ಕೆಲಸ ಕಾಯಂ, ಗರಿಷ್ಠ ವೇತನಕ್ಕೆ ಆಗ್ರಹ

7

ಕೆಲಸ ಕಾಯಂ, ಗರಿಷ್ಠ ವೇತನಕ್ಕೆ ಆಗ್ರಹ

Published:
Updated:

ಬಾಗಲಕೋಟೆ: ಜಿಲ್ಲೆಯ ಗ್ರಾ.ಪಂ., ಅಂಗನವಾಡಿ ಮತ್ತು ಬಿಸಿಯೂಟ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನವನಗರದ ಹಳೆ ಡಿಸಿ ಕಚೇರಿಯಿಂದ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಪಿ. ರುದ್ರಗೌಡ ಅವರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಿದರು. ಪ್ರತಿ ತಿಂಗಳ ಮೊದಲ ವಾರದಲ್ಲಿ ಗ್ರಾ.ಪಂ., ಅಂಗನವಾಡಿ, ಬಿಸಿಯೂಟ ನೌಕರರಿಗೆ ವೇತನ ನೀಡಬೇಕು. ಪ್ರತಿಭಟನೆ, ಮೆರವಣಿಗೆ, ಸಭೆ ನಿಗ್ರಹಿಸುವ 2009ರ ಕಾನೂನು ರದ್ದುಗೊಳಿಸಬೇಕು.ಅಂಗನವಾಡಿ ಕೇಂದ್ರಗಳ ಖಾಸಗೀಕರಣ, ಶಾಲೆಗಳ ಬಿಸಿಯೂಟ ಯೋಜನೆಯ ಹೊರಗುತ್ತಿಗೆ ಕೈಬಿಡಬೇಕು. ವಸತಿ ರಹಿತ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ವಸತಿ ಕಲ್ಪಿಸಿ ಮನೆ ಬಾಡಿಗೆ ದರ ಹಾಗೂ ಮುಳುಗಡೆ ಸಂತ್ರಸ್ತ ಅಂಗನವಾಡಿ ಕಾರ್ಯಕರ್ತರಿಗೆ ನಿವೇಶನ ನೀಡಬೇಕು.ಹಾಜರಾತಿ ಕಡಿಮೆ ನೆಪದಿಂದ ಅಡುಗೆ ಸಿಬ್ಬಂದಿಯನ್ನು ಬಿಡುವ ಪ್ರಕ್ರಿಯೆ ನಿಲ್ಲಬೇಕು. ಬೆಲೆ ಏರಿಕೆ ನಿಯಂತ್ರಿಸಿ ಎಲ್ಲ ಕುಟುಂಬಗಳಿಗೆ ಪಡಿತರ ಸೌಲಭ್ಯ ಒದಗಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗೆ ಮತ್ತು ವಿಮಾ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಿರುವವರನ್ನು ಫಲಾನುಭವಿ­ಗಳನ್ನಾಗಿ ಪರಿಗಣಿಸಬೇಕು.ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್‌ 2 ಹಾಗೂ ಲೆಕ್ಕ ಸಹಾಯಕ ಹುದ್ದೆಗೆ ಕೂಡಲೇ ಭರ್ತಿ ಮಾಡಬೇಕು, ಕಾರ್ಯದರ್ಶಿ –2 ಹುದ್ದೆಗೆ ನೇಮಕಾತಿಯನ್ನು ತಿದ್ದುಪಡಿ ಮಾಡಿ 100ರಷ್ಟು ಮೀಸಲಾತಿ ನೀಡಬೇಕು. ಬಿಸಿಯೂಟ ನೌಕರರ ಸಂಘದ ರೇಖಾ ವಡಗೇರಿ, ಪಿ.ಎಂ. ಇಂಗಳಗಿ, ಆರ್‌.ಕೆ. ಬೆಳ್ಳುಬ್ಬಿ, ಸಿದ್ದಮ್ಮ ಕಲ್ಗುಡಿ, ಸುನಂದಾ ಮೋಪಗಾರ, ಸುರೇಖಾ ಪ್ರಧಾನಿ, ಕಸ್ತೂರಿ ಗುಣೋಜಿ, ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಎಂ.ಜಿ. ಸಮೀರ, ಪ್ರಧಾನ ಕಾರ್ಯದರ್ಶಿ ಎ.ಎಸ್‌. ಮೇಳಿ, ಬಿ.ಎಂ. ಬಾಳಿಕಾತಿ, ಆರ್‌.ಎ. ಅಕ್ಕೋಜಿ, ಎ.ಎಂ. ಯಡಹಳ್ಳಿ, ಐ.ಎನ್‌. ಹುದ್ದಾರ, ಅಂಗನಾಡಿ ನೌಕರರ ಸಂಘದ ಎಚ್‌.ಕೆ. ದಾಸರ, ಬಿ. ದೇಶಪಾಂಡೆ, ಅಕ್ಷರ ದಾಸೋಹದ ಸಿದ್ದಪ್ಪ ಯರಗಟ್ಟಿ, ಎಂ.ಬಿ. ನಾಡಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry