ಕೆ. ಎಚ್. ರಂಗನಾಥ್: ನಮ್ಮ ಕಾಲದ ಭೀಷ್ಮ

7

ಕೆ. ಎಚ್. ರಂಗನಾಥ್: ನಮ್ಮ ಕಾಲದ ಭೀಷ್ಮ

Published:
Updated:

ಕೆ.ಎಚ್.ರಂಗನಾಥ ಅವರು ನನ್ನ ಸಮಾಜವಾದಿ ಯೌವನದ ಹುರುಪಿನ ದಿನಗಳಲ್ಲೇ ನನಗೆ ಪರಿಚಿತರಾಗಿದ್ದರು. ನನಗೆ ಪ್ರಿಯರಾಗಿದ್ದ ಶಾಂತವೇರಿ ಗೋಪಾಲಗೌಡರಂಥವರಿಗೂ ಇವರು ಪ್ರಿಯರಾಗಿದ್ದರು. ರಂಗನಾಥರನ್ನು ಭೇಟಿಯಾದಾಗಲೆಲ್ಲ ಸದ್ಯದ ರಾಜಕಾರಣದ ಬಗ್ಗೆ ಮಾತನಾಡುತ್ತ ನಾವು ನಂಬಿದ ತತ್ವಗಳನ್ನು ಅವರ ಜೊತೆ ಶೋಧಿಸಿಕೊಳ್ಳುತ್ತಿದ್ದೆ. ನನ್ನ `ಸಂಸ್ಕಾರ~ ಕಾದಂಬರಿ ಪ್ರಕಟವಾದ ಒಂದೆರಡು ವರ್ಷಗಳಲ್ಲಿ ಅವರ ಜೊತೆ ನಡೆಸಿದ ಚರ್ಚೆ ಚೆನ್ನಾಗಿ ನೆನಪಿದೆ. ಕಾದಂಬರಿಯಲ್ಲಿನ ಒಂದು ಮಾತು ರಂಗನಾಥರನ್ನು ಬಹಳ ಆಳವಾಗಿ ಕಲಕಿದಂತೆ ತೋರಿತ್ತು. ನನ್ನಂತೆ ಸಾಮಾಜಿಕ ಬದಲಾವಣೆಯ ಸಾಧ್ಯತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರಿಂದಲೇ ಕಾದಂಬರಿಯ ಆ ಮಾತು ಇವರನ್ನು ಕೆಣಕಿತ್ತು. ನನ್ನ ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ. `ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನಾರಣಪ್ಪನನ್ನು ಬಿಡಲಿಲ್ಲ~ ಎಂಬುದು ಆ ಮಾತು.

ರಂಗನಾಥರು ಇದೊಂದು ತನ್ನೊಳಗಿನ ತಾಕಲಾಟವೆಂಬಂತೆ ನನ್ನನ್ನು ಕೇಳಿದ್ದರು: `ನಾವೆಲ್ಲರೂ ಪ್ರಯತ್ನಿಸುತ್ತಿರುವ ಮನುಷ್ಯನ ಸ್ವಭಾವದ ಬದಲಾವಣೆಯ ಹೋರಾಟ ಕೊನೆಗೂ ನಿಷ್ಫಲವೇ ಅನಂತಮೂರ್ತಿ~ ಎಂದು. ಇದು ಅವರು ತಮಗೇ ಹೇಳಿಕೊಂಡಂತೆ ಕಂಡಿತ್ತು. ಆ ಕಾಲದಲ್ಲಿ ನನ್ನ ಓದುಗರಲ್ಲಿ ಹೀಗೆ ಒಂದು ಕೃತಿಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಶ್ನೆಯನ್ನು ಎತ್ತಬಲ್ಲವರು ಬಹಳ ಜನ-ರಾಜಕೀಯದಲ್ಲಂತೂ-ಇರಲೇ ಇಲ್ಲ. ನಾನೂ, ರಂಗನಾಥರೂ, ಗೋಪಾಲಗೌಡರೂ ಈ ಪ್ರಶ್ನೆಯನ್ನು ಎತ್ತಿಕೊಂಡು ದಿಗ್ಭ್ರಮೆಯಲ್ಲಿ ಮಾತನಾಡಿಕೊಂಡಿದ್ದೆವು.

ಈಚೆಗೆ ರಂಗನಾಥ್ ನನ್ನ ಜೊತೆ ಆತ್ಮೀಯವಾಗಿ ಮಾತಿಗೆ ಸಿಕ್ಕಿದ್ದು ನಾವೆಲ್ಲ ಒಟ್ಟಾಗಿ ಕಾಗೋಡು ಸತ್ಯಾಗ್ರಹದ ಪ್ರಾಯಶಃ ಸುವರ್ಣ ಮಹೋತ್ಸವಕ್ಕೆಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರ ಜೊತೆ ಕಾಗೋಡಿಗೆ ಹೋಗಿದ್ದಾಗ. ಸಮಾಜವಾದಿ ಆಂದೋಲನದ ಹಿಂದಿದ್ದ ಎಲ್ಲ ನೆನಪುಗಳು ಅವತ್ತು ಬಂದವು. ಗೆಳೆಯ ಕಾಗೋಡು ತಿಮ್ಮಪ್ಪನವರಂತೂ ಅದ್ಭುತವಾಗಿ ಅದೇ ಹಿಂದಿನ ಹುರುಪಿನಲ್ಲಿ ಮಾತನಾಡಿದ್ದನ್ನು ಕೇಳಿ ನಾವೆಲ್ಲರೂ ಎಸ್.ಎಂ.ಕೃಷ್ಣರಾದಿಯಾಗಿ ಅಚ್ಚರಿಗೊಂಡಿದ್ದೆವು. ನಾನು ಮಾತನಾಡುವಾಗ ನನಗೇ ಮೈಮರೆತು ಏಕವಚನದಲ್ಲಿ ಕಾಗೋಡು ತಿಮ್ಮಪ್ಪನವರನ್ನು ಸಂಬೋಧಿಸಿ `ನೀನು ನಿಜವಾಗಿ ಬದಲಾಗಲೇ ಇಲ್ಲ ಹಾಗೆಯೇ ಉಳಿದಿದ್ದೀಯೆ~ ಎಂದಿದ್ದೆ. ಆಗ  ರಂಗನಾಥರು ಎಸ್.ಎಂ.ಕೃಷ್ಣರ ಜೊತೆಗೆ ಯಾಕೆ ಸಮಾಜವಾದಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಬೇಕಾಯ್ತು ಎಂಬುದನ್ನು ಕೊಂಚ ತಮಾಷೆಯಾಗಿಯೇ ವಿವರಿಸಿದ್ದರು. `ನಮ್ಮ ಅವತ್ತಿನ ಪಾರ್ಟಿಯಲ್ಲಿ ಇದ್ದವರು ಹತ್ತರಿಂದ ಹದಿನೈದು ಜನರಾದರೂ ಹತ್ತು ಹದಿನೈದು ಪಕ್ಷದವರಂತೆ  ಪರಸ್ಪರ ಜಗಳವಾಡುವುದನ್ನು ತಾಳಿಕೊಳ್ಳಲಾರದೆ ಕಾಂಗ್ರೆಸ್ ಸೇರಬೇಕಾಯ್ತು~ ಎಂದಿದ್ದರು. ಈ ಮಾತಿಗೆ ಎಸ್. ಎಂ.ಕೃಷ್ಣರ ಸಮ್ಮತಿಯೂ ಇತ್ತೆಂದು ಹೇಳಿದರೆ ಕೃಷ್ಣ ಅವರು ಅದನ್ನು ಅಲ್ಲಗಳೆಯಲಾರರೆಂದು ತಿಳಿದಿದ್ದೇನೆ.

ನನಗಂತು ಕಾಗೋಡು ತಿಮ್ಮಪ್ಪನವರ ಬಗೆಗೆ ಅನ್ನಿಸಿದಂತೆ ರಂಗನಾಥರ ಬಗೆಗೂ ಅನ್ನಿಸಿತ್ತು, `ಇವರು ಇನ್ನೂ ನಮ್ಮವರೇ ಆಗಿದ್ದಾರೆ~ ಎಂದು. ರಂಗನಾಥರು ಯಾರನ್ನೂ ಮೆಚ್ಚಿಸಲು ದಾಕ್ಷಿಣ್ಯದ ಸುಳ್ಳುಗಳನ್ನು ಹೇಳುತ್ತಿರಲಿಲ್ಲ. ತನ್ನನ್ನು ಸುಲಭವಾಗಿ ಒಪ್ಪಿಕೊಳ್ಳದಂತೆ ನಿಷ್ಠುರವಾಗಿ ಬದುಕುತ್ತಿದ್ದ ಇವರು, ನಮ್ಮ ಕಾಲದ ಅತ್ಯಂತ ದೊಡ್ಡ ದಲಿತ ನಾಯಕರಲ್ಲಿ ಒಬ್ಬರಾದರೂ ಹಾಗೆಂದು ತಕ್ಷಣದ ಪ್ರಯೋಜನಕ್ಕಾಗಿ ಪರದಾಡುವ ದಲಿತರು ಇವರನ್ನು ಅಷ್ಟು ಮೆಚ್ಚುತ್ತಿರಲಿಲ್ಲ.

ಈತ ಎಲ್ಲ ಜಾತಿಗಳನ್ನು ಮೀರಿದವರಂತೆ ಕಾಣುತ್ತಾರೆ ಎಂಬುದೇ ಒಂದು ಗುಣದ ಬದಲಾಗಿ ನ್ಯೂನತೆಯಂತೆ ಕಾಣುವ ಕೆಟ್ಟ ಕಾಲ ನಮ್ಮದು. ಜನ ಸಾಮಾನ್ಯರ ನಡುವಿನ ರಾಜಕೀಯದಲ್ಲಿ ಮುಳುಗಿದ್ದೂ ಸತ್ಯ ನಿಷ್ಠುರತೆಯನ್ನು ಕಾಪಾಡಿಕೊಂಡು ಬಂದ ರಾಜಕಾರಣಿಗಳು ನಮ್ಮ ನಡುವೆ ಅತಿ ವಿರಳ. ಅಂತಹುದರಲ್ಲಿ ರಂಗನಾಥ ಅವರು ಅಖಿಲ ಭಾರತ ಮಟ್ಟದಲ್ಲಿ ಅಪರೂಪದವರಲ್ಲಿ ಅಪರೂಪದವರು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಆರಿಸಿಬರುತ್ತಿದ್ದರು.  ಜೀವನದಲ್ಲಿ ಇಂಥ ಸಾಧನೆ ಮಾಡಿದವರಿಗೆ ಸಂಸ್ಕಾರದಲ್ಲಿ ಬರುವ ಮಾತು ಬಾಧಿಸಿದ್ದರೆ ಆಶ್ಚರ್ಯವಿಲ್ಲ. ನಾನು ಜಾತಿ ಬಿಟ್ಟರೂ ಜಾತಿ ನನ್ನನ್ನು ಬಿಡುವುದಿಲ್ಲ ಎನ್ನುವ ಸತ್ಯದ ಅರಿವು ಇದ್ದೂ `ಜಾತಿ ಬಿಟ್ಟವರಂತೆ ಹೋರಾಡಿ~ ಸಮಷ್ಠಿಯ ಹಿತಚಿಂತನೆ ಮಾಡಿದ ನಮ್ಮ ನಡುವಿನ ಮನುಷ್ಯರೆಂದರೆ ಎಚ್.ಕೆ.ರಂಗನಾಥರು. ಇಂಥವರನ್ನು ಇಂದಿನ ಪುಂಡಾಟಿಕೆಯ ರಾಜಕಾರಣ ತನ್ನ ಕ್ಷೇಮ ಸಾಧನೆಗಾಗಿಯೇ ಮರೆಯುವುದು ಸಹಜ. ಆದರೆ ಕರ್ನಾಟಕದ ರಾಜಕಾರಣದಲ್ಲಿ ಕೆಲವು ವಿಷಯಗಳಿಗಾದರೂ ಹೆಮ್ಮೆಪಡುವ ನಮ್ಮಂಥವರಿಗೆ ಯಾವತ್ತೂ ರಂಗನಾಥರು ಭೀಷ್ಮರಂತೆ ಕಠಿಣವಾದ ಮಾರ್ಗಗಳನ್ನು ಹುಡುಕಿದವರಾಗಿ ಕಾಣುತ್ತಾರೆ.

ಮೇಲಿನ ನನ್ನ ಮಾತುಗಳು ಗಾಢವಾಗಲೆಂದು ಇಲ್ಲೊಂದು ಟಿಪ್ಪಣಿ ಸೇರಿಸುತ್ತೇನೆ-ನನಗೆ ಇಷ್ಟವಾದ ಇನ್ನೊಬ್ಬ ರಾಜಕಾರಣಿಯೆಂದರೆ ಬಸವಲಿಂಗಪ್ಪನವರು. ರಂಗನಾಥರಿಗಿಂತ ಹಲವು ವಿಷಯಗಳಲ್ಲಿ ಬಸವಲಿಂಗಪ್ಪ ಭಿನ್ನರು. ಇವರೂ ಜಾತಿವಾದಿಯಲ್ಲ; ಆದರೆ ದಲಿತ ಪ್ರಜ್ಞೆಯ ಸ್ಫೋಟಕ್ಕೆ  ಕಾರಣರಾಗಿದ್ದರು. ಅವರನ್ನು ಒಮ್ಮೆ ಕೇಳಿದ್ದೆ: `ನೀವು ತುಂಬಾ ಗೌರವಿಸುವ ರಾಜಕಾರಣಿ ಯಾರು?~ ಎಂದು. ಅದಕ್ಕೆ ಅವರು ನನಗೆ ಅಚ್ಚರಿಯಾಗುವಂತೆ ಹೇಳಿದ್ದರು: `ಕೆ.ಎಚ್. ರಂಗನಾಥ್~. ಇಬ್ಬರೂ ಭಿನ್ನವಾಗಿ, ಆದರೆ ಒಟ್ಟಾಗಿ ನಮಗೆ ಕರ್ನಾಟಕದ ರಾಜಕಾರಣದ ಬಗ್ಗೆ ಹೆಮ್ಮೆ ತರುವಂಥವರು.

(ಅಭಿನವ ಪ್ರಕಾಶನ ಹೊರತರುತ್ತಿರುವ ಕೆ.ಎಚ್. ರಂಗನಾಥ್ ಕುರಿತ ಪುಸ್ತಕಕ್ಕಾಗಿ ಬರೆದ ಲೇಖನ.)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry