ಭಾನುವಾರ, ನವೆಂಬರ್ 17, 2019
28 °C
ಗುಲ್ಬರ್ಗ ಮಿನಿ ವಿಧಾನಸೌಧದಲ್ಲಿ ಒಂದು ಸು(ಸ್ತು)ತ್ತು

ಕೆಳಗಷ್ಟೆ ಹೊಳಪು: ಮೇಲಿದೆ ಕೊಳಕು!

Published:
Updated:

ಗುಲ್ಬರ್ಗ: ಏರುತ್ತಿರುವ ಬಿಸಿಲ ಧಗೆ ತಾಳಿಕೊಳ್ಳುವುದೆ ಕಷ್ಟ, ಮೂರನೇ ಅಂತಸ್ತಿಗೆ ಏರಿ ಹೋಗುವ ಮಹಾಕಷ್ಟ ಯಾರಿಗೆ ಬೇಕು?

ಗುರ್ಲ್ಬ ಜಿಲ್ಲಾಧಿಕಾರಿ, ವಿಭಾಗೀಯ ಅಧಿಕಾರಿ ಸೇರಿ ತರಹೇವಾರಿ ಸರ್ಕಾರಿ ಕಚೇರಿಗಳಿರುವ ಮಿನಿ ವಿಧಾನಸೌಧದ ಮೂರನೇ ಅಂತಸ್ತಿನ ಅವ್ಯವಸ್ಥೆ ಬಗ್ಗೆ ಗಮನ ಸೆಳೆಯಲೆತ್ನಿಸಿದಾಗ, ಅಲ್ಲಿನ ಸಿಬ್ಬಂದಿಯಿಂದ ಬಂದ ಉತ್ತರ ಇದು.ಮೂಲೆಗಳಲ್ಲಿ ಗುಜರಿ ಸಾಮಗ್ರಿಗಳ ರಾಶಿ, ತುಕ್ಕು ಹಿಡಿಯುತ್ತಿರುವ ಕಿಟಕಿ- ಬಾಗಿಲುಗಳು, ಕಸದೊಂದಿಗೆ ಸ್ವಾಗತಿಸುವ ಮೆಟ್ಟಿಲುಗಳು, ಅಂದಗೆಟ್ಟ ಸುಣ್ಣ- ಬಣ್ಣ, ಕಚೇರಿಯೊಳಗೆ ನುಗ್ಗಿದ ಮರದ ಟೊಂಗೆಗಳು, ಗಬ್ಬು ಸೂಸುವ ಶೌಚಾಲಯಗಳು; ಒದು ಒಟ್ಟಾರೆ ಮಿನಿ ವಿಧಾನಸೌಧ ಮೂರನೇ ಅಂತಸ್ತಿನ ಚಿತ್ರಣ. ಎರಡನೇ ಮಹಡಿಯ ತನಕ ಸಿಕ್ಕಿರುವ ಸುಣ್ಣ-ಬಣ್ಣ ಭಾಗ್ಯ ಮೂರನೇ ಮಹಡಿಗೆ ದೊರಕಿಲ್ಲ. ಕೆಳಗಿನೆರಡು ಮಹಡಿಗಳ ಹೊಳಪು ಗಮನ ಸೆಳೆಯುತ್ತಿದೆ. ಮೂರನೇ ಮಹಡಿಯ ಕೊಳಕು ಮಾತ್ರ ಅಲ್ಲಿ ಹೋಗಿ ನೋಡಿದವರಿಗೆ ಮಾತ್ರ ಗೊತ್ತಾಗುತ್ತದೆ.ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬಂಡವಾಳ ಹೂಡಿಕೆ ಮಾಹಿತಿ ನಿರ್ವಹಣೆ ಮತ್ತು ವಸೂಲಾತಿ-ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ ಇಲಾಖೆ, ಕೆಪಿಎಸ್‌ಸಿ ಪ್ರಾಂತೀಯ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಸ್ಥಳೀಯ ಲೆಕ್ಕ ಪರಿಶೀಲನಾ ಗುಲ್ಬರ್ಗ ವರ್ತುಲ ಕಚೇರಿ, ನಗರ ಮಾಪನ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕರ ಇಲಾಖೆ- ಈ ಎಲ್ಲ ಕಚೇರಿಗಳು ಮೂರನೇ ಮಹಡಿಯಲ್ಲಿವೆ. ಕೆಳಗಿನ ಅಂತಸ್ತುಗಳಿಗೆ ಹೋಲಿಸಿದರೆ ಇಲ್ಲಿ ಅನಗತ್ಯ ಜನಸಂದಣಿ ಕಡಿಮೆ. ಇಲ್ಲಿನ ಕಚೇರಿಗಳನ್ನು ಹುಡುಕಿಕೊಂಡು ಬರುವವರಿಗೆ ಕೊರತೆ ಇಲ್ಲ. `ಕಟ್ಟಡ ನಿರ್ವಹಣೆ ಹಣವನ್ನು ಪ್ರತ್ಯೇಕ ಇಲಾಖೆಗಳಿಂದ ಭರಿಸಿಕೊಳ್ಳಲಾಗುತ್ತಿದೆ. ಆದರೆ ಇ್ಲಲಿ ಮಾತ್ರ ಬಣ್ಣ ಮಾಡಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಲು ಯಾರೂ ಧೈರ್ಯ ಮಾಡುವುದಿಲ್ಲ' ಎನ್ನುವುದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯ ವಿವರಣೆ.ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಂದರ್ಭದಲ್ಲಿ ಮಿನಿ ವಿಧಾನಸೌಧಕ್ಕೆ ಬಣ್ಣ ಬಳಿಯುವ ಕೆಲಸ ಆರಂಭಿಸಲಾಗಿತ್ತು. `ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ' ಎನ್ನುವಂತೆ ಮೂರನೇ ಮಹಡಿಯೊಂದನ್ನು ಬಿಟ್ಟು, ಕಟ್ಟಡದ ಅಂದ ಹೆಚ್ಚಿಸಲಾಗಿದೆ ಎನ್ನುವುದು ಸಿಬ್ಬಂದಿ ವಿವರ.ಗೊಂದಲ: ಸಂಖ್ಯೆ ಎಂಟರ ಆಕಾರದಲ್ಲಿ ಇಡೀ ಕಟ್ಟಡ ವಿನ್ಯಾಸ ಮಾಡಲಾಗಿದೆ. ಯಾವ ಅಂತಸ್ತಿನಲ್ಲಿ ಯಾವ ಕಚೇರಿ ಇದೆ ಎಂದು ಹೊರಗಡೆ ಸಂಖ್ಯಾ ಫಲಕ ಹಾಕಲಾಗಿದೆ. ಮಹಡಿ ಪ್ರವೇಶಿಸಿದ ಬಳಿಕ ಯಾವ ಕಡೆಗೆ ಹೋಗಬೇಕೆನ್ನುವ ಗೊಂದಲ ಸಾರ್ವಜನಿಕರಲ್ಲಿ ಉಂಟಾಗುತ್ತದೆ. ಹೀಗಾಗಿ ಮಹಿಳೆಯರು, ವಯೋವೃದ್ಧರು, ಕುಳಿತು ಸಾವರಿಸಿಕೊಂಡು ಕಚೇರಿಗಳನ್ನು ಹುಡುಕುವ ತಾಪತ್ರಯವಿದೆ. ಅಕ್ಷರ ಜ್ಞಾನವಿದ್ದರೂ ಸಂಬಂಧಿಸಿದ ಕಚೇರಿ ಹುಡುಕುವುದಕ್ಕೆ ಮಿನಿ ವಿಧಾನಸೌಧದಲ್ಲಿ ಒಂದು ಸುತ್ತು ಹಾಕಿ ಸುಸ್ತು ಹೊಡೆಯುವುದು ಅನಿವಾರ್ಯ. ಸೂಚನಾ ಫಲಕ ಹೊರಗಷ್ಟೆ ಇದೆ.ಮಹಡಿಗಳಲ್ಲಿ ಹಾಕಿಲ್ಲ. ಹೀಗಾಗಿ ಎಡ, ಬಲ ಮಾರ್ಗಗಳಲ್ಲಿ ಹೋಗುವ ಗೊಂದಲದಿಂದ ಜನರು ಬಸವಳಿಯುತ್ತಿದ್ದಾರೆ.

ಗ್ರಾಮೀಣ ಭಾಗದ ಜನರು ಒಂದು ದಿನ ಕಚೇರಿ ಹುಡುಕುವುದಕ್ಕೆ ಕಳೆಯುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಜನರ ಸಮಸ್ಯೆ ನಿವಾರಿಸುವುದರೊಂದಿಗೆ, ಶಿಥಿಲಗೊಳ್ಳುತ್ತಿರುವ ಮೂರನೇ ಮಹಡಿಯ ಅಂದಚೆಂದ ಕಾಪಾಡಿಕೊಳ್ಳಬೇಕಿದೆ.

ಪ್ರತಿಕ್ರಿಯಿಸಿ (+)