ಮಂಗಳವಾರ, ಏಪ್ರಿಲ್ 13, 2021
32 °C

ಕೆಸರುಗದ್ದೆಯಂತಾದ ಕ್ರೀಡಾಂಗಣದಲ್ಲಿ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಸುರಿಯುವ ಮಳೆಯ ನಡುವೆ ಕೆಸರು ಗದ್ದೆಯಂತಾದ ಮೈದಾನದಲ್ಲಿ ವಿದ್ಯಾರ್ಥಿಗಳ ಓಟದ ಸ್ಪರ್ಧೆ ನಡೆಯುತ್ತಿದೆ. ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಆರಂಭವಾಗಿದೆ.ತಾಲ್ಲೂಕಿನ 13 ಪದವಿಪೂರ್ವ ಕಾಲೇಜುಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳು ಓಟ, ಗುಂಡು ಎಸೆತ, ಚಕ್ರ ಎಸೆತ, ಉದ್ದ ಜಿಗಿತ ಸೇರಿದಂತೆ 30 ಸ್ಪರ್ಧೆಗಳು ನಡೆಯುತ್ತಿವೆ. ಆಗಾಗ ಸುರಿಯುವ ಮಳೆಯ ನಡುವೆಯೇ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಅಲ್ಲಲ್ಲಿ ಕೆಸರು ರಾಡಿಯಾಗಿದ್ದು, ಆಟದ ನಡುವೆ ಮಕ್ಕಳು ಕಾಲು ಜಾರಿ ಬೀಳುವ ಘಟನೆಗಳೂ ನಡೆದಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಕ್ರೀಡಾಕೂಟ ನಡೆಯುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಆದರೆ ರಾಜ್ಯ ಮಟ್ಟದ ಕ್ರೀಡಾಕೂಟದ ತನಕ ವಿದ್ಯಾರ್ಥಿಗಳು ವಿವಿಧ ಹಂತದ ಸ್ಪರ್ಧೆ ಎದುರಿಸಬೇಕಾಗಿರುವುದರಿಂದ ಆಗಸ್ಟ್‌ನಲ್ಲಿ ಕ್ರೀಡಾಕೂಟ ನಡೆಸುವುದು ಅನಿವಾರ್ಯ ಎಂಬುದು ಜನಪ್ರತಿನಿಧಿಗಳ ಹೇಳಿಕೆ.ಮಲೆನಾಡು ಕ್ರೀಡಾಕೂಟಕ್ಕೆ ಪ್ರತ್ಯೇಕ ನೀತಿ ರೂಪಿಸುವಾಗಿ ಹಿಂದಿನ ವರ್ಷ ಕ್ರೀಡಾಕೂಟ ಉದ್ಘಾಟಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ್ದರು. ಆದರೆ ಹೊಸ ನೀತಿ ಪ್ರಕಟವಾಗಿ ಅನುಷ್ಠಾನಕ್ಕೆ ಬಂದಂತಿಲ್ಲ. ಈ ವರ್ಷ ತಡವಾಗಿ ಮಳೆಗಾಲ ಆರಂಭವಾಗಿದ್ದು, ಒಂದು ವಾರದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ನಿರಂತರ ಸುರಿಯುವ ಮಳೆಯಲ್ಲಿ ಮನೆಯಿಂದ ಹೊರಬರಲು ಯೋಚಿಸುವ ವಾತಾವರಣದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಅನುಭವಿಸುವಂತಾಗಿದೆ.`ಮಳೆಯಿಂದ ರಾಡಿಯಾದ ಕ್ರೀಡಾಂಗಣದಲ್ಲಿ ನೈಜ ಪ್ರತಿಭೆ ಪ್ರದರ್ಶನಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲಿ ಜಾರಿ ಬೀಳುತ್ತೇವೆಯೇ ಎಂಬ ಆತಂಕದಲ್ಲೇ ಆಟ ಆಡಬೇಕಾಗಿದೆ. ಮಳೆ ಕಡಿಮೆಯಾದ ಮೇಲೆ ಕ್ರೀಡಾ ಸ್ಪರ್ಧೆ ನಡೆದರೆ ಉತ್ತಮ~ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು ಹೇಳಿದರು.ಕ್ರೀಡಾಕೂಟ ಉದ್ಘಾಟನೆ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ ಶುಕ್ರವಾರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ನಗರಸಭೆ ಅಧ್ಯಕ್ಷ ರವಿ ಚಂದಾವರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶೋಭಾ ನಾಯ್ಕ, ಉಷಾ ಹೆಗಡೆ, ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಎಂ.ಎಸ್.ಪ್ರಸನ್ನಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.  ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ನಿಲೇಕಣಿ ಸರ್ಕಾರಿ ಪದವಿಪೂರ್ವ ಕಾಲೇಜು ಜಂಟಿಯಾಗಿ ಕ್ರೀಡಾಕೂಟ ಸಂಘಟಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.