ಸೋಮವಾರ, ಮೇ 17, 2021
28 °C

ಕೆಸರುಗದ್ದೆಯಾದ ಮಡೋಡಿ ಗ್ರಾಮದ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡೋಡಿ ಗ್ರಾಮಕ್ಕೆ ಹೋಗುವ ರಸ್ತೆ ಕೆಸರುಗದ್ದೆಯಾಗಿ ಪರಿಣಮಿಸಿದ್ದು ಗ್ರಾಮಸ್ಥರು ಹಾಗೂ ವಾಹನ ಸಂಚಾರಕ್ಕೆ ಸಂಚಕಾರ ಒದಗಿ ಬಂದಿದೆ.ತಾಲ್ಲೂಕಿನ ಮಡೋಡಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು, 50ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ, ಮಡೋಡಿ ಗ್ರಾಮದ ಎಡಭಾಗದ ರಸ್ತೆ ಮಣ್ಣಿನ ರಸ್ತೆಯಾಗಿದ್ದು ಸಂಪೂರ್ಣವಾಗಿ ಹದಗೆಟ್ಟಿದ್ದು ಓಡಾಟ ಮಾಡದ ಸ್ಥಿತಿಗೆ ತಲುಪಿದೆ. ಇದುವರೆಗೆ ಈ ರಸ್ತೆ ಜಲ್ಲಿಯನ್ನು ಕಂಡಿಲ್ಲ. ಮಳೆಗಾಲ ಬಂತೆಂದರೆ ಶಾಲಾ ಮಕ್ಕಳು, ದ್ವಿಚಕ್ರವಾಹನಗಳು ಓಡಾಟ ನಡೆಸುವುದೇ ದುಸ್ತರವಾಗುತ್ತದೆ. ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಈ ರಸ್ತೆಯಲ್ಲಿ ಸಾಗಿದರೆ ಸಮವಸ್ತ್ರ ತುಂಬಾ ಕೆಸರು ಮಯವಾಗಿರುತ್ತದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ. ದ್ವಿಚಕ್ರ ವಾಹನದವರು ಈ ರಸ್ತೆಯಲ್ಲಿ ಸಾಗು ವಾಗ ಬೀಳುವುದು ಸಾಮಾನ್ಯವಾದ ಸಂಗತಿಯಾಗಿದೆ.ಈ ರಸ್ತೆ ಅಭಿವೃದ್ಧಿ ಪಡಿಸುವಂತೆ ಹಲವು ಭಾರಿ ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.ಮಡೋಡಿ ಗ್ರಾಮದ 700 ಮೀಟರ್‌ವರೆಗಿನ ರಸ್ತೆಯಲ್ಲಿ ಯಾರು ಸಂಚರಿಸದ ಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ರಸ್ತೆ ದುರಸ್ತಿಯ ಬಗ್ಗೆ `ಪ್ರಜಾವಾಣಿ' ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ.ಜಿ.ನಾಗರಾಜ್ ಅವರನ್ನು ಸಂಪರ್ಕಿಸಿದಾಗ ತಾಲ್ಲೂಕು ಪಂಚಾಯಿತಿಯ ರೂ.1 ಕೋಟಿ ಅನುದಾನದಲ್ಲಿ ಬಹಳ ಹದಗೆಟ್ಟರಸ್ತೆಗಳನ್ನು ದುರಸ್ತಿ ಪಡಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಈ ಸಾಲಿನ ಅನುದಾನದಲ್ಲಿ ಇದಕ್ಕೆ ಅವಕಾಶವಿಲ್ಲದಿರುವುದರಿಂದ ಶಾಸಕರ ಗಮನಕ್ಕೆ ತಂದು ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.