ಭಾನುವಾರ, ಮೇ 22, 2022
29 °C

ಕೆವಿನ್ ಪೀಟರ್‌ಸನ್, ಇಂಗ್ಲೆಂಡ್ ಕ್ರಿಕೆಟ್ ಆಟಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅನಿರೀಕ್ಷಿತ ಘಟನೆ ನಿರೀಕ್ಷಿಸಿ’

ಐರ್ಲೆಂಡ್ ವಿರುದ್ಧ ಸೋಲು ಅನುಭವಿಸಿರುವ ಕಾರಣ ನಮ್ಮ ಮುಂದಿನ ಹಾದಿ ಕಠಿಣ ಎನಿಸಿದೆ. ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಅವರ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸುವುದು ನಮ್ಮ ಲೆಕ್ಕಾಚಾರವಾಗಿತ್ತು. ಆದರೆ ಐರ್ಲೆಂಡ್ ಎದುರಿನ ಸೋಲಿನಿಂದಾಗಿ ಬರ್ತ್‌ಡೇ ಪಾರ್ಟಿ ನಮ್ಮ ನಿರೀಕ್ಷೆಯೆಯಂತೆ ನಡೆಯಲಿಲ್ಲ. ಐರ್ಲೆಂಡ್ ತಂಡ ಚೆನ್ನಾಗಿ ಆಡಿತು. ಅದೇ ರೀತಿ ಕೆವಿನ್ ಒಬ್ರಿಯನ್ ಕೂಡಾ ಸೊಗಸಾದ ರೀತಿಯಲ್ಲಿ ಚೆಂಡನ್ನು ಬಡಿದಟ್ಟಿದರು. ಕ್ರಿಕೆಟ್ ಕ್ರೀಡೆಯೇ ಹಾಗೆ. ಅಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳನ್ನು ನಿರೀಕ್ಷಿಸಬೇಕಾಗುತ್ತದೆ.ನಾವು ಇದುವರೆಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದ್ದೇವೆ. ಯಾವುದೇ ತಂಡಕ್ಕೂ ಕೆಟ್ಟ ದಿನ ಎದುರಾಗಬಹುದು. ಆದರೆ ಅದನ್ನು ಮರೆತು ಮುಂದಿನ ಪಂದ್ಯಗಳತ್ತ ಗಮನ ಹರಿಸಬೇಕು. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಧನಾತ್ಮಕ ಮನೋಭಾವದೊಂದಿಗೆ ಕಣಕ್ಕಿಳಿಯುವೆವು. ದಕ್ಷಿಣ ಆಫ್ರಿಕಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿದೆ. ಅವರು ಬಲವುಳ್ಳವರಂತೆ ಕಾಣಿಸುತ್ತಾರೆ. ಆದರೆ ನಮ್ಮ ಬಗ್ಗೆ ಅವರಿಗೆ ಭಯವಿದೆ. ಏಕೆಂದರೆ ಕಳೆದ ಕೆಲ ತಿಂಗಳಲ್ಲಿ ನಾವು ಆ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದೆವು.ಗ್ರೇಮ್ ಸ್ಮಿತ್ ಬಳಗದ ವಿರುದ್ಧ ಇಂಗ್ಲೆಂಡ್‌ನಲ್ಲಿ ಮಾತ್ರವಲ್ಲ ದಕ್ಷಿಣ ಆಫ್ರಿಕಾದಲ್ಲೂ ಜಯ ಸಾಧಿಸಿದ್ದೇವೆ. ದಕ್ಷಿಣ ಆಫ್ರಿಕಾ ‘ಫೇವರಿಟ್’ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ನಮಗೆ ಒಂದು ರೀತಿಯಲ್ಲಿ ಅದು ಒಳ್ಳೆಯದು. ಏಕೆಂದರೆ ಗೆಲುವಿನ ನಿರೀಕ್ಷೆ ಹೊಂದಿರುವ ತಂಡಕ್ಕೆ ಒತ್ತಡದಲ್ಲೇ ಆಡಬೇಕಾಗುತ್ತದೆ. ಆದರೆ ಇಂಗ್ಲೆಂಡ್ ‘ಅಂಡರ್‌ಡಾಗ್’ ಆಗಿ ಕಣಕ್ಕಿಳಿಯಲಿದೆ. ನಾವು ಗುರುವಾರವೇ ಚೆನ್ನೈಗೆ ಬಂದಿಳಿದಿದ್ದೆವು. ಕಳೆದ ಎರಡು ದಿನಗಳ ಕಾಲ ತಂಡದ ತಾಲೀಮು ಸರಿಯಾದ ಹಾದಿಯಲ್ಲಿ ನಡೆದಿದೆ.ಇಂಗ್ಲೆಂಡ್‌ಗೆ ಇದು ಪ್ರಸಕ್ತ ಟೂರ್ನಿಯಲ್ಲಿ ಮೊದಲ ಹಗಲು ಪಂದ್ಯ. ಆದ್ದರಿಂದ ಇಲ್ಲಿನ ಬಿಸಿಲಿನ ತಾಪಕ್ಕೆ ಹೊಂದಿಕೊಂಡು ಆಡಬೇಕಾಗಿದೆ. ಇಲ್ಲಿನ ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳುವ ತಂಡ ಅಲ್ಪ ಮೇಲುಗೈ ಸಾಧಿಸುವುದು ಖಚಿತ. ನಮ್ಮ ಕ್ವಾರ್ಟರ್ ಫೈನಲ್ ಪ್ರವೇಶದ ಕನಸು ಇನ್ನೂ ಅಸ್ತಮಿಸಿಲ್ಲ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆಯಬೇಕಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.