ಗುರುವಾರ , ನವೆಂಬರ್ 14, 2019
22 °C

ಕೇಂದ್ರಕ್ಕೆ ಡಿಎಂಕೆ ಮೈತ್ರಿ ಅಬಾಧಿತ

Published:
Updated:

ಚೆನ್ನೈ (ಪಿಟಿಐ): ಕೇಂದ್ರದ ಯುಪಿಎ ಸರ್ಕಾರದ ಜತೆಗಿನ ಮೈತ್ರಿ ಮುಂದುವರಿಸಿಕೊಂಡು, 2ಜಿ ಸ್ಪೆಕ್ಟ್ರಂ ಹಗರಣವನ್ನು ಕಾನೂನು ಸಮರದ ಮೂಲಕ ಎದುರಿಸಲು ಡಿಎಂಕೆ ತೀರ್ಮಾನಿಸಿದೆ.ಹಗರಣದ ಆರೋಪಿಯಾಗಿರುವ ಪಕ್ಷದ ಸಂಸದೆ ಕನಿಮೊಳಿ ಅವರನ್ನು ಜೈಲಿಗೆ ಹಾಕಿರುವುದರಿಂದ ಡಿಎಂಕೆಯು ಕೇಂದ್ರ ಸರ್ಕಾರದ ಸಂಬಂಧ ಕಡಿದುಕೊಳ್ಳುತ್ತದೆ ಎಂಬ ಊಹಾಪೋಹಗಳಿಗೆ ಇದರಿಂದ ತೆರೆ ಬಿದ್ದಂತಾಗಿದೆ.ಕನಿಮೊಳಿ ಅವರನ್ನು ಬಂಧಿಸುವ ಮೂಲಕ ಸಿಬಿಐ ದ್ವಿಮುಖ ಧೋರಣೆ ಅನುಸರಿಸುತ್ತಿದೆ ಎಂದು ಪಕ್ಷ  ಟೀಕಿಸಿದೆ.ಶುಕ್ರವಾರ ಸಂಜೆ ಎರಡು ಗಂಟೆಗಳ ಕಾಲ ನಡೆದ ಡಿಎಂಕೆ ಕ್ರಿಯಾ ಸಮಿತಿಯ ಮಹತ್ವದ ಸಭೆಯ ನಂತರ ಮಾತನಾಡಿದ ಮುಖ್ಯಸ್ಥ ಎಂ.ಕರುಣಾನಿಧಿ, ಕಾಂಗ್ರೆಸ್ ಬಗ್ಗೆ ತಮಗೆ ಯಾವುದೇ ಅಸಮಾಧಾನವಿಲ್ಲ. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಅದು ನಮ್ಮ ನೆರವಿಗೆ ಬಂದಿಲ್ಲ ಎಂದು ನಾವು ಹತಾಶೆಗೊಂಡಿಲ್ಲ ಎಂದು ಹೇಳಿದರು.ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುವ ಪಕ್ಷದ ಸಾಮಾನ್ಯ ಮಂಡಳಿಯು ಮುಂದಿನ ತಿಂಗಳು ಸಭೆ ಸೇರಿ ಇತರ ಪಕ್ಷಗಳ ಜತೆಗಿನ ಮೈತ್ರಿ ಮುಂದುವರಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.ಪಕ್ಷದ ಹಿರಿಯ ಮುಖಂಡರಾದ ಕೆ.ಅನ್ಬಳಗನ್, ಎಂ.ಕೆ.ಸ್ಟಾಲಿನ್, ಎಂ.ಕೆ.ಅಳಗಿರಿ ಮತ್ತು ದಯಾನಿಧಿ ಮಾರನ್ ಅವರು ಭಾಗವಹಿಸಿದ್ದ ಸಭೆಯಲ್ಲಿ, ಸಿಬಿಐ ದ್ವಿಮುಖ ಧೋರಣೆಯನ್ನು ಖಂಡಿಸುವ ಮತ್ತು ಕಾನೂನು ಸಮರ ನಡೆಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಪ್ರತಿಕ್ರಿಯಿಸಿ (+)