ಕೆಲಸ ನೀಡಲು ಆಗ್ರಹಿಸಿ ಪ್ರತಿಭಟನೆ

7

ಕೆಲಸ ನೀಡಲು ಆಗ್ರಹಿಸಿ ಪ್ರತಿಭಟನೆ

Published:
Updated:

ಲಕ್ಷ್ಮೇಶ್ವರ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವವರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಸಮೀಪದ ಬಟ್ಟೂರು ಗ್ರಾಮದ ನರೇಗಾ ಕೂಲಿಕಾರರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕಳೆದ ಮೂರು ವರ್ಷಗಳಿಂದ ಜನರಿಗೆ ಕೆಲಸ ನೀಡಿಲ್ಲ. ಹೀಗಾಗಿ ಕೂಲಿ ಕಾರ್ಮಿಕರು ಕೆಲಸದಿಂದ ವಂಚಿತರಾಗಿದ್ದು ಬಹಳಷ್ಟು ಮಂದಿ ಕೆಲಸ ಅರಸಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ. ಅಲ್ಲದೆ ಈ ವರ್ಷ ಭೀಕರ ಬರಗಾಲ ಇದ್ದು ಜನತೆ ಕೆಲಸ ಇಲ್ಲದೆ ಕಂಗಾಲಾಗಿದ್ದಾರೆ.

 

ಆದರೆ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರಿಗೆ ಕೆಲಸ ನೀಡುತ್ತಿಲ್ಲ ಎಂದು ದೊಡ್ಡಬಸಪ್ಪ ಕರಿಗಾರ, ಸೋಮಣ್ಣ ದೇವರಮನಿ, ಷಣ್ಮುಖ ಗದ್ದಿ, ಬಸವರಾಜ ಹಡಪದ, ಮಲ್ಲನಗೌಡ ಪಾಟೀಲ ಮಂಜುನಾಥ ಗದ್ದಿ, ಮೈಲಾರೆಪ್ಪ ಗದ್ದಿ, ಸಿದ್ದಪ್ಪ ಬೆಟಗೇರಿ, ನಿಂಗಪ್ಪ ದಮಾನಿ, ಯಲ್ಲಪ್ಪ ಸಾವಿರಕುರಿ, ಬಸವರಾಜ ಹೊಳಲಾಪುರ ಸೇರಿದಂತೆ ಮತ್ತಿತರರು ಆರೋಪಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಾಲತೇಶ ಹೊಳಲಾಪುರ, ದ್ಯಾಮವ್ವ ತಳವಾರ ಅವರು ಉದ್ಯೋಗ ನೀಡುವಂತೆ ಕೂಲಿ ಕಾರ್ಮಿಕರು ಮನವಿ ಮಾಡಿದ್ದರೂ ಪಂಚಾಯಿತಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೂಲಿಕಾರರಿಗೆ ಕೆಲಸ ಮಾಡಿಸುವ ಬದಲು ಜೆಸಿಬಿಯಿಂದ ಕಾಮಗಾರಿ ಮಾಡಿಸಿ ಬಿಲ್ ತೆಗೆದಿದ್ದಾರೆ ಎಂದು ಆರೋಪಿಸಿದರು.ಪಿಡಿಒ, ಕಾರ್ಯದರ್ಶಿ ಹಾಗೂ ಕ್ಲಾರ್ಕ್ ಪಂಚಾಯಿತಿ ಯಲ್ಲಿ ಇರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು  ಕಠಿಣ ಕ್ರಮಕೈಗೊಳ್ಳಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಕೇವಲ ಹೆಸರಿಗೆ ಮಾತ್ರ ಜಾಬ್‌ಕಾರ್ಡ್ ಮಾಡಲಾಗಿದ್ದು ಬಹುತೇಕರ ಜಾಬ್‌ಕಾರ್ಡ್‌ನಲ್ಲಿ ಪಂಚಾಯಿತಿ ಉದ್ಯೋಗ ನೀಡಿರುವ ಬಗ್ಗೆ ದಾಖಲೆ ಇಲ್ಲ ಎಂದು ದೂರಿದರು. ಇನ್ನು ಮೂರು ದಿನದಲ್ಲಿ ಕೆಲಸ ನೀಡದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry