ಬುಧವಾರ, ಮೇ 25, 2022
24 °C

ಕೇಂದ್ರದಲ್ಲಿ ಎನ್‌ಡಿಎ: ಅಡ್ವಾಣಿ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ): `ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಅಧಿಕಾರ ಅವಧಿಯನ್ನು ಪೂರ್ಣಗೊಳಿಸುವ ಸಾಧ್ಯತೆ ಬಹುತೇಕ ಕ್ಷೀಣಿಸಿದ್ದು, ಅವಧಿಗೆ ಮುನ್ನವೇ ಚುನಾವಣೆ ನಡೆಯುವ ಸಂಭವ ಹೆಚ್ಚು; ಒಂದು ವೇಳೆ ಹಾಗಾದಲ್ಲಿ ಎನ್‌ಡಿಎಗೆ ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸಲು ಎಲ್ಲ ಅವಕಾಶಗಳೂ ನಿಚ್ಚಳವಾಗಿವೆ~ ಎಂದು ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಜನ ಚೇತನ ರಥಯಾತ್ರೆಯ ಎರಡನೇ ದಿನವಾದ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ದಿನಗಳು ಇನ್ನೂ ದೂರವಿದ್ದರೂ ಯುಪಿಎ ಸರ್ಕಾರ ಆಡಳಿತ ನಡೆಸುತ್ತಿರುವ ರೀತಿ ನೋಡಿ ಆದಷ್ಟು ಬೇಗನೇ ಚುನಾವಣೆ ಬರಲಿ ಎಂದು ಹಾರೈಸುವಂತಾಗಿದೆ.

ವ್ಯಾಪಕ ಭ್ರಷ್ಟಾಚಾರ ಮತ್ತು ಕಪ್ಪುಹಣದಂತಹ ವಿಷಯಗಳಿಗೆ ಸಂಬಂಧಿಸಿದಂತೆಯೇ ಅಕಾಲಿಕ ಚುನಾವಣೆ ಎದುರಾಗಲಿದೆ ಎಂದು ಹೇಳಿದರು. 

ಶ್ವೇತಪತ್ರಕ್ಕೆ ಆಗ್ರಹ: ವಿದೇಶಿ ಬ್ಯಾಂಕುಗಳಲ್ಲಿರುವ ಲಕ್ಷಾಂತರ ಕೋಟಿ ಕಪ್ಪುಹಣವನ್ನು ಠೇವಣಿ ಮಾಡಿದ ವ್ಯಕ್ತಿಗಳ ಹೆಸರು ಪ್ರಕಟಿಸಬೇಕು ಹಾಗೂ ಆ ಹಣವನ್ನು ಮರಳಿ ತರಲು ಸರ್ಕಾರ ಇದುವರೆಗೂ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕವಾಗಿ ವಿವರಣೆ ನೀಡಬೇಕು. ಈ ಕುರಿತು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಬೇಕು ಎಂದು ಅಡ್ವಾಣಿ ಸರ್ಕಾರವನ್ನು ಒತ್ತಾಯಿಸಿದರು. ಇದೇ ವಿಷಯವಾಗಿ ಪ್ರಧಾನ ಮಂತ್ರಿಗೆ ಪತ್ರವೊಂದನ್ನು ಬರೆದಿರುವುದಾಗಿ ಅವರು ತಿಳಿಸಿದರು.

ಸದ್ಯ ಭಾರತದ ಕನಿಷ್ಠ 462 ಶತಕೋಟಿ ಡಾಲರ್ (23.10 ಲಕ್ಷ ಕೋಟಿ ರೂಪಾಯಿ) ಹಣ ಅಕ್ರಮವಾಗಿ ಚಲಾವಣೆಯಲ್ಲಿದೆ. ಸ್ವಿಸ್ ಬ್ಯಾಂಕ್ ದಾಖಲೆಗಳ ಪ್ರಕಾರ ಭಾರತದ 1.4 ಲಕ್ಷ ಕೋಟಿ ಡಾಲರ್ ಕಪ್ಪುಹಣ ಠೇವಣಿ ಇದ್ದು, ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ರಷ್ಯ ಮತ್ತ ಚೀನಾದಂತಹ ದೇಶಗಳಿವೆ ಎಂದರು.

ನಿಮ್ಮದೇ ಪಕ್ಷದ ಇಬ್ಬರು ಮುಖ್ಯಮಂತ್ರಿಗಳು ಭ್ರಷ್ಟಾಚಾರ ಆರೋಪದಲ್ಲಿ ಕೆಳಗಿಳಿದಿರುವಾಗ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ನಡೆಸುತ್ತಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಗೆ, `ಲೋಕಾಯುಕ್ತ ವರದಿಯಲ್ಲಿ ಹೆಸರಿದ್ದ ಕಾರಣ ಕರ್ನಾಟಕದ ಮುಖ್ಯಮಂತ್ರಿಯನ್ನು ಕೆಳಗಿಳಿಸಲಾಯಿತು. ಉತ್ತರಾಖಂಡ ಮುಖ್ಯಮಂತ್ರಿಯ ಪದತ್ಯಾಗಕ್ಕೂ ಭ್ರಷ್ಟಾಚಾರಕ್ಕೂ ಯಾವುದೇ ಸಂಬಂಧವಿಲ್ಲ~ ಎಂದು ಅಡ್ವಾಣಿ ಸಮರ್ಥಿಸಿಕೊಂಡರು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಥಯಾತ್ರೆ ಕುರಿತು ಅವರು ಬ್ಲಾಗ್‌ನಲ್ಲಿ ಒಳ್ಳೆಯ ಮಾತು ಬರೆದಿದ್ದಾರೆ ಎಂದರು.

ಪ್ರಧಾನಿ ಹುದ್ದೆ: ಗುಟ್ಟು ಬಿಡದ ನಾಯಕ

ಪಟ್ನಾ, (ಪಿಟಿಐ):
ಮುಂದಿನ ಬಾರಿ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ಪ್ರಧಾನಮಂತ್ರಿ ಹುದ್ದೆಯ ಅಭ್ಯರ್ಥಿಯನ್ನು ಪಕ್ಷ ತೀರ್ಮಾನಿಸಲಿದೆ ಎಂದು ಎಲ್.ಕೆ.ಅಡ್ವಾಣಿ ಸ್ಪಷ್ಟಪಡಿಸಿದ್ದಾರೆ.

`ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ನೀವೂ ಇದ್ದೀರಾ~ ಎಂಬ ಮಾಧ್ಯಮದವರ ಪ್ರಶ್ನೆಗೆ ಮಗುಮ್ಮಾಗಿಯೇ ಉತ್ತರಿಸಿದ ಅವರು, ಚುನಾವಣೆ ಬಂದಾಗ ಪಕ್ಷ ಈ ವಿಷಯವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿ ಜಾರಿಕೊಂಡರು. `2009ರಲ್ಲಿಯೂ ನಾನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರಲಿಲ್ಲ~ ಎಂದು ಸಮಜಾಯಿಷಿ ನೀಡಿದರು.

ಪಕ್ಷ ಬಯಸಿದಲ್ಲಿ ಪ್ರಧಾನಿ ಹುದ್ದೆಯನ್ನು ಒಪ್ಪಿಕೊಳ್ಳುವಿರಾ ಎಂಬ ಮತ್ತೊಂದು ಪ್ರಶ್ನೆಗೆ `ನಾನು ಏನನ್ನು ಹೇಳಬೇಕು ಎಂದು ಬಯಸಿದ್ದೆನೋ ಅದನ್ನು ಈಗಾಗಲೇ ಹೇಳಿಯಾಗಿದೆ~ ಎಂದು ಹಾರಿಕೆಯ ಉತ್ತರ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.