ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಕೆಲ ಸುಳಿವು ಲಭ್ಯ- ಪ್ರಧಾನಿ ಸಿಂಗ್

Published:
Updated:

ನವದೆಹಲಿ (ಪಿಟಿಐ): ಢಾಕಾ ಪ್ರವಾಸದಿಂದ ಬುಧವಾರ ರಾತ್ರಿ ವಾಪಸಾದ ಪ್ರಧಾನಿ ಮನಮೋಹನ್ ಸಿಂಗ್ ಅವರು ನೇರವಾಗಿ ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಗೆ ಧಾವಿಸಿ, ಬಾಂಬ್ ಸ್ಫೋಟದಿಂದ ಗಾಯಗೊಂಡವರನ್ನು ಭೇಟಿಯಾದರು.ಆಸ್ಪತ್ರೆಯಲ್ಲಿರುವ ಸುಮಾರು 50 ರಿಂದ 60 ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಸಂಬಂಧಪಟ್ಟ ವೈದ್ಯರೊಂದಿಗೆ ಸಿಂಗ್ ಚರ್ಚಿಸಿದರು. ಸುಮಾರು ಅರ್ಧಗಂಟೆ ಕಾಲ ಆಸ್ಪತ್ರೆಯಲ್ಲಿದ್ದ ಪ್ರಧಾನಿ ಜತೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಕೂಡ ಇದ್ದರು.ಇದಕ್ಕೂ ಮುನ್ನ ವಿಮಾನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, `ಈ ದಾಳಿಯಲ್ಲಿ ಯಾವ ಸಂಘಟನೆಯ ಕೈವಾಡ ಇದೆ ಎನ್ನುವುದರ ಬಗ್ಗೆ ಈಗಲೇ ಹೇಳಿಕೆ ನೀಡುವುದು ಸರಿಯಲ್ಲ. ಆದರೆ ಕೆಲ ಸುಳಿವುಗಳು ಲಭ್ಯವಾಗಿವೆ~ ಎಂದಷ್ಟೇ ಹೇಳಿದರು.26/11ರ ಮುಂಬೈ ದಾಳಿ ಬಳಿಕ ಜನರಲ್ಲಿ ಒಂದು ರೀತಿಯ ಅಭದ್ರತೆ ಮನೆಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, `ಸರ್ಕಾರವು ಇಂಥ ದಾಳಿಗಳನ್ನು ಹತ್ತಿಕ್ಕಲು ಅನೇಕ ಕಾರ್ಯತಂತ್ರ ರೂಪಿಸಿದೆ ಹಾಗೂ ಹೊಸ ವಿಧಾನವನ್ನು ಕಂಡುಕೊಂಡಿದೆ. ಆದರೆ ಬಗೆಹರಿಸಲಾಗದ ಸಮಸ್ಯೆಗಳು ಹಾಗೂ ವ್ಯವಸ್ಥೆಯ ದೌರ್ಬಲ್ಯವನ್ನು ಉಗ್ರರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ~ ಎಂದರು.`ಕಠಿಣ ಪರಿಶ್ರಮದಿಂದ ನಾವು ಇಂಥ ದೌರ್ಬಲ್ಯಗಳನ್ನು ಮೀರಬೇಕು~ ಎಂದ ಅವರು, `ಉಗ್ರರ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ~ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.ರಾಜಕೀಯ ಪಕ್ಷಗಳು ಪರಸ್ಪರ ಆರೋಪ, ಪ್ರತ್ಯಾರೋಪ ಬಿಟ್ಟು ಒಟ್ಟಾಗಿ ಉಗ್ರರ ದಮನ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸಿಂಗ್ ನುಡಿದರು.

 

Post Comments (+)