಅವರ ಬಳಿ ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕೆ ಬಗ್ಗೆ ಚರ್ಚಿಸಿದರು. ಇದಕ್ಕೆ ಸ್ವಾತಿ ಪತಿ ಸಮ್ಮತಿಸಿ ಬಂಡವಾಳ ಹೂಡಿದರು. ಇಂದು ಗುಜರಾತ್‌ನ ನಾಲ್ಕು ಭಾಗದಲ್ಲಿ ‘ಸಖಿ’ ನ್ಯಾಪ್‌ಕಿನ್‌ಗಳನ್ನು ತಯಾರು ಮಾಡಲಾಗುತ್ತಿದೆ. ‘ಒಂದು ನ್ಯಾಪ್‌ಕಿನ್ ಬೆಲೆ ಕೇವಲ ಒಂದು ರೂಪಾಯಿ’ ಎನ್ನುತ್ತಾರೆ ಸ್ವಾತಿ. ನಿಜಕ್ಕೂ ಇವರ ಸೇವೆ ಶ್ಲಾಘನೀಯ.***

ಕುಸುಮಾ ಭಂಡಾರಿ


ಶಿಕ್ಷಣ ವ್ಯವಸ್ಥೆಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ದೇಶದ ಗಮನ ಸೆಳೆದವರು ಕುಸುಮಾ ಭಂಡಾರಿ. ಮಕ್ಕಳಲ್ಲಿ ಕಲಿಯುವ ಆಸಕ್ತಿಯನ್ನು ಮೂಡಿಸುವ ಸಲುವಾಗಿ ಶಿಕ್ಷಣ ವಲಯಕ್ಕೆ ಹಲವಾರು ಪರಿಕಲ್ಪನೆಗಳನ್ನು ನೀಡುವ ಮೂಲಕ ಕುಸುಮಾ ಭಂಡಾರಿ ಅತಿ ಕಿರಿಯ ವಯಸ್ಸಿಗೆ ಶಿಕ್ಷಣ ತಜ್ಞೆ ಎಂದೇ ಗುರುತಿಸಿಕೊಂಡಿದ್ದಾರೆ.

ಕುಸುಮಾ ಮೂಲತಃ ಪಶ್ಚಿಮ ಬಂಗಾಳದವರು. ಪದವಿ ಶಿಕ್ಷಣವನ್ನು ಪೂರೈಸಿದ ಬಳಿಕ ಮಾಂಟೆಸೆರಿ ಡಿಪ್ಲೊಮಾ ಕೋರ್ಸ್ ಪೂರೈಸಿ ಕೋಲ್ಕತ್ತಾದಲ್ಲಿ ‘ಬಾಲನಿಲಯ’ ಎಂಬ ಮಾಂಟೆಸೆರಿ ಆರಂಭಿಸಿದರು. ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಬೆಳೆಸಲು ಆಟದ ಮೂಲಕ ಶಿಕ್ಷಣ ಕೊಡುವ ವ್ಯವಸ್ಥೆಯನ್ನು ಪರಿಚಯಿಸಿದರು. ಈ ಶಾಲೆಯ ಕೊಠಡಿಗಳಲ್ಲಿ ಬ್ಲಾಕ್ ಬೋರ್ಡ್ ಬದಲಾಗಿ ಆಟಿಕೆಗಳೇ ತುಂಬಿರುವುದು ವಿಶೇಷ.ಮಕ್ಕಳಿಗೆ ವಿವಿಧ ಆಟಿಕೆಗಳ ಮೂಲಕ ಬಂಗಾಳಿ, ಇಂಗ್ಲಿಷ್, ಗಣಿತ ಮತ್ತು ವಿಜ್ಞಾನವನ್ನು ಕಲಿಸಲಾಗುತ್ತದೆ. ಆಟಿಕೆಗಳ ಮೂಲಕ ಮಕ್ಕಳು ಕೂಡ ಕ್ರಿಯಾಶೀಲರಾಗಿ ಕಲಿಕೆ ಆರಂಭಿಸುತ್ತಾರೆ ಎನ್ನುತ್ತಾರೆ ಕುಸುಮಾ.ಕೆಲವು ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಬೆತ್ತ ಹಿಡಿದು ಪಾಠ ಮಾಡುತ್ತಾರೆ. ಇದರಿಂದ ಮಕ್ಕಳು ಭಯಭೀತರಾಗಿ ಕಲಿಕೆಯ ಮೇಲೆ ಆಸಕ್ತಿಯನ್ನು ಬೆಳೆಸಿಕೊಳ್ಳದೇ ಶಿಕ್ಷಕರನ್ನು ಕಂಡರೆ ಭಯಪಡುತ್ತಾರೆ. ಇದು ಎಳೆಯ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎನ್ನುತ್ತಾರೆ ಕುಸುಮಾ. ಹಾಗಾಗಿ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ಕೊಡುವುದು ಉತ್ತಮ ಎಂಬುದು ಅವರ ಅಭಿಪ್ರಾಯ.ಕೋಲ್ಕತ್ತಾದಲ್ಲಿ ಹಲವಾರು ಶಾಖೆಗಳನ್ನು ಆರಂಭಿಸಿರುವ ಕುಸುಮಾ ಆರ್ಥಿಕವಾಗಿ ದುರ್ಬಲರು ಮತ್ತು ಕೊಳೆಗೇರಿ ಮಕ್ಕಳಿಗಾಗಿ ಶೇ 30ರಷ್ಟು ಸ್ಥಾನಗಳನ್ನುಕಾಯ್ದಿರಿಸಿದ್ದಾರೆ. ಅವರಿಗೆ ಉಚಿತವಾಗಿ ಶಿಕ್ಷಣ ಕೊಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಇವರ ಪ್ರಯೋಗಾತ್ಮಕ ಶಿಕ್ಷಣ ಸೇವೆಗೆ ರಾಷ್ಟ್ರಪತಿ ಪದಕ ಸೇರಿದಂತೆ ಹಲವು ರಾಷ್ಟ್ರೀಯ ಪುರಸ್ಕಾರಗಳು ಸಂದಿವೆ. ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸದೇ ಕಡ್ಡಾಯ ಮತ್ತು ಸಮಾನ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂಬುದು ಕುಸುಮಾ ಒತ್ತಾಸೆ.***

ಬೃಂದಾ ನಾಗರಾಜನ್


ಬೆಂಗಳೂರಿನ ಬೃಂದಾ ನಾಗರಾಜನ್ ಅವರದ್ದು ವಿಶಿಷ್ಟ ಸಾಧನೆಯ ಕಥೆ. ಎಂಜಿನಿಯರಿಂಗ್ ಪದವಿ ಪಡೆದು ಖಾಸಗಿ ಬ್ಯಾಂಕ್‌ವೊಂದರಲ್ಲಿ ದತ್ತಾಂಶ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತ ಕೈತುಂಬಾ ಸಂಬಳ ಪಡೆಯುತ್ತಿದ್ದರೂ ಅದ್ಯಾಕೋ ಕುಗ್ರಾಮಗಳ ಜನರಲ್ಲಿ ಆರೋಗ್ಯ, ನೈರ್ಮಲ್ಯದ ಕುರಿತಾಗಿ ಅರಿವು ಮೂಡಿಸುವ ಹಂಬಲ ಅವರ ಮನದಾಳದಲ್ಲಿತ್ತು. ಹಾಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಮೀಣಾಭಿವೃದ್ಧಿ ಫೆಲೋಶಿಪ್ ಪಡೆದು ಬೃಂದಾ ಹಳ್ಳಿಗಳತ್ತ ಮುಖ ಮಾಡಿದರು.

ಬೃಂದಾ ಫೆಲೋಶಿಪ್ ಪಡೆದು ನೇರವಾಗಿ ಹೊರಟ್ಟಿದ್ದು ಉತ್ತರಾಖಂಡ ರಾಜ್ಯಕ್ಕೆ! ಇಲ್ಲಿನ ಬೆಟ್ಟದ ತಪ್ಪಲಿನಲ್ಲಿರುವ ನಾಲ್ಕೈದು ಕುಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ವಾಸ ಮಾಡಲು ನಿರ್ಧರಿಸಿದರು.ಮೊದಲು ಆ ಹಳ್ಳಿ ಜನರ ಜೀವನ ಕ್ರಮದ ಬಗ್ಗೆ ಅವಲೋಕನ ಮಾಡಿದರು. ಹಸುವಿನ ಕೊಟ್ಟಿಗೆಯಲ್ಲಿ ಬದುಕುವುದು, ಹಸುವಿನ ಮೂತ್ರ ಸೇವನೆ ಮಾಡುವುದು, ವಾರ ಅಥವಾ ತಿಂಗಳುಗಟ್ಟಲೆ ಸ್ನಾನ ಮಾಡದೇ ಇರುವುದು, ಮಹಿಳೆಯರು ಋತುಚಕ್ರದ ಸಮಯದಲ್ಲಿ ವಾರಗಟ್ಟಲೆ ಮನೆಯ ಹೊರಗೆ ವಾಸ ಮಾಡುವುದು, ಮಕ್ಕಳಿಗೆ ಜ್ವರ ಬಂದರೆ ಪೂಜೆ ಮಾಡಿಸುವುದು ಅಥವಾ ಬರೆ ಹಾಕಿಸುವುದನ್ನು ಕಣ್ಣಾರೆ ಕಂಡು ಬೃಂದಾ ಮರುಗಿದ್ದರು.ಇಂತಹ ಕಂದಾಚಾರ, ಮೂಢನಂಬಿಕೆ ಮತ್ತು ಮೌಢ್ಯ ಆಚರಣೆಗಳಿಂದ ಈ ಜನರನ್ನು ಹೊರ ತಂದು ಅವರಲ್ಲಿ ಅರಿವು ಮೂಡಿಸುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದರು. ಅಲ್ಲಿನ ಸಮಸ್ಯೆ ಮತ್ತು ಜನರ ಮನಸ್ಥಿತಿಯನ್ನು ಅರಿತ ಬೃಂದಾ ಆ ಜನರ ಜೊತೆ ಬೆರೆಯುವ ಕೆಲಸ ಮಾಡಿದರು. ಅವರೊಟ್ಟಿಗೆ ಕೂಲಿ ಕೆಲಸ ಮಾಡಿದರು.ಅವರ ಉಡುಪುಗಳನ್ನು ತೊಟ್ಟರು, ಅವರು ಮಾಡುತ್ತಿದ್ದ ಅಡುಗೆ ಕಲಿತರು. ಅವರ ಜೊತೆ ವಾಸ ಮಾಡಿ ಆ ಜನರ ವಿಶ್ವಾಸ, ಪ್ರೀತಿ ಗಳಿಸಿದರು. ನಂತರ ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾಗಿ ಕಾರ್ಯಾಗಾರಗಳನ್ನು ಏರ್ಪಡಿಸಿ ಜನರಲ್ಲಿ ಅರಿವು ಮೂಡಿಸಿದರು. ಸ್ಥಳೀಯ ಸರ್ಕಾರಗಳ ಸಹಾಯದಿಂದ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಮಾದರಿ ಹಳ್ಳಿಗಳನ್ನಾಗಿ ರೂಪಿಸಿದ್ದಾರೆ. ಹೀಗೆ ಆ ಭಾಗದಲ್ಲಿ ಬೃಂದಾ ತಮ್ಮ ಗ್ರಾಮೀಣ ಸೇವೆಯನ್ನು ಮುಂದುವರೆಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.