ಕೆಳಭಾಗದ ರೈತರಿಗೆ ಸಮರ್ಪಕ ನೀರು ಕೊಡಿ

7

ಕೆಳಭಾಗದ ರೈತರಿಗೆ ಸಮರ್ಪಕ ನೀರು ಕೊಡಿ

Published:
Updated:

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ 104ನೇ ಮೈಲ್‌ನ ಕೆಳಭಾಗಕ್ಕೆ ಕಲ್ಪಿಸಬೇಕಾದ ನಿರ್ದಿಷ್ಟ ಪ್ರಮಾಣದ ನೀರು ದೊರಕಿಸುತ್ತಿಲ್ಲ. ಅಸಮರ್ಪಕ ಗೇಜ್ ನಿರ್ವಹಣೆ, ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಮುಖ್ಯ ಕಾರಣವಾಗಿದ್ದು, ಇದೇ ಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೂ ಪರದಾಡಬೇಕಾದೀತು. ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸಮಸ್ಯೆ ಪರಿಹರಿಸಬೇಕು ಎಂದು ತುಂಗಭದ್ರಾ ಎಡದಂಡೆ ಕಾಲುವೆಯ 104ನೇ ಮೈಲ್‌ನ ಕೆಳಭಾಗದ ರೈತರ ಸಂಘದ ಅಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮರ್ಪಕ ಗೇಜ್ ನಿರ್ವಹಿಸಿ ನಿಗದಿಪಡಿಸಿದ ಪ್ರಮಾಣದ ನೀರು ದೊರಕಿಸಲು 104ನೇ ಮೈಲ್‌ನ ಕೆಳಭಾಗದ ರೈತರ ಒತ್ತಾಯ ನಿರಂತರವಾಗಿದೆ. ಆದರೆ, ನೀರಾವರಿ ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ. ಗೇಜ್ ದಾಖಲೆ ಮಾಡುವುದಕ್ಕಾಗಿ ಆಗೊಮ್ಮೆ ಈಗೊಮ್ಮೆ 6 ಅಡಿ ನೀರು ಹರಿಸುತ್ತಾರೆ ಎಂದು ತಿಳಿಸಿದರು.ಜಿಲ್ಲಾಧಿಕಾರಿಗಳ ಜೊತೆ ರೈತರು ಸಭೆ ನಡೆಸಿದ ಸಂದರ್ಭದಲ್ಲಿ ನೀರಾವರಿ ಅಧಿಕಾರಿಗಳು ಗೇಜ್ ನಿರ್ವಹಣೆ ಬಗ್ಗೆ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳೂ ಸಹ ಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಚನೆ ನೀಡಿದ್ದರು. ಆದರೆ, ಕೆಲ ದಿನಗಳಲ್ಲಿಯೇ ಅಧಿಕಾರಿಗಳು ಗೇಜ್ ನಿರ್ವಹಣೆ ಮರೆತಿದ್ದಾರೆ ಎಂದು ಆರೋಪಿಸಿದರು.2.1, 2.2, 2.3 ಅಡಿ ಮಾತ್ರ ನೀರು ಹರಿಸಲಾಗುತ್ತಿದ್ದು, ಕನಿಷ್ಠ 3 ಅಡಿ ಕೂಡಾ ದೊರಕಿಸುತ್ತಿಲ್ಲ. ರೈತರು ಪದೇ ಪದೇ ಒತ್ತಾಯ ಮಾಡಿದಾಗ ಮಾತ್ರವೇ ಒಂದು ದಿನ ಗೇಜ್ ನಿರ್ವಹಣೆ ಆಗುತ್ತದೆ. ಎಪ್ರಿಲ್ 10ರವರೆಗೆ ನೀರು ದೊರಕಿಸುವಬಗ್ಗೆ ಭರವಸೆ ನೀಡಲಾಗಿದೆ. ಹೀಗಾಗಿ ರೈತರು ಭತ್ತ ನಾಟಿ ಮಾಡಿದ್ದಾರೆ. ಈಗಲೇ ಗೇಜ್ ನಿರ್ವಹಣೆ ಆಗದಿದ್ದರೆ ಬೇಸಿಗೆ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಾಗುತ್ತಿದೆ. ಈಗಲೂ ಕೂಡಾ 104ನೇ ಮೈಲ್ ಕೆಳ ಭಾಗದ ರೈತರಿಗೆ ಶೇ 70ರಷ್ಟು ನೀರು ಗಣೇಕಲ್ ಜಲಾಶಯದಿಂದ ಹರಿಸಲಾಗುತ್ತಿದೆ.ಕಾಲುವೆಯಿಂದ ಬರುತ್ತಿರುವುದು ಕೇವಲ ಶೇ 30ರಷ್ಟು ಮಾತ್ರ ಎಂದು ವಿವರಿಸಿದರು.ಇದೇ ಸ್ಥಿತಿ ಮುಂದುವರಿದರೆ ಗಣೇಕಲ್ ಜಲಾಶಯವನ್ನೇ ಆಶ್ರಯಿಸಿದ ರಾಯಚೂರು ನಗರಕ್ಕೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಗೇಜ್ ನಿರ್ವಹಣೆ ಮಾಡಲು ಸಾಧ್ಯವಿದ್ದರೂ ಅಧಿಕಾರಿಗಳು ನಿರ್ವಹಿಸುತ್ತಿಲ್ಲ. ಒಂದು ಬಾರಿ ನೀರು ಕೊಟ್ಟರೆ ಪದೇ ಪದೇ ಅಷ್ಟೇ ಪ್ರಮಾಣದ ನೀರು ಹರಿಸಲು ಒತ್ತಡ ಹೇರುತ್ತಾರೆ ಎಂಬ ಕಾರಣಕ್ಕೊ ಏನೋ ಅಧಿಕಾರಿಗಳು ರೈತರ ಒತ್ತಾಯಕ್ಕೆ ಸ್ಪಂದಿಸುತ್ತಿಲ್ಲ ಎಂದು ಅವರು ಆಪಾದಿಸಿದರು.104ನೇ ಮೈಲ್ ಕೆಳಭಾಗದಲ್ಲಿ 1 ಲಕ್ಷ 25 ಸಾವಿರ ಎಕರೆ ಪ್ರದೇಶವಿದೆ. ಇದರಲ್ಲಿ 25 ಸಾವಿರ ಎಕರೆ ಭತ್ತ, 10 ಸಾವಿರ ಎಕರೆ ಮೆಣಸಿನಕಾಯಿ, 40 ಸಾವಿರ ಎಕರೆ ಹತ್ತಿ ಬೆಳೆಯಲಾಗಿದೆ. ಯಾವ ಬೆಳೆಗೂ ಸಮರ್ಪಕ ನೀರು ದೊರಕುತ್ತಿಲ್ಲ. ಒಟ್ಟು 300 ಕ್ಯುಸೆಕ್ ನೀರು ಈ 104ನೇ ಮೈಲ್ ಕೆಳ ಭಾಗದ ಜಮೀನಿಗೆ ದೊರಕಿಸಬೇಕು. ಈಗ ಇರುವ ಬೆಳೆ ಪೂರ್ಣಪ್ರಮಾಣದಲ್ಲಿ ಬೆಳೆಯಲು ಕನಿಷ್ಠ ಇನ್ನೂ 3-4 ಬಾರಿ ನೀರು ಹರಿಸಬೇಕು. 15 ದಿನಕ್ಕೊಮ್ಮೆ ನೀರು ಬರುವುದೂ ದುಸ್ತರವಾಗಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ರೈತರಲ್ಲಿ ಆತಂಕ ಹುಟ್ಟಿಸುತ್ತದೆ ಎಂದು ಹೇಳಿದರು.ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ನೀರಾವರಿ ಅಧಿಕಾರಿಗಳು ಎಚ್ಚೆತ್ತು ಸ್ಪಂದಿಸಬೇಕು.ಇಲ್ಲದೇ ಇದ್ದರೆ ರೈತರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಪ್ರತಿನಿಧಿಗಳಾದ ವೆಂಕಟೇಶ್ವರರೆಡ್ಡಿ, ನಾಗೇಶ್ವರರಾವ್, ಆನಂದರಾವ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry