ಕೆಸರುಗದ್ದೆ ಕ್ರೀಡಾಕೂಟ

7

ಕೆಸರುಗದ್ದೆ ಕ್ರೀಡಾಕೂಟ

Published:
Updated:
ಕೆಸರುಗದ್ದೆ ಕ್ರೀಡಾಕೂಟ

ಬೇಸಾಯ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಕೆಸರುಗದ್ದೆ ಕ್ರೀಡಾಕೂಟಗಳು ಬಲು ಜನಪ್ರಿಯ.  ಬೇಸಾಯದ ಚಟುವಟಿಕೆಗಳ ನಡುವೆ ಕ್ರೀಡಾಪಟುಗಳು, ಜಿಲ್ಲೆಯ ಜನರು ಮನರಂಜನೆಗಾಗಿ ಕಂಡುಕೊಂಡಿದ್ದು ಕೆಸರುಗದ್ದೆ ಕ್ರೀಡಾಕೂಟಗಳು.ನಾಟಿ ಓಟದಂತಹ ವಿಶಿಷ್ಟ ಕ್ರೀಡೆ ಕೊಡಗಿನಲ್ಲಿ ನಡೆಯುತ್ತಿರುವುದು ಇಂದು ನಿನ್ನೆಯಿಂದಲ್ಲ. ಹಿಂದಿನ ಮಹಾರಾಜರ ಕಾಲದಲ್ಲಿಯೂ ಈ ಕ್ರೀಡೆ ಪ್ರಚಲಿತದಲ್ಲಿತ್ತು. ನಾಟಿ ಓಟದ ಸಂದರ್ಭಗಳಲ್ಲಿ ರಾಜರು ಏರು ದಿಣ್ಣೆಯ ಮೇಲೆ  ಕುಳಿತಿದ್ದರೆ ಸೈನಿಕರು ಸ್ಪರ್ಧಿಗಳಾಗಿ ಓಟದಲ್ಲಿ ಪಾಲ್ಗೊಳ್ಳುತ್ತಿದ್ದರು ಎನ್ನಲಾಗಿದೆ.ಕೊಡಗಿನಲ್ಲಿ ಭತ್ತದ ಬೇಸಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ. ಭತ್ತದ ಬೇಸಾಯವನ್ನು ಮೂಲವಾಗಿಟ್ಟುಕೊಂಡು ಹಲವಾರು ಸಂಪ್ರದಾಯಗಳು ರೂಢಿಗೆ ಬಂದಿದ್ದವು. ಈಗಲೂ ಅವು ಜೀವಂತವಾಗಿದೆ. ಅಂತಹ ಸಂಪ್ರದಾಯದ ಕ್ರೀಡೆಗಳಲ್ಲಿ  ನಾಟಿ ಓಟವೂ ಒಂದು.ಬಹಳ ಹಿಂದಿನಿಂದ ಪ್ರತಿ ಗ್ರಾಮಗಳಲ್ಲಿ ಕುಟುಂಬದ ಐನ್‌ಮನೆಯ ಗದ್ದೆಗಳಲ್ಲಿ ಕೆಸರು ಗದ್ದೆ ಕ್ರೀಡಾಕೂಟ, ನಾಟಿ ಓಟದ ಸಂಪ್ರದಾಯವನ್ನು ಹಿರಿಯರು ಹುಟ್ಟುಹಾಕ್ದ್ದಿದರು. ಈ ಕೆಸರು ಗದ್ದೆ ಕ್ರೀಡಾ ಕೂಟಗಳು ನಂತರದ ವರ್ಷಗಳಲ್ಲಿ ಕ್ಷೀಣಿಸುತ್ತಾ ಬಂದವು.ಈಗ ಮತ್ತೆ ಜನಪ್ರಿಯವಾಗುತ್ತಿವೆ.

 

ಗ್ರಾಮ,ಗ್ರಾಮಗಳಲ್ಲಿ ಕೆಸರು ಗದ್ದೆ ಕ್ರೀಡೆಗಳು ನಡೆಯದಿದ್ದರೂ ಜಿಲ್ಲೆಯ ಹಲವಾರು ಭಾಗಗಳಲ್ಲಿ ಸಾಂಪ್ರದಾಯಿಕ ನಾಟಿ ಓಟದೊಂದಿಗೆ ಸಾರ್ವಜನಿಕ ಕ್ರೀಡಾಕೂಟವಾಗಿ ಮಾರ್ಪಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಕೆಸರು ಗದ್ದೆಯನ್ನೇ ವೇದಿಕೆಯನ್ನಾಗಿ ಸಿಂಗರಿಸಿ ಅಲ್ಲಿ ನಾಟಿ ನೆಟ್ಟು ನಂತರ ನಾಟಿ ಓಟದಂತಹ ಕ್ರೀಡೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿ ಮನರಂಜನೆ ಪಡೆಯುತ್ತಿದ್ದರು. ಇಲ್ಲಿನ ಸ್ಪರ್ಧಿಗಳ ನಡುವೆ ಯಾವುದೇ ಪೈಪೋಟಿ ಇರುತ್ತಿರಲಿಲ್ಲ. ಮನರಂಜನೆಯೇ ಮುಖ್ಯವಾಗಿರುತ್ತಿತ್ತು.ನಾಟಿ ಓಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ನಗದು, ಬಾಳೆ ಗೊನೆ, ತೆಂಗಿನಕಾಯಿ, ಎಲೆಅಡಿಕೆ ಮುಂತಾದವುಗಳನ್ನು ಬಹುಮಾನವಾಗಿ  ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಅದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ.ಕೊಡಗು ಜಿಲ್ಲಾ ಯುವ ಒಕ್ಕೂಟ, ನೆಹರು ಯುವ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಭಾಗಿತ್ವದಲ್ಲಿ 1993ರಿಂದ ಮಡಿಕೇರಿ ಸಮೀಪದ  ಕಗ್ಗೋಡ್ಲು ಗ್ರಾಮದಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನಡೆದುಕೊಂಡು ಬರುತ್ತಿದೆ.

 

ಗ್ರಾಮೀಣ ಭಾಗದಲ್ಲಿ ಮಾತ್ರ ನಡೆಯುತ್ತಿದ್ದ ಈ ಸ್ಪರ್ಧೆಗಳು ಕಗ್ಗೋಡ್ಲುವಿನಲ್ಲಿ ಸಾರ್ವಜನಿಕವಾಗಿ ನಡೆಯಲು ಆರಂಭಗೊಂಡ ಬಳಿಕ ಹೊಸ ರೂಪ ಪಡೆಯಿತು. ಈ ಕ್ರೀಡಾಕೂಟದಲ್ಲಿ ವಾಲಿಬಾಲ್, ಹಗ್ಗ ಜಗ್ಗಾಟ, ಕೆಸರುಗದ್ದೆ ಓಟ, ಬಾಯಲ್ಲಿ ಚಮಚ ಇರಿಸಿಕೊಂಡು ಅದರ ಮೇಲೆ ನಿಂಬೆ ಹಣ್ಣು ಇಟ್ಟುಕೊಂಡು ಓಡುವುದು ಮುಂತಾದ ಸ್ಪರ್ಧೆಗಳಿರುತ್ತವೆ. ಎಲ್ಲವೂ ಕೆಸರು ಗದ್ದೆಯಲ್ಲಿ ನಡೆಯುತ್ತವೆ.

 

ಇವುಗಳೊಂದಿಗೆ ನಾಟಿ ಓಟ ಇರುತ್ತದೆ.ಇದರಲ್ಲಿ ಭಾಗವಹಿಸುವ ಅವಕಾಶ ಸ್ಥಳೀಯರಿಗೆ ಮಾತ್ರ.ಈ  ಕ್ರೀಡಾಕೂಟದಲ್ಲಿ ಹೆಚ್ಚು ಜನರನ್ನು ಅಕರ್ಷಿಸುವುದು ಹಗ್ಗಜಗ್ಗಾಟ. ಸುರಿಯುವ ಮಳೆಯಲ್ಲಿ ಮೊಳಕಾಲುದ್ದದ ಕೆಸರಿನಲ್ಲಿ ಬಲಿಷ್ಠ ತಂಡಗಳು ಸೆಣಸಾಡುವುದನ್ನು ನೋಡುವುದು ವಿಶಿಷ್ಟ ಅನುಭವ.

ಈ ಸಂದರ್ಭ ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆ ಮುಗಿಲು ಮುಟ್ಟುತ್ತದೆ. ದಿನವಿಡೀ ನಡೆಯುವ ಈ ಕ್ರೀಡೆಗಳು ಜನಪ್ರಿಯವಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕಗ್ಗೋಡ್ಲು ಮಾತ್ರವಲ್ಲದೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗೋಣಿಕೊಪ್ಪಲು, ಕಡಂಗ, ಅರಪಟ್ಟು, ಮುತ್ತಾರುಮುಡಿ,  ಗಾಳಿಬೀಡು, ಕಾಲೂರು, ಕುಶಾಲನಗರ, ಕೊಂಡಂಗೇರಿ ಮತ್ತಿತರ ಊರುಗಳಲ್ಲಿ ನಡೆಯುತ್ತಿವೆ.ಇತ್ತೀಚೆಗೆ (ಜುಲೈ 27 ರಂದು) ಕೊಡವ ಸಾಹಿತ್ಯ ಅಕಾಡೆಮಿ ಮಡಿಕೇರಿ ಸಮೀಪದ ಮುಕ್ಕೋಡ್ಲು ಗ್ರಾಮದಲ್ಲಿ  `ಮಳೆನಮ್ಮೆ~ (ಮಳೆಹಬ್ಬ) ಹೆಸರಿನ ಕ್ರೀಡಾಕೂಟವನ್ನು ಸಂಘಟಿಸಿತ್ತು. ಮಲೆನಾಡಿನ ಜೀವನ ಶೈಲಿಯನ್ನು ನೆನಪಿಸುವ ಬಗೆಬಗೆಯ ಮನರಂಜನಾ ಕ್ರೀಡೆಗಳು ಕೆಸರುಗದ್ದೆಯಲ್ಲಿ ನಡೆದವು.ಕ್ರೀಡೆಗಳೊಂದಿಗೆ ಸಾಮೂಹಿಕ ನಾಟಿ, ಗದ್ದೆ ಉಳುಮೆ, ಪೈರು ಕೀಳುವುದು ಮುಂತಾದ ಸ್ಪರ್ಧೆಗಳನ್ನೂ ಆಯೋಜಿಸಿ ಕೆಸರುಗದ್ದೆ ಕ್ರೀಡಾಕೂಟಕ್ಕೆ ಮತ್ತೊಂದು ಆಯಾಮ ನೀಡಿತು.  ಆಗಸ್ಟ್ 6 ರಂದು ಶನಿವಾರ ಕಗ್ಗೋಡ್ಲು ಗ್ರಾಮದಲ್ಲಿ ಕೆಸರುಗದ್ದೆಯ ಒಲಂಪಿಕ್ಸ್ ಜರುಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry