ಶನಿವಾರ, ಮೇ 28, 2022
26 °C

ಕೆಳಭಾಗಕ್ಕೆ ತಲುಪದ ನೀರು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಕರಿಮಸೂತಿ ಏತ ನೀರಾವರಿ ಕಾಲು ವೆಯ ಮೂಲಕ ಕಳೆದ ಹದಿನೈದು ದಿನಗಳಿಂದ ಹರಿ ಬಿಡಲಾಗುತ್ತಿರುವ ನೀರು ಯೋಜನೆಯ ಕೆಳ ಭಾಗದ ಹಳ್ಳಿಗಳಿಗೆ ತಲುಪುತ್ತಿಲ್ಲವೆಂದು ಆರೋಪಿಸಿ ಒಂದು ವಾರದಿಂದ ಕೊಕಟನೂರ, ಅರಟಾಳ, ಬಾಡಗಿ, ಖೋತನಟ್ಟಿ, ಐಗಳಿ ಸೇರಿದಂತೆ ಬಯಲು ಸೀಮೆ ವ್ಯಾಪ್ತಿಯ ಅನೇಕ ಹಳ್ಳಿಗಳ ಗ್ರಾಮಸ್ಥರು ಆರಂಭಿಸಿದ್ದ ಪ್ರತಿಭಟನೆ ಸೋಮವಾರ ತಾಲ್ಲೂಕಿನ ಐಗಳಿ ಕ್ರಾಸ್ ಬಳಿ ರಸ್ತೆತಡೆ ನಡೆಸುವ ಮೂಲಕ ತೀವ್ರಗೊಳಿಸಿದರು.ಕಳೆದ ಹದಿನೈದು ದಿನಗಳಿಂದ ಹಿಪ್ಪರಗಿ ಬ್ಯಾರೇಜ್‌ನಿಂದ ಕರಿಮಸೂತಿ ಕಾಲುವೆಗೆ  ಹರಿಬಿಡಲಾಗುತ್ತಿರುವ ನೀರು ಕೇವಲ ಯಲಿಹಡಲಗಿ ಮತ್ತು ಕೋಹಳ್ಳಿ ಆಸು ಪಾಸಿನ ವರೆಗೆ ಮಾತ್ರ ತಲುಪಲು ಸಾಧ್ಯವಾಗಿದೆ. ಕಾಲುವೆಯಲ್ಲಿ ಹರಿವು ಸಾಕಷ್ಟಿದ್ದರೂ ಕೂಡ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಗೇಟು ಗಳನ್ನು ತೆರೆಯದೆ ಮುಂದಿನ ಹಳ್ಳಿಗಳಿಗೆ ನೀರು ಸಾಗದಂತೆ ತಡೆ ಒಡ್ಡಿದ್ದಾರೆ. ಇದರ ಪರಿಣಾಮ ಯಲಿಹಡಲಗಿ ಮತ್ತು ಕೋಹಳ್ಳಿ ವ್ಯಾಪ್ತಿಯ ಹಳ್ಳಕೊಳ್ಳ, ಕೆರೆಕುಂಟೆಗಳೆಲ್ಲ ತುಂಬಿ ನೀರು ಸಾಕಷ್ಟು ಪೋಲಾಗುತ್ತಿದ್ದರೂ ಕೂಡ ಅಧಿಕಾರಿ ಗಳು ಪ್ರತಿಕಾರದ ಕ್ರಮವಾಗಿ ಕೊನೆ ಭಾಗದ ಹಳ್ಳಿಗಳಿಗೆ ನೀರು ಹರಿಸಲು ಕುಂಟು ನೆಪವೊಡ್ಡು ತ್ತಿದ್ದಾರೆಂದು ಆರೋಪಿಸಿ ಸಾವಿರಾರು ಗ್ರಾಮಸ್ಥರು ಇಂದು ಬೆಳಿಗ್ಗೆ ಐಗಳಿ ಕ್ರಾಸ್ ಬಳಿ ಮಿಂಚಿನ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯ ಸುದ್ದಿ ತಿಳಿಯು ತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಜಿ.ಆರ್. ಶೀಲವಂತರ ಮತ್ತು ಸಿ.ಪಿ.ಐ ದಿವಾಕರ ಪಿ.ಎಮ್, ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸುವ ವಿಫಲ ಪ್ರಯತ್ನ ಮಾಡಿದರು. ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಪಷ್ಟ ಭರವಸೆ ನೀಡುವವರೆಗೆ ಪ್ರತಿಭಟನೆ ಯನ್ನು ಹಿಂಪಡೆ ಯುವುದಿಲ್ಲವೆಂದು ರೈತರು ಪಟ್ಟು ಹಿಡಿದಾಗ, ಮಧ್ಯಾಹ್ನದ ಹೊತ್ತಿಗೆ ನಿಗಮದ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದರು. ಈ ವೇಳೆ ಮಾತ ನಾಡಿದ ನೀರಾವರಿ ಇಲಾಖೆಯ ಎಂಜಿನಿಯರ್ ಬಿ.ವಾಯ್. ಹುಂಡೇಕರ, ಸದ್ಯ ಕಾಲುವೆಯ ಮೂಲಕ ಹರಿಸಲಾಗುತ್ತಿರುವ ನೀರು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಅವಕಾಶವಿದ್ದು, ಆದರೆ ಯೋಜನೆಯ ಆರಂಭದ ಭಾಗದಲ್ಲಿ ಬರುವ ರೈತರು ಅದನ್ನು ಇತರೆ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದ ರಿಂದ ಕೊನೆಯ ಹಂತದ ಹಳ್ಳಿಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲವೆಂದು ಅಸಹಾಯ ಕತೆ ವ್ಯಕ್ತಪಡಿಸಿದರು.ಅಧಿಕಾರಿಯ ಈ ಉತ್ತರದಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು, ಕಳೆದ ಸಲ ನಡೆದ ಘಟನೆಗೆ ಪ್ರತಿಕಾರವಾಗಿ ಅಧಿಕಾರಿಗಳು ನೀರು ಹರಿಸಲು ಹಿಂದೇಟು ಹಾಕುತ್ತಿದ್ದಾರೆಂದು ಹರಿಹಾಯ್ದರು. ಕಳೆದ ವರ್ಷ ರೈತರು ನಿಗಮದ ಯಾವುದೇ ಆಸ್ತಿಪಾಸ್ತಿಗೆ ಧಕ್ಕೆಯುಂಟು ಮಾಡದಿದ್ದರೂ ಕೂಡ ಅವರ ವಿರುದ್ಧ ಉದ್ದೇಶ ಪೂರ್ವಕವಾಗಿ ಅಧಿಕಾರಿಗಳು ಪ್ರಕರಣ ದಾಖಲಿ ಸಿರುವುದನ್ನು ತರಾಟೆಗೆ ತೆಗೆದುಕೊಂಡ ರೈತರು, ಈಗ ಅಧಿಕಾರಿಗಳು ಅದನ್ನೇ ಮನಸ್ಸಿನಲ್ಲಿಟ್ಟು ಕೊಂಡು ರೈತರ ವಿರುದ್ಧ ಸೇಡಿನ ಕ್ರಮ ಅನುಸರಿಸಲು ಮುಂದಾಗಿದ್ದಾರೆಂದು ಆರೋಪಿಸಿದರು.ಆಗ ತಬ್ಬಿಬ್ಬಾದ ಅಧಿಕಾರಿಗಳು ಇದಕ್ಕೆ ಸಮಜಾಯಿಷಿ ನೀಡುವ ವ್ಯರ್ಥ ಪ್ರಯತ್ನಕ್ಕೆ ಮುಂದಾದರು. ಕೊನೆಗೆ ತಹಶೀಲ್ದಾರರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ವೇಳೆ ಮಂಗಳವಾರದಿಂದ ಕಾಲುವೆಯ ಮುಂದಿನ ಭಾಗಕ್ಕೆ 8 ದಿನಗಳ ಕಾಲ ನೀರು ಹರಿಬಿಡುವ ಭರವಸೆಯನ್ನು ನಿಗಮದ ಅಧಿಕಾರಿಗಳು ನೀಡಿದರಾದರೂ ಸ್ಥಳದಲ್ಲಿ ಹಾಜರಿದ್ದ ರೈತರು ಇದಕ್ಕೆ ಆರಂಭದಲ್ಲಿ ಸೊಪ್ಪು ಹಾಕಲಿಲ್ಲ. ಪರಿಸ್ಥಿತಿ ಮತ್ತಷ್ಟು ಕೈ ಮೀರುತ್ತಿರುವುದನ್ನು ಅರಿತ ತಹ     ಶೀಲ್ದಾರರು, ನಿಗಮದ ಅಧಿಕಾರಿಗಳು ಈಗ ನೀಡಿರುವ ಭರವಸೆಯಂತೆ ನೀರು ಬಿಡದಿದ್ದ ಪಕ್ಷದಲ್ಲಿ ಗುರುವಾರ ಮತ್ತೊಂದು ಸುತ್ತಿನ ಸಭೆ ಕರೆದು ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿ ಸುವುದಾಗಿ ಸ್ಪಷ್ಟವಾಗಿ ಹೇಳಿದರು.ತಹಶೀಲ್ದಾರರ ಭರವಸೆಯಿಂದ ತೃಪ್ತರಾದ ರೈತರು ಒಂದು ವೇಳೆ ನಿಗಮದ ಅಧಿಕಾರಿಗಳು ಹೇಳಿದಂತೆ ನಡೆದುಕೊಳ್ಳದಿದ್ದಲ್ಲಿ ಮುಂದಾಗುವ ಪರಿಣಾಮಗಳಿಗೆ ತಾವು ಜವಾಬ್ದಾರರಾಗು ವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲು ಡಂಗಿ, ಅರವಿಂದ ಘಾಟಗೆ, ಕಲ್ಲಪ್ಪ ಪಾಟೀಲ, ಭೀಮು ಡಂಗಿ, ಅಶೋಕ ಕದಮ,         ಸದಾಶಿವ ರಬಕವಿ, ಸದಾಶಿವ ಯಳ್ಳೂರ, ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಬಂಡರಗೋಟಿ, ಸಂಗಣ್ಣ ಕರಿಗಾರ, ಬಾಳು ಹುದ್ದಾರ,  ಬಸವರಾಜ ಮಮದಾಪೂರ, ಸುರೇಶ ಚಮಕೇರಿ, ಅಪ್ಪಾಸಾಬ ತೆಲಸಂಗ, ಅಣ್ಣಪ್ಪ ಕಂಕಣವಾಡಿ, ಸಿದ್ದು ಹಳ್ಳಿ, ಶ್ರೀಶೈಲ ಮಮದಾಪೂರ, ಶ್ರೀಶೈಲ ಜಮಖಂಡಿ, ಮಹ್ಮದಲಿ ಕಾವರೆ, ಬಿ.ಎಸ್. ಮಠಪತಿ, ಶಿವಲಿಂಗ ಧಡಕೆ ಹಾಗೂ ಅಧಿಕಾರಿಗಳಾದ ರವಿ ಚಂದ್ರಗಿರಿಯವರ, ಎಸ್.ಎಸ್. ಉಪ್ಪಲದಿನ್ನಿ, ಐಗಳಿ ಎಸ್.ಐ ಪ್ರದೀಪ ತಳಕೇರಿ, ಚಿಕ್ಕೋಡಿ ಎಸ್.ಐ ಶಿವಕುಮಾರ ಮುಚ್ಚಂಡಿ, ಅಥಣಿ    ಎಸ್.ಐ ಪ್ರಸಾದ ಫಣೇಕರ ಸೇರಿದಂತೆ ಅನೇಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.