ಗುರುವಾರ , ಮಾರ್ಚ್ 4, 2021
18 °C
ನಗರ ಸಂಚಾರ

`ಕೆಸರು ಗದ್ದೆ'ಯಲ್ಲೊಂದು ಕಾಲೇಜು ಮಾಡಿ...

ಗಣೇಶ ಚಂದನಶಿವ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕೆಸರು ಗದ್ದೆ'ಯಲ್ಲೊಂದು ಕಾಲೇಜು ಮಾಡಿ...

ವಿಜಾಪುರ: ಸ್ವಲ್ಪ ಮಳೆಯಾದರೂ ಸಾಕು. ರಸ್ತೆಗಳೆಲ್ಲ ಹೊಂಡದ ಸ್ವರೂಪ ಪಡೆದುಕೊಳ್ಳುತ್ತವೆ. ರಸ್ತೆಯ ಇಕ್ಕೆಲ ಗಳಲ್ಲಿ ಕಾಲಿಡುವಷ್ಟೂ ದಿನ್ನೆ ಇಲ್ಲ. ಮುಂದೆ ಸಾಗಬೇಕೆಂದರೆ ಇಕ್ಕಟ್ಟಾದ ರಸ್ತೆಯಲ್ಲಿ ಅನಿವಾರ್ಯವಾಗಿ ರಾಡಿ ನೀರಿಗೆ ಇಳಿಯಲೇಬೇಕು. ಹೆಜ್ಜೆ ಹಾಕುತ್ತಿದ್ದಂತೆ ಮೈ-ಬಟ್ಟೆಗೆ ಕೊಳೆ  ಮೆತ್ತಿಕೊಳ್ಳುತ್ತದೆ. ಹರಸಾಹಸ ಮಾಡಿ ಮುನ್ನುಗ್ಗಿದರೆ ಮುಂದೆ ಅಕ್ಷರಶಃ ಕೆಸರು ಗದ್ದೆ. ಪಾದರಕ್ಷೆಗಳು ಸುರಕ್ಷಿತವಾಗಿದ್ದರೆ ಅದು ನಿಮ್ಮ ಪುಣ್ಯ!

ಇಷ್ಟೆಲ್ಲ ಸರ್ಕಸ್ ಮಾಡಿ `ಜ್ಞಾನ ದೇಗುಲ' ತಲುಪುವಷ್ಟರಲ್ಲಿ ವಿದ್ಯಾರ್ಥಿ ಗಳು ಸುಸ್ತಾಗಿರುತ್ತಾರೆ.ಇದು ಯಾವುದೋ ಕುಗ್ರಾಮ ದಲ್ಲಿರುವ ತೋಟದ ವಸತಿ ಶಾಲೆಯ ದುಸ್ಥಿತಿ ಅಲ್ಲ. ಜಿಲ್ಲಾ ಕೇಂದ್ರವಾಗಿರುವ ಐತಿಹಾಸಿಕ ವಿಜಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಾಸ್ತವ ಸ್ಥಿತಿ.ಇಲ್ಲಿಯ ನವಬಾಗದ `ಕರಡಿ ತೋಟ'ದ  7.33 ಎಕರೆ ವಿಶಾಲ ಪ್ರದೇಶದಲ್ಲಿ ಈ ಕಾಲೇಜಿನ ಕಟ್ಟಡ ನಿರ್ಮಿಸಲಾಗಿದೆ. 2009ರ ಆಗಸ್ಟ್ ತಿಂಗಳಲ್ಲಿ ಕಾಲೇಜನ್ನು ಈ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ನಾಲ್ಕು ವರ್ಷ ಸಮೀಪಿಸುತ್ತಿದ್ದರೂ ಈ ಕಾಲೇಜಿಗೆ ಸಂಪರ್ಕ ರಸ್ತೆ ಇಲ್ಲ. ಸುರಕ್ಷತೆಗೆ ಆವರಣ ಗೋಡೆಯೂ ನಿರ್ಮಾಣವಾಗಿಲ್ಲ.`ಸಂಪರ್ಕ ರಸ್ತೆ ಮತ್ತು ಆವರಣ ಗೋಡೆ ಇಲ್ಲದೇ ಈ ಕಟ್ಟಡ ನಿರ್ಮಿಸಲಾಗಿದೆ. ನಿವೇಶನವನ್ನು ಸಮೀಕ್ಷೆ ಮಾಡಿ ಕೊಡಬೇಕಾಗಿರುವ ನಗರಸಭೆ ಅತಿಕ್ರಮಣಕಾರರ ಮುಲಾಜಿಗೆ ಬಿದ್ದು ಮೌನವಾಗಿದೆ. ಕಾಲೇಜಿನಲ್ಲಿ ಮೂಲಸೌಲಭ್ಯ-ಕಲಿಕಾ ಸಾಮಗ್ರಿ ಇದ್ದರೂ ಅಲ್ಲಿಗೆ ಹೋಗಲು ಒಂದು ಸುಸಜ್ಜಿತ ರಸ್ತೆ ಇಲ್ಲ. ಕಾಲೇಜಿಗೆ ಬರುವ ಈ ಹದಗೆಟ್ಟ ರಸ್ತೆ ಬದಿಯೇ ನಗರ ಶಾಸಕ ಡಾ.ಎಂ.ಎಂ. ಬಾಗವಾನ ಅವರ ಮನೆ ಇದೆ. ಆದರೂ, ಈ ರಸ್ತೆ ಸುಧಾರಿಸುತ್ತಿಲ್ಲ. ನಮಗೆ ಗೋಳು ತಪ್ಪುತ್ತಿಲ್ಲ' ಎಂದು ದೂರುತ್ತಾರೆ ವಿದ್ಯಾರ್ಥಿಗಳು.`ಸಂಪರ್ಕ ರಸ್ತೆ ಮತ್ತು ಆವರಣ ಗೋಡೆ ಇಲ್ಲದಿರುವುದು ಬಹುದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ. ಸಭೆ-ಸಮಾರಂಭಗಳಿಗೆ ಅತಿಥಿಗಳನ್ನು ಕರೆದುಕೊಂಡು ಬಂದರೆ ನಮಗೇ ನಾಚಿಕೆಯಾಗುತ್ತದೆ. ರಸ್ತೆ ಸರಿ ಇಲ್ಲದ ಕಾರಣ ನಗರ ಸಾರಿಗೆ ಬಸ್ ಸೇವೆ ಸಹ ಇಲ್ಲವಾಗಿದೆ' ಎನ್ನುತ್ತಾರೆ ಅಲ್ಲಿಯ ಕೆಲ ಉಪನ್ಯಾಸಕರು.`ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎ. ಹಾಗೂ ಎಂ.ಕಾಂ. ಕೋರ್ಸ್ ಗಳು ಇರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1,000 ಮಿಕ್ಕಿದೆ. 31 ಜನ ಕಾಯಂ ಉಪನ್ಯಾಸಕರು, 30 ಜನ ಅತಿಥಿ ಉಪನ್ಯಾಸಕರು ಇದ್ದಾರೆ. ಒಂಬತ್ತು ಜನ ಶಿಕ್ಷಕೇತರ ಸಿಬ್ಬಂದಿ ಇದ್ದು, ಡಿ ದರ್ಜೆ ಸಿಬ್ಬಂದಿಯ ಕೊರತೆ ಇದೆ. ರಾತ್ರಿ ಕಾವಲುಗಾರ ಇಲ್ಲ. ಈಗಿರುವ ಇಬ್ಬರು ಡಿ ದರ್ಜೆಯ ನೌಕರರಲ್ಲಿಯೇ ಒಬ್ಬರನ್ನು ರಾತ್ರಿ ಕಾವಲಿಗೆ ನಿಯೋಜಿಸಲಾಗುತ್ತಿದೆ. ಅವರು ರಜೆ ಮೇಲೆ ತೆರಳಿದರೆ ಕಾವಲುಗಾರರೇ ಇರುವುದಿಲ್ಲ. ಕೆಲ ಕಿಡಿಗೇಡಿಗಳು ಗೋಡೆ ಹಾರಿ ಒಳನುಗ್ಗಿ ಹೊಲಸು ಮಾಡುತ್ತಾರೆ. ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ' ಎನ್ನುತ್ತಾರೆ ಅವರು.ನಿಧಿ ಇದ್ದರೂ ಬಳಕೆ ಇಲ್ಲ: `ನಮ್ಮಿಂದ ತಲಾ ರೂ.150ನ್ನು ಕಾಲೇಜು ಅಭಿವೃದ್ಧಿ ನಿಧಿಗೆ ಪಡೆಯ ಲಾಗಿದೆ. ಆ ಹಣದಲ್ಲಾದರೂ ಹತ್ತಿ ಪ್ಪತ್ತು ಟ್ರ್ಯಾಕ್ಟರ್ ಗರಸು ಹಾಕಿಸ ಬಹುದು. ನಾವು ಶ್ರಮದಾನಕ್ಕೆ ಸಿದ್ಧ' ಎನ್ನುತ್ತಾರೆ ವಿದ್ಯಾರ್ಥಿ ಮುಖಂಡರು.`ಕಾಲೇಜು ಅಭಿವೃದ್ಧಿ ಸಮಿತಿಗೆ ನಗರ ಶಾಸಕರೇ ಅಧ್ಯಕ್ಷರು. ಈ ತೊಂದರೆಯನ್ನು ಅವರ ಗಮನಕ್ಕೆ ತಂದಿದ್ದೇವೆ. ನವಬಾಗ ಮುಖ್ಯ ರಸ್ತೆಯಿಂದ ಕಾಲೇಜಿನ ವರೆಗೆ ಸಿಸಿ ರಸ್ತೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ' ಎನ್ನುತ್ತಾರೆ ಪ್ರಾಚಾರ್ಯ ಪ್ರೊ.ಎ.ಟಿ. ಮುದಕಣ್ಣವರ.ಬಿದ್ದರೆ ಮನೆಗೆ: `ಈ ರಸ್ತೆಯಲ್ಲಿ ಆಯತಪ್ಪಿ ಬಿದ್ದು ಗಾಯಗೊಳ್ಳುವುದು, ಬಟ್ಟೆಯನ್ನು ಕೊಳೆ ಮಾಡಿಕೊಂಡು ಮನೆಗೆ ವಾಪಸ್ಸಾಗುವುದು ಸಾಮಾನ್ಯ. ಈ ಯಮಯಾತನೆ ಅನುಭವಿಸಲು ಒಲ್ಲದ ವಿದ್ಯಾರ್ಥಿಗಳು ಮಳೆ ಬಂದರೆ ಕೆಲ ದಿನ ಕಾಲೇಜಿಗೆ ಚಕ್ಕರ್ ಹೊಡೆ ಯುತ್ತಾರೆ' ಎಂದು ಉಪನ್ಯಾಸಕ ರೊಬ್ಬರು ಹೇಳಿದರು.ಪ್ರೇರಣೆ: `ಕಾಲೇಜಿನ ಉತ್ತಮ ಕ್ರೀಡಾಪಟುಗಳಿಗೆ, ಆಯಾ ವಿಭಾಗದಲ್ಲಿ ಸಾಧನೆ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಪನ್ಯಾಸಕರೇ ತಮ್ಮ ಕೈಯಿಂದ ಹಣ ಸೇರಿಸಿ ಬಹುಮಾನ ನೀಡಿ ನಮ್ಮನ್ನು ಉತ್ತೇಜಿಸುತ್ತಾರೆ. ಗ್ರಂಥಾಲಯದಲ್ಲಿ ರೂ.35 ಲಕ್ಷ ಮೌಲ್ಯದ 18,500 ಪುಸ್ತಕಗಳಿವೆ.ಸುಸಜ್ಜಿತ ರಸ್ತೆ, ಆಟದ ಮೈದಾನ ಮತ್ತು ಆವರಣಗೋಡೆ ನಿರ್ಮಿಸಿ ಕೊಟ್ಟರೆ ನಮ್ಮ  ಶಾಲೆ ಇನ್ನಷ್ಟು ಹೆಸರು ಮಾಡುತ್ತದೆ' ಎಂಬುದು ವಿದ್ಯಾರ್ಥಿಗಳ ಬೇಡಿಕೆ. ಅದಕ್ಕೆ ಕಿವಿಗೊಡುವವರು ಯಾರು?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.