ಬುಧವಾರ, ಏಪ್ರಿಲ್ 14, 2021
23 °C

ಕೆಸಿಸಿ ಸಾಲ: ನಿರ್ಬಂಧ ಸಡಿಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮುಂಗಾರು ವೈಫಲ್ಯ ಮತ್ತು ಹಲವು ರಾಜ್ಯಗಳಲ್ಲಿ ಬರ  ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ   ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ)ನ ಸಾಲ ಮರುಪಾವತಿ ಮೇಲಿನ ನಿರ್ಬಂಧಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಸಡಿಲಗೊಳಿಸಿದೆ.

ಒಂದು ವರ್ಷದೊಳಗೆ `ಕೆಸಿಸಿ~ ಸಾಲ ಮರುಪಾವತಿ ಮಾಡಬೇಕು ಎನ್ನುವ ಕಡ್ಡಾಯ ನಿಯಮ ತೆಗೆದುಹಾಕಿರುವ `ಆರ್‌ಬಿಐ~, ಸಾಲ ಮರು ಪಾವತಿ ಅವಧಿ ನಿಗದಿಪಡಿಸುವ ಸ್ವಾತಂತ್ರ್ಯವನ್ನು ಬ್ಯಾಂಕುಗಳಿಗೆ ನೀಡಿದೆ. ಇದರಿಂದ 10ಕೋಟಿಗೂ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ.

`ಬೆಳೆ ಕಟಾವು ಮತ್ತು ಮಾರುಕಟ್ಟೆ ಅವಧಿ ಆಧರಿಸಿ ಸಾಲ ಮರುಪಾವತಿ ಅವಧಿ ನಿರ್ಧರಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಜತೆಗೆ `ಕೆಸಿಸಿ~ ಕಾರ್ಡ್ ಹೊಂದಿರುವ ರೈತರಿಗೆ ಬೆಳೆ ವಿಮೆ ಸೌಲಭ್ಯವನ್ನೂ ಕಡ್ಡಾಯವಾಗಿ ನೀಡುವಂತೆ ಸೂಚಿಸಲಾಗಿದೆ.

ಮುಂಗಾರು ವೈಫಲ್ಯ ಮತ್ತು ಬರದಿಂದ ದೇಶದ ಗ್ರಾಮಿಣ ಪ್ರದೇಶದ ರೈತರ ಮೇಲಾಗಿರುವ ಆರ್ಥಿಕ ಪರಿಣಾಮಗಳ ಕುರಿತು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಗಮನ ಸೆಳೆದ ಬೆನ್ನ ಹಿಂದೆಯೇ `ಆರ್‌ಬಿಐ~ ಈ  ನಿರ್ಧಾರ ಪ್ರಕಟಿಸಿದೆ.

`ಮುಂಗಾರು ವೈಫಲ್ಯ ಮತ್ತು ಬರದಿಂದ ಕೃಷಿ ಸಾಲ ಸಮಸ್ಯೆ ಉಂಟಾಗಿದೆ ಎನ್ನುವುದನ್ನು `ಆರ್‌ಬಿಐ~ ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಅಲ್ಲಗಳೆದಿದ್ದಾರೆ. ಈಗಾಗಲೇ ಇದಕ್ಕೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಉನ್ನತಾಧಿಕಾರ ಹೊಂದಿರುವ ಸಚಿವರ ಸಮಿತಿ (ಇಜಿಒಎಂ) ಕಳೆದ ವಾರ ಬರ ಪೀಡಿತ ಪ್ರದೇಶಗಳ ರೈತರಿಗೆ ಶೇ 50ರಷ್ಟು ಸಬ್ಸಿಡಿ ದರದಲ್ಲಿ ಡೀಸೆಲ್  ಮತ್ತು 2 ಸಾವಿರ ಕೋಟಿ ವಿಶೇಷ ಸಹಾಯಧನ ನೀಡಲು ಒಪ್ಪಿಗೆ ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.