ಗುರುವಾರ , ಜನವರಿ 23, 2020
21 °C

ಕೇಂದ್ರಕ್ಕೆ ಅಭಿಪ್ರಾಯ ಸಲ್ಲಿಸದ ರಾಜ್ಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜೀವವೈವಿಧ್ಯ ಸೂಕ್ಷ ತಾಣವಾದ ಪಶ್ಚಿಮಘಟ್ಟದ ಬಗ್ಗೆ  ಮಾಧವ ಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿ ನೀಡಿದ್ದ ವರದಿಯ ಬಗ್ಗೆ ವಿವಿಧ ರಾಜ್ಯಗಳು ಇನ್ನೂ ತಮ್ಮ ಅಭಿಪ್ರಾಯ ಸಲ್ಲಿಸಿಲ್ಲವಾದ್ದರಿಂದ, ಈ ವರದಿ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.ಕೇಂದ್ರದ ಪರಿಸರ ಇಲಾಖೆಯು ಪಶ್ಚಿಮಘಟ್ಟ ಹಾದು ಹೋಗುವ ರಾಜ್ಯಗಳಿಗೆ ವರದಿ ಕುರಿತು ಅಭಿಪ್ರಾಯ ಸಲ್ಲಿಸಲು ಸೂಚಿಸಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಮಾತ್ರ ಸ್ಪಂದಿಸಿ ಅಭಿಪ್ರಾಯ ಕಳುಹಿಸಿದೆ. ಆದರೆ ಉಳಿದ ರಾಜ್ಯಗಳಾದ ಕೇರಳ, ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರ ಇನ್ನೂ ಅಭಿಪ್ರಾಯವನ್ನು ಕಳುಹಿಸಿಲ್ಲ.ಅಭಿಪ್ರಾಯ ಸಲ್ಲಿಸಬೇಕೆಂಬುದನ್ನು ನೆನಪಿಸಿ ಪರಿಸರ ಸಚಿವಾಲಯವು ಕಳೆದ ಮೂರು ತಿಂಗಳಲ್ಲಿ ರಾಜ್ಯಗಳಿಗೆ ಮೂರು ಬಾರಿ ಪತ್ರಗಳನ್ನು ಬರೆದಿದ್ದರೂ ಇನ್ನೂ ಅಭಿಪ್ರಾಯ ಕೇಂದ್ರವನ್ನು ತಲುಪಿಲ್ಲ ಎಂದೂ ಮೂಲಗಳು ತಿಳಿಸಿವೆ.ಅಭಿಪ್ರಾಯ ಸಲ್ಲಿಸದ ರಾಜ್ಯಗಳಾದ ಕೇರಳ, ಗೋವಾ ಮತ್ತು ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ, ತಮಿಳುನಾಡಿನಲ್ಲಿ ಎಐಎಡಿಎಂಕೆ ಆಡಳಿತ ನಡೆಸುತ್ತಿದೆ.ಗಾಡ್ಗೀಳ್ ಸಮಿತಿಯು ಪಶ್ಚಿಮಘಟ್ಟವನ್ನು ಜೀವವೈವಿಧ್ಯ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ್ದು, ಈ ವ್ಯಾಪ್ತಿಯಲ್ಲಿನ 142 ತಾಲ್ಲೂಕುಗಳನ್ನು ಜೀವವೈವಿಧ್ಯ ಸೂಕ್ಷ್ಮ ವಲಯ 1, 2 ಮತ್ತು 3 ಎಂದು ವರ್ಗೀಕರಿಸಿದೆ.ಜೀವವೈವಿಧ್ಯ ಸೂಕ್ಷ್ಮ ವಲಯ 1ರಲ್ಲಿ ಯಾವುದೇ ದೊಡ್ಡ ಅಣೆಕಟ್ಟು ನಿರ್ಮಿಸಬಾರದು ಎಂದೂ ಸಮಿತಿ ಶಿಫಾರಸು ಮಾಡಿದೆ.ಈಗಾಗಲೇ ಅಭಿಪ್ರಾಯ ಸಲ್ಲಿಸಿರುವ ಕರ್ನಾಟಕ ಕೂಡ ಈ ವರದಿಯನ್ನು ಸಂಪೂರ್ಣ ಒಪ್ಪಿಕೊಂಡಿಲ್ಲ ಎಂದೂ ಮೂಲಗಳು ತಿಳಿಸಿವೆ.ಗುಜರಾತ್ ಗಡಿ ಭಾಗದ ಮಹಾರಾಷ್ಟ್ರದಲ್ಲಿ ಆರಂಭವಾಗುವ 1600 ಕಿ.ಮೀ. ಉದ್ದದ ಪಶ್ಚಿಮಘಟ್ಟ ಶ್ರೇಣಿ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳ ಮೂಲಕ ಹಾದು ಕನ್ಯಾಕುಮಾರಿ ಬಳಿ ಕೊನೆಯಾಗುತ್ತದೆ.

ಪ್ರತಿಕ್ರಿಯಿಸಿ (+)