ಕೆಸರು ಗದ್ದೆಯಾದ ಬಾಜಿ ಮಾರ್ಕೆಟ್!

ಗುರುವಾರ , ಜೂಲೈ 18, 2019
24 °C

ಕೆಸರು ಗದ್ದೆಯಾದ ಬಾಜಿ ಮಾರ್ಕೆಟ್!

Published:
Updated:

ಬೆಳಗಾವಿ: ಮಳೆ ಬಂದಿತೆಂದರೆ ಅಲ್ಲಲ್ಲಿ ಮೊಣಕಾಲುದ್ದ ಹುಗಿಯುವಷ್ಟು ಕೊಚ್ಚೆ. ವಾಕರಿಕೆ ಬರುಷ್ಟು ಕೊಳೆತು ನಾರುತ್ತಿರುವ ತ್ಯಾಜ್ಯಗಳಿಂದ ತೇಲಿ ಬರುವ ದುರ್ನಾತ. ಇದು ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪದ ಹಳೆ ಪಿ.ಬಿ. ರಸ್ತೆಯ ಪಕ್ಕದಲ್ಲಿರುವ ಉತ್ತರ ಕರ್ನಾಟಕದಲ್ಲೇ ದೊಡ್ಡದಾದ ತರಕಾರಿ ಮಾರುಕಟ್ಟೆ (ಬಾಜಿ ಮಾರ್ಕೆಟ್)ಯ ದುಸ್ಥಿತಿ.`ಫ್ರೆಶ್~ ಕಾಯಿಪಲ್ಲೆಗಳ ಸುಗಂಧ ತೇಲಿ ಬರಬೇಕಿದ್ದ ಬಾಜಿ ಮಾರ್ಕೆಟ್ ಕೆಸರು ಗದ್ದಯಂತಾಗಿದೆ. ತರಕಾರಿಗಳ ತ್ಯಾಜ್ಯಗಳ ಸೂಕ್ತ ವಿಲೇವಾರಿಯಾಗದೇ ಮಳೆಯಲ್ಲಿ ಕೊಳೆತು ದುರ್ನಾತ ಬೀರುತ್ತಿದೆ. ಕೆಸರು ಗದ್ದೆಯಂತಾಗಿರುವ ಮಾರ್ಕೆಟ್‌ನಲ್ಲಿ ತರಕಾರಿ ಖರೀದಿಸಲು ನಿತ್ಯ ಬರುವ ಸಾವಿರಾರು ಸಣ್ಣ ಪುಟ್ಟ ವ್ಯಾಪಾರಿಗಳು ತಲೆ ಮೇಲೆ ತರಕಾರಿ ಹೊರೆ ಹೊತ್ತುಕೊಂಡು ಕೈಯಲ್ಲಿ ಜೀವ ಹಿಡಿದು ಸಾಗುವಂತಾಗಿದೆ. ಕೆಸರು ಗದ್ದೆಯಲ್ಲಿ ಮೂಟೆಗಳನ್ನು ಹೊತ್ತುಕೊಂಡು ಹೋಗುವ ಹಮಾಲಿಗಳ ಸ್ಥಿತಿ ಹೇಳ ತೀರದಾಗಿದೆ.ಬೆಳಗಾವಿ ತಾಲ್ಲೂಕು ಸೇರಿದಂತೆ ಪಕ್ಕದ ತಾಲ್ಲೂಕುಗಳಲ್ಲಿ ಬೆಳೆಯುವ ಫ್ಲಾವರ್, ಟೊಮೆಟೊ, ಕ್ಯಾಬೀಜದಂತಹ ತರಕಾರಿ ಸೇರಿದಂತೆ ಹಲವು ಬಗೆಯ ಸೊಪ್ಪನ್ನು ರೈತರು ನಿತ್ಯ ಮುಂಜಾನೆ ಹಾಗೂ ಸಂಜೆ ಇಲ್ಲಿನ ಬಾಜಿ ಮಾರ್ಕೆಟ್‌ಗೆ ತರುತ್ತಿದ್ದಾರೆ. ಇಲ್ಲಿನ ಸುಮಾರು 250 ಹೋಲ್‌ಸೇಲ್ ತರಕಾರಿ ವ್ಯಾಪಾರಿಗಳು ರೈತರಿಂದ ತರಕಾರಿಯನ್ನು ಖರೀದಿಸುತ್ತಿದ್ದಾರೆ.ಬಳಿಕ ಇದನ್ನು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ಗೋವಾ, ತಮಿಳುನಾಡು, ಆಂಧ್ರಪ್ರದೇಶಗಳಿಗೂ ತರಕಾರಿಯನ್ನು ಕಳುಹಿಸಿ ಕೊಡುತ್ತಿದ್ದಾರೆ. ಅಲ್ಲದೇ, ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಸಣ್ಣ ವ್ಯಾಪಾರಿಗಳು ತರಕಾರಿ ಖರೀದಿಸಲು ಇಲ್ಲಿಗೆ ಆಗಮಿಸುತ್ತಾರೆ.ಮಾರ್ಕೆಟ್‌ನಲ್ಲಿ ತ್ಯಾಜ್ಯ ನಿರ್ವಹಣೆ ಸೂಕ್ತವಾಗಿ ನಡೆಯದೇ ಇರುವುದರಿಂದ ಮಳೆಗಾಲದಲ್ಲಿ  ನಿರ್ಮಾಣವಾಗುವ `ಕೃತಕ ಕೆಸರು ಗದ್ದೆ~ಯ ನಡುವೆಯೇ ರೈತರು ಹಾಗೂ ವ್ಯಾಪಾರಿಗಳು ಮೂಗು (ಮುಚ್ಚಿಕೊಂಡು) ಮುರಿಯುತ್ತ ವಹಿವಾಟು ನಡೆಸುವಂತಾಗಿದೆ.ಬಾಜಿ ಮಾರ್ಕೆಟ್ ಕಂಟೋನ್ಮೆಂಟ್ ಪ್ರದೇಶ ದಲ್ಲಿರುವುದರಿಂದ ತ್ಯಾಜ್ಯ ವಿಲೇವಾರಿ ಬಗ್ಗೆ ಪಾಲಿಕೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಾಗವನ್ನು ಲೀಸ್ ಪಡೆದುಕೊಂಡಿರುವ ತರಕಾರಿ ವ್ಯಾಪಾರಿಗಳೇ ತ್ಯಾಜ್ಯ ನಿರ್ವಹಣೆ ಮಾಡಲಿ ಎಂಬುದು ಕಂಟೋನ್ಮೆಂಟ್ ಲೆಕ್ಕಾಚಾರ. ಇಲ್ಲಿನ ಮಾರ್ಕೆಟ್ ಅನ್ನು ಎಪಿಎಂಸಿಗೆ ಸ್ಥಳಾಂತರಿಸಿದರೆ, ಸರ್ಕಾರದ ನಿಯಂತ್ರಣಕ್ಕೆ ಒಳಗಾಗಿ, ತಮ್ಮ `ಹಿಡಿತ~ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ದಲ್ಲಾಳಿಗಳು ಮಾರ್ಕೆಟ್ ಸ್ಥಳಾಂತರಕ್ಕೆ ಅಡ್ಡಿಪಡಿಸು ತ್ತಿದ್ದಾರೆ ಎಂದು ತರಕಾರಿ ಬೆಳೆಗಾರರು ಆರೋಪಿಸುತ್ತಾರೆ.ನಿತ್ಯ ಮಾರ್ಕೆಟ್‌ಗೆ ಬರುವ ಸಾವಿರಾರು ಲೋಡ್ ತರಕಾರಿಗಳ ತ್ಯಾಜ್ಯವು ಇಲ್ಲಿಯೇ ಬೀಳುತ್ತವೆ. ಇದನ್ನು ನಿತ್ಯ ವಿಲೇವಾರಿ ಮಾಡದೇ ಇರುವುದರಿಂದ ಮಳೆಯಲ್ಲಿ ಅವುಗಳು ಕೊಳೆತು ನಾರುತ್ತಿವೆ. ರೈತರು ತರುವ `ಫ್ರೆಶ್~ ತರಕಾರಿಗಳಿಗೆ ಇಲ್ಲಿನ ರಾಡಿ ನೀರು ಅಂಟಿಕೊಳ್ಳುತ್ತಿವೆ. ಇದರಿಂದಾಗಿ ಅವು ಬಹುಬೇಗನೆ ಕೊಳೆಯುತ್ತಿರುವುದರಿಂದ ಗ್ರಾಹಕರಿಗೆ ಹಾನಿಯಾಗುತ್ತದೆ.ಇಲ್ಲಿನ ಜಾಜಿ ಮಾರ್ಕೆಟ್‌ನಲ್ಲಿ ದಿನೇ ದಿನೇ ಸರಿಯಾಗಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಆರೋಗ್ಯಕರ ವಾತಾವರಣ ದಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು. ಇಲ್ಲವೇ ಬಾಜಿ ಮಾರ್ಕೆಟ್ ಅನ್ನು ಎಪಿಎಂಸಿಗೆ ಸ್ಥಳಾಂತರ ಗೊಳಿಸಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಿತ್ಯ ತರಕಾರಿ ಹೊತ್ತು ತರುವ ರೈತರು ಒತ್ತಾಯಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry