ಮಂಗಳವಾರ, ಜನವರಿ 21, 2020
28 °C

ಕೆ–ಸೆಟ್‌: ಪ್ರಶ್ನೆಗಳ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಮೂರು ವರ್ಷಗಳ ಬಳಿಕ ಮೈಸೂರು ವಿಶ್ವವಿದ್ಯಾಲಯವು ಭಾನು ವಾರ ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (ಕೆ–ಸೆಟ್‌) ಪ್ರಶ್ನೆಪತ್ರಿಕೆಯಲ್ಲಿ ಹಲವು ತಪ್ಪು ಪ್ರಶ್ನೆಗಳು ನುಸುಳಿ ಅವಾಂತರ ಸೃಷ್ಟಿಸಿದವು. ಇಂಗ್ಲಿಷ್‌ನ ಯಥಾವತ್‌ ಅನುವಾದದ ಪರಿಣಾಮ ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆ ಭರ್ತಿ ಮಾಡುವುದೇ ಕಷ್ಟವಾಯಿತು.



ಸಾಮಾನ್ಯ ಪ್ರಶ್ನೆ ಪತ್ರಿಕೆ 1ರ ಬುಕ್‌ ಲೆಟ್ ಕೋಡ್ ‘ಝಡ್’ ಸರಣಿಯ 43ನೇ ಪ್ರಶ್ನೆಯ ವಿವರಣೆ ಕನ್ನಡ ದಲ್ಲಿಯೇ ಒಂದು, ಇಂಗ್ಲಿಷ್‌ನಲ್ಲಿ ಮತ್ತೊಂದಾಗಿದ್ದರಿಂದ ಅಭ್ಯರ್ಥಿಗಳು ಯಾವ ಉತ್ತರ ಬರೆಯಬೇಕು ಎಂಬ ಗೊಂದಲಕ್ಕೆ ಒಳಗಾದರು.



ಕನ್ನಡ ಅನುವಾದದಲ್ಲಿ ‘ಜನವರಿ 12, 1980ರಂದು ಭಾನುವಾರ. ಆದರೆ, 1981ರ ಜನವರಿ 14 ಯಾವ ವಾರವಾಗುತ್ತದೆ?’ ಎಂಬ ಪ್ರಶ್ನೆ ಇತ್ತು. ಪ್ರಶ್ನೆಪತ್ರಿಕೆಯ ಬಲಭಾಗದಲ್ಲಿ ಮುದ್ರಿಸ ಲಾದ ಇಂಗ್ಲಿಷ್‌ ಪ್ರಶ್ನೆಯಲ್ಲಿ, ‘ಜನವರಿ 12, 1980ರಂದು ಶನಿವಾರ’ ಎಂದು ಮುದ್ರಣವಾಗಿತ್ತು!



ಪ್ರಶ್ನೆಪತ್ರಿಕೆ ತಯಾರಿಸಿದವರು ಮಾಡಿದ ಅವಾಂತರ ಅಷ್ಟಕ್ಕೇ ಮುಗಿ ಯಲಿಲ್ಲ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದ ಪ್ರಶ್ನೆಪತ್ರಿಕೆ ಸರಣಿ ‘ಕೆ–1413’ರ 55ನೇ ಪ್ರಶ್ನೆ ಯಲ್ಲಿ ಸಮರ್ಥನೆ (ಎ–ಅಸರ್ಷನ್‌) ಮತ್ತು ಕಾರಣ (ಆರ್‌–ರೀಸನ್‌) ಗಳಿವೆ. ‘ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ, ಭಾರತದಲ್ಲಿನ ಮಾಧ್ಯಮಗಳಿಗೆ ಪಾವತಿಸಿದ ಸುದ್ದಿಯು ಆದಾಯದ ಒಂದು ಪೂರಕ ಮೂಲವಾಗಿತ್ತು’ ಎಂದು ಬರೆಯಲಾಗಿದೆ.



ಅರ್ಥ ತಕ್ಷಣಕ್ಕೆ ಹೊಳೆಯದೇ ಕಂಗಾಲಾದ ವಿದ್ಯಾರ್ಥಿ ಇಂಗ್ಲಿಷ್‌ ಭಾಷೆಯ ಪ್ರಶ್ನೆ ಓದಿದಾಗ ಅಲ್ಲಿ ‘ಪೇಡ್‌ ನ್ಯೂಸ್‌’ ಎಂಬುದೇ ಇಲ್ಲಿ ‘ಪಾವತಿಸಿದ ಸುದ್ದಿ’ಯಾಗಿತ್ತು! ಆದರೆ, ಎಲ್ಲ ಕನ್ನಡ ಸುದ್ದಿ ಮಾಧ್ಯಮಗಳು ಪೇಡ್‌ ನ್ಯೂಸ್‌ ಪದವನ್ನು ‘ಕಾಸಿಗಾಗಿ ಸುದ್ದಿ’ ಎಂದೇ ಬಳಸುತ್ತಿವೆ.



56ನೇ ಪ್ರಶ್ನೆಯ ಕನ್ನಡ ಅನುವಾದ ಓದಿದವರಿಗೆ ಇನ್ನೊಂದು ಆಘಾತ ಎದುರಾಗಿತ್ತು. ಆ ಪ್ರಶ್ನೆಯ ಸಮರ್ಥನೆ ಮತ್ತು ಕಾರಣ ಎರಡೂ ‘ಆರ್‌’ (ಎ–ಸಮರ್ಥನೆ ಎಂದಾಗಬೇಕಿತ್ತು) ಎಂದೇ ಬರೆಯಲಾಗಿತ್ತು. ಇಂಗ್ಲಿಷ್‌ನಲ್ಲಿ ಸಮರ್ಥನೆಯ ಭಾಗ ‘ಎ’ನಲ್ಲಿದೆ. ಕಾರಣ ‘ಆರ್‌’ನಲ್ಲಿದೆ.



ಕರ್ನಾಟಕ ವಿಶ್ವವಿದ್ಯಾಲಯದ ನೋಡಲ್‌ ಕೇಂದ್ರದ ವ್ಯಾಪ್ತಿಯ 6 ಕಾಲೇಜುಗಳಲ್ಲಿ ಪರೀಕ್ಷೆ ನಡೆಯಿತು. ಕೆಲ ಅಭ್ಯರ್ಥಿಗಳ ಆಸನ ವ್ಯವಸ್ಥೆಯನ್ನು ಕರ್ನಾಟಕ ವಿ.ವಿ ಆವರಣದಲ್ಲಿ ಮಾಡಿದ್ದ ಪರೀಕ್ಷೆ ಆಯೋಜಕರು ವೆಬ್‌ ಸೈಟ್‌ನಲ್ಲಿ ಮಾತ್ರ ಕೆಸಿಡಿ ಕಾಲೇಜಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಿಸಿದ್ದರು. ಮೊದಲು ಅಲ್ಲಿಗೆ ಹೋದ ವಿದ್ಯಾರ್ಥಿಗಳು ಮತ್ತೆ ಕ.ವಿ.ವಿ ಆವರಣಕ್ಕೆ ಬರುವಷ್ಟರಲ್ಲಿ ಅರ್ಧ ಗಂಟೆ ಕಳೆದುಹೋಗಿತ್ತು.



ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪರೀಕ್ಷಾ ಸಂಯೋಜಕರು, ‘ನಾವು 15 ದಿನಗಳ ಮುಂಚೆಯೇ ಎಲ್ಲ ವ್ಯವಸ್ಥೆ ಮಾಡಿ ಕೊಂಡಿದ್ದು, ಆಸನದ ವ್ಯವಸ್ಥೆಯ ಬಗ್ಗೆ ಯಾವುದೇ ಗೊಂದಲಗಳಿರಲಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)