ಕೆಲಸ ಸಂಬಳಕ್ಕಷ್ಟೇ ಅಲ್ಲ...

7

ಕೆಲಸ ಸಂಬಳಕ್ಕಷ್ಟೇ ಅಲ್ಲ...

Published:
Updated:

ಕಚೇರಿ ಹಾಗೂ ಕುಟುಂಬ ಎರಡೂ ನನಗೆ ಮಹತ್ವದ್ದು. ಕೇವಲ ಕಚೇರಿಯಲ್ಲಿ ಅಷ್ಟೇ ಅಲ್ಲ, ಮನೆಯ ಜವಾಬ್ದಾರಿ ಕೂಡ ನನ್ನ ಮೇಲಿದೆ. ಎರಡು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗ ನನಗಿದ್ದಾರೆ. ಪತಿ 13 ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ಮಕ್ಕಳೆಲ್ಲರೂ ಈಗ ದೊಡ್ಡವರಾಗಿದ್ದಾರೆ. ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಅವರೆಲ್ಲರೂ ಈಗ ಸ್ವತಂತ್ರವಾಗಿ ಜೀವನ ನಿಭಾಯಿಸುವಷ್ಟು ಬೆಳೆದುಬಿಟ್ಟಿದ್ದಾರೆ.ಒಬ್ಬ ಮಗಳಿಗೆ ಮದುವೆ ಮಾಡಿದ್ದು, ಇನ್ನೊಬ್ಬ ಮಗಳು ನನಗೆ ಜೊತೆಗಿದ್ದಾಳೆ. ಮಗ ಖಾಸಗಿ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ನನಗೆ ಸಮಯ ಸಿಕ್ಕಿದಾಗಲೆಲ್ಲ ಮಕ್ಕಳ ಜೊತೆ ಕಳೆಯುತ್ತೇನೆ. ನನ್ನ ಕೆಲಸದ ಒತ್ತಡವನ್ನು ಮಕ್ಕಳು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಹೀಗಾಗಿ ನನಗೆ ಯಾವತ್ತೂ ಕಚೇರಿ ಕೆಲಸ ಹಾಗೂ ಕುಟುಂಬದ ನಡುವೆ ಅಂತರ ಕಾಣಲಿಲ್ಲ.ಕಚೇರಿಗೆ ಬಂದ ಮೇಲೆ ಯಾವತ್ತೂ ಕುಟುಂಬದ ಬಗ್ಗೆ ಚಿಂತಿಸಿದ್ದೇ ಇಲ್ಲ. ಕೆಲಸದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡು ಬಿಡುತ್ತೇನೆ. ನೂರಕ್ಕೆ ನೂರರಷ್ಟು ಕೆಲಸದಲ್ಲಿ ಮುಳುಗಿ ಹೋಗಿಬಿಡುತ್ತೇನೆ. ಕಚೇರಿ ಕೆಲಸ ಮುಗಿಸಿ ಹೋದ ಮೇಲೆ ಕುಟುಂಬದ ಕಡೆ ಸಂಪೂರ್ಣವಾಗಿ ಗಮನ ನೀಡುತ್ತೇನೆ. ಕಚೇರಿ ಕೆಲಸವನ್ನು ಮನೆಯಲ್ಲಿ ಮಾಡುವುದಿಲ್ಲ. ಮನೆಯ ಸಮಯವನ್ನು ಸಂಪೂರ್ಣವಾಗಿ ಮಕ್ಕಳಿಗಾಗಿಯೇ ನೀಡುತ್ತೇನೆ.ದಿನದಲ್ಲಿ ಇಪ್ಪತ್ನಾಲ್ಕೇ ಗಂಟೆಗಳು

ಕುಟುಂಬದ ವಿಷಯದಲ್ಲಿ ನಾನು ಅದೃಷ್ಟವಂತಳೆ. ನನ್ನ ಕಚೇರಿ ಕೆಲಸದ ಬಗ್ಗೆ ಮಕ್ಕಳು ಅರ್ಥೈಸಿಕೊಂಡಿದ್ದಾರೆ. ಯಾವತ್ತೂ ನನ್ನ ಮೇಲೆ ಒತ್ತಡ ಹೇರಲ್ಲ. ವಿಶೇಷವಾಗಿ ಕಾಲೇಜುಗಳ ಪರೀಕ್ಷಾ ಸಮಯದಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಈ ವಿಷಯ ಮಕ್ಕಳಿಗೂ ತಿಳಿದಿರುತ್ತದೆ. ಹೀಗಾಗಿ ನಾನು ನಿರಾಳವಾಗಿ ಕೆಲಸದಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ.ಎಲ್ಲರಿಗೂ ಒಂದು ದಿನದಲ್ಲಿ 24 ಗಂಟೆಗಳೇ ಇರುವುದು. ಇದನ್ನು ಹೇಗೆ ಹಂಚುತ್ತೇವೆ ಎನ್ನುವುದು ಮುಖ್ಯ. ಕಚೇರಿಯ ಸಮಯಕ್ಕೆ ಸರಿದೂಗಿಸಿಕೊಂಡು ಎಲ್ಲ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಹಾಕಿಕೊಳ್ಳುತ್ತೇನೆ. ಅದರಂತೆ ನಡೆದುಕೊಳ್ಳುತ್ತೇನೆ. ನಮಗಿರುವ ಸಮಯವನ್ನು ಸೂಕ್ತವಾಗಿ ಹಂಚಿಕೆ ಮಾಡಿಕೊಂಡು, ಕುಟುಂಬಕ್ಕೂ ಸಮಯ ನೀಡುತ್ತೇನೆ. ಕೆಲಸದ ದಿನಗಳಂದು ನನ್ನ ಮೊದಲ ಆದ್ಯತೆ ಕಚೇರಿಗೆ. ಇನ್ನುಳಿದಂತೆ ಭಾನುವಾರ ಹಾಗೂ ರಜಾದಿನಗಳನ್ನು ಸಂಪೂರ್ಣವಾಗಿ ಕುಟುಂಬಕ್ಕೆ ಮೀಸಲು ಇಡುತ್ತೇನೆ. ಈ ಕಾರಣಕ್ಕಾಗಿ ನನ್ನ ಸಹೋದ್ಯೋಗಿಗಳಿಗೆ ಭಾನುವಾರ ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದಂತೆ ಸೂಚಿಸುತ್ತೇನೆ.ಒಂದು ಹಂತದಲ್ಲಿ ಭಾನುವಾರ ಯಾರನ್ನೂ ನಾನು ಮನೆಗೆ ಕರೆಯುವುದಿಲ್ಲ. ವಾರದಲ್ಲಿ ಒಂದೇ ದಿನ ರಜೆಯಂತು ಸಿಗುವುದು, ಅದನ್ನು ಮಕ್ಕಳೊಂದಿಗೆ ಕಳೆಯಲು ಬಯಸುತ್ತೇನೆ. ಈ ಸಮಯದಲ್ಲಿ ಕುಟುಂಬದ ಸದಸ್ಯರ ಜೊತೆ ಊರು ಸುತ್ತಾಡಲು ಸಹ ಹೋಗುತ್ತೇನೆ.  ಕುಟುಂಬದ  ಕಾರ್ಯಕ್ರಮಗಳಿಗೆ ಹಾಜರಾಗುವುದು ತುಂಬಾ ಅಪರೂಪ. ರಜೆ ಇದ್ದರೆ ಅಥವಾ ನನ್ನ ಮನೆಗೆ ತೀರ ಹತ್ತಿರದಲ್ಲಿ ಇದ್ದರೆ ಪಾಲ್ಗೊಳ್ಳಲು ಪ್ರಯತ್ನಿಸುತ್ತೇನೆ. ಬಹಳಷ್ಟು ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ನಡೆಯುವ ನಾಮಕರಣ, ಮದುವೆ, ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ತೀರ ಕಡಿಮೆ.ಇಂತಹ ಕಾರ್ಯಕ್ರಮಗಳಿಗೆ ಮಗಳನ್ನೋ ಅಥವಾ ಮಗನನ್ನೋ, ಇಲ್ಲದಿದ್ದರೆ ಕುಟುಂಬದ ಇತರೆ ಸದಸ್ಯರನ್ನು ಕಳುಹಿಸಿಕೊಡುತ್ತೇನೆ. ಆಹ್ವಾನಿಸಲು ಬರುವವರಿಗೂ ನನ್ನ ಪರಿಸ್ಥಿತಿಯ ಅನಿವಾರ್ಯತೆ ತಿಳಿದಿರುತ್ತದೆ. ಅದಕ್ಕೆ ನಾನು ನಿವೃತ್ತಿಯಾದ ಮೇಲೆ ನಿಮ್ಮೆಲ್ಲರ ಮನೆಗಳಿಗೆ, ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುವೆ ಎಂದು ಹೇಳಿ ಸಮಾಧಾನ ಪಡಿಸುತ್ತೇನೆ.ನನಗಾಗಿ ನನ್ನ ಸಮಯ

 ನನಗಾಗಿ ಸಮಯ ಹೊಂದಿಸಿಕೊಳ್ಳುವುದು ತುಂಬಾ ಕಷ್ಟ. ಆದರೂ ಪ್ರಯತ್ನಿಸುತ್ತಿರುತ್ತೇನೆ. ನನ್ನ ದಿನಚರಿ ಆರಂಭವಾಗುವುದು ಬೆಳಿಗ್ಗೆ 4.30ಕ್ಕೆ. ಅರ್ಧ ಗಂಟೆ ಧ್ಯಾನ ಮಾಡುತ್ತೇನೆ (ಮುಂಚೆ ಪ್ರಾಣಾಯಾಮ ಮಾಡುತ್ತಿದ್ದೆ ತಜ್ಞರ ಸಲಹೆ ಮೇರೆಗೆ ಈಗ ಮಾಡುತ್ತಿಲ್ಲ). ನಂತರ ರೇಡಿಯೊ ಕೇಳುವ ಹವ್ಯಾಸ ಇದೆ.

 

ಎಷ್ಟೇ ಒತ್ತಡ ಇದ್ದರೂ ಬೆಳಿಗ್ಗೆ ರೇಡಿಯೊ ಕೇಳುವುದನ್ನು ಮಾತ್ರ ಬಿಟ್ಟಿಲ್ಲ. ಕಚೇರಿ ಕೆಲಸದ ನಿಮಿತ್ತ ಪರಸ್ಥಳಗಳಿಗೆ ಪ್ರಯಾಣ ಮಾಡಬೇಕಾದ ಸಂದರ್ಭದಲ್ಲಿ ಸಂಗೀತ ಕೇಳುತ್ತೇನೆ. ಇತ್ತೀಚೆಗೆ ಆಧ್ಯಾತ್ಮದೆಡೆ ಹೆಚ್ಚು ಒಲವು ಮೂಡುತ್ತಿದೆ. ರಾಮಕೃಷ್ಣಾಶ್ರಮಕ್ಕೆ ಆಗಾಗ ಭೇಟಿ ನೀಡುತ್ತೇನೆ.  ಸಂಗೀತ ಕೇಳುವುದು ನನ್ನ ಹವ್ಯಾಸ. ವಿಶೇಷವಾಗಿ ಭಕ್ತಿ ಗೀತೆಗಳು ಹಾಗೂ ಶಾಸ್ತ್ರೀಯ ಸಂಗೀತ ತುಂಬಾ ಇಷ್ಟ. ಮನೆಯ ಮುಂದೆ ಚಿಕ್ಕದಾಗಿ ಉದ್ಯಾನ ಬೆಳೆಸಿದ್ದೇನೆ. ಇಲ್ಲಿ ಸಸಿಗಳನ್ನು ನೆಡುವುದು, ಹೂವುಗಳನ್ನು ಆರೈಕೆ ಮಾಡುವುದು ಖುಷಿ ಕೊಡುತ್ತದೆ. ಮುಖೇಶ್ ಅವರ ಹಳೆಯ ಹಿಂದಿ ಚಿತ್ರಗೀತೆಗಳನ್ನೂ ಕೇಳುತ್ತೇನೆ.ಇತ್ತೀಚಿನ ದಿನಗಳಲ್ಲಿ ಓದುವುದು ಕಡಿಮೆಯಾಗಿದ್ದರೂ ಕೂಡ ಸಮಯ ಸಿಕ್ಕಾಗಲೆಲ್ಲ ಕೈಯಲ್ಲಿ ಪುಸ್ತಕ ಹಿಡಿದು ಕೂತುಬಿಡುತ್ತೇನೆ. ಕಠಿಣ ಶ್ರಮ ಹಾಗೂ ಬದ್ಧತೆ. ಇವೆರಡೂ ಇಲ್ಲದಿದ್ದರೆ ಯಾವ ಸಾಧನೆಯನ್ನೂ ಮಾಡಲು ಸಾಧ್ಯವಿಲ್ಲ. ಸಂಬಳಕ್ಕಾಗಿ ಕೆಲಸವೆಂದು ಅಂದುಕೊಂಡರೆ ತುಂಬಾ ಕಷ್ಟ. ಆತ್ಮತೃಪ್ತಿಗಾಗಿ, ಖುಷಿಗಾಗಿ ಎಂದರೆ ನಾವು ಮಾಡುವ ಕೆಲಸವು ಸುಲಭವಾಗುತ್ತದೆ ಹಾಗೂ ಖುಷಿ ಕೊಡುತ್ತದೆ.

(ಆಡಳಿತ ಸೂತ್ರ ಹಿಡಿದ ಯಶಸ್ವಿ ಮಹಿಳೆಯರ ಮನದಾಳದ ಮಾತುಗಳಿಗೆ ಭೂಮಿಕೆಯಾಗಿರುವ ಈ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry