ಕೇಂದ್ರದ ಅನುದಾನ: ಜಾಹೀರಾತಿನಲ್ಲಿ ಪ್ರಚಾರ

7

ಕೇಂದ್ರದ ಅನುದಾನ: ಜಾಹೀರಾತಿನಲ್ಲಿ ಪ್ರಚಾರ

Published:
Updated:
ಕೇಂದ್ರದ ಅನುದಾನ: ಜಾಹೀರಾತಿನಲ್ಲಿ ಪ್ರಚಾರ

ಮಡಿಕೇರಿ: ಕೇಂದ್ರ ಅನುದಾನದಿಂದ ಜಿಲ್ಲೆಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ವಿವರಗಳು ಹಾಗೂ ಬಿಡುಗಡೆ ಮಾಡಲಾಗುವ ಹಣದ ಮೊತ್ತವನ್ನು ಸ್ಥಳೀಯ ದಿನಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ ಜನರಿಗೆ ತಿಳಿಸಲು ಪ್ರಯತ್ನಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೇಳಿದರು.ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಆಶ್ವಾಸನೆ ನೀಡಿದರು.

 ಇದಕ್ಕೂ ಮುಂಚೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ಅವರು ಉದ್ಯೋಗ ಖಾತರಿ ಯೋಜನೆ, ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಕೇಂದ್ರ ಪ್ರಾಯೋಜಿತ ಕಾಮಗಾರಿಗಳು ತಮ್ಮದೆಂದು ರಾಜ್ಯದ ಬಿಜೆಪಿ ನಾಯಕರು ಹೇಳಿಕೊಂಡು ತಿರುಗಾಡುತ್ತಿದ್ದಾರೆ.ಜನರಿಗಲ್ಲದೆ ಸ್ವತಃ ನಮ್ಮ ಪಕ್ಷದ ಕಾರ್ಯಕರ್ತರಿಗೆ ಇದರ ಬಗ್ಗೆ ಗೊಂದಲ ಇದೆ. ಆದ್ದರಿಂದ ಇದನ್ನು ತಿಳಿಸಲು ಸ್ಥಳೀಯ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಬಗ್ಗೆ ಅವಲೋಕಿಸಿ ಎಂದು ಅವರು ಮನವಿ ಮಾಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ಆಸ್ಕರ್ ಅವರು, ಈ ಕುರಿತು ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ, ಎಲ್ಲ ಸ್ಥಳೀಯ ಮಾಧ್ಯಮಗಳ ಮೂಲಕ ಕೇಂದ್ರದ ಅನುದಾನದ ಬಗ್ಗೆ ಹಾಗೂ ಕಾಮಗಾರಿಗಳ ವಿವರಗಳ ಬಗ್ಗೆ ಮಾಹಿತಿ ನೀಡಲು ಕ್ರಮ ವಹಿಸಲಾಗುವುದು ಎಂದರು.ಕಾಂಗ್ರೆಸ್ ಅವಕಾಶ ಇದೆ

ಜಿಲ್ಲೆಯ 13 ಗ್ರಾಮ ಪಂಚಾಯಿತಿಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಏಳು ಸ್ಥಾನಗಳನ್ನು ಗೆದ್ದುಕೊಂಡಿರುವುದು ಸಂತೋಷಕರ ವಿಷಯ. ಆಡಳಿತ ಪಕ್ಷ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸಿರುವ ಪಕ್ಷದ ಕಾರ್ಯಕರ್ತರ ಸಾಧನೆ ಹೆಮ್ಮೆ ತರುವ ವಿಷಯವಾಗಿದೆ. ಮುಂದಿನ ದಿನಗಳು ಮತ್ತಷ್ಟು ಸವಾಲಿನಿಂದ ಕೂಡಿರುತ್ತವೆ ಎಂದು ಅವರು ತಿಳಿಸಿದರು.ಉದ್ಯೋಗ ಖಾತರಿ ಯೋಜನೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಕಡುಬಡವರಿಗೆ ಪಡಿತರ ಒದಗಿಸುತ್ತಿರುವುದು, ಕೃಷಿಕರಿಗೆ ಬಡ್ಡಿದರದಲ್ಲಿ ಸಾಲ ನೀಡುತ್ತಿರುವುದು ಸೇರಿದಂತೆ ಕೇಂದ್ರದಲ್ಲಿ ಕಾಂಗ್ರೆಸ್ ಜಾರಿ ತಂದಿರುವ ಹಲವು ಉತ್ತಮ ಯೋಜನೆಗಳ ಬಗ್ಗೆ ಜನರಿಗೆ ಪ್ರಚಾರ ಮಾಡಬೇಕು ಎಂದು ಅವರು ಹೇಳಿದರು. 

ಜಿಲ್ಲೆಯ ಕಾಡಾನೆ ಸಮಸ್ಯೆಯನ್ನು ನಿವಾರಿಸಲು ಅರಣ್ಯ ಸಚಿವಾಲಯದ ಜೊತೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.ಕಾಫಿ ಸಾಲ ಮನ್ನಾ; ಹೊಸ ಪ್ರಸ್ತಾವನೆಗೆ ಸಲಹೆ

ಮಡಿಕೇರಿ:
ಸಣ್ಣ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿದಂತೆ ದೊಡ್ಡ ಹಾಗೂ ಮಧ್ಯಮ ಬೆಳೆಗಾರರ ಸಾಲವನ್ನೂ ಮನ್ನಾ ಮಾಡಬೇಕೆಂದು ಮುಂಚೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯ ತಿರಸ್ಕರಿಸಿದೆ ಎಂದು ಆಸ್ಕರ್ ಫರ್ನಾಂಡಿಸ್ ಹೇಳಿದರು.ಕೊಡಗು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಮಾಡಿಕೊಂಡ ಮನವಿಗೆ ಪ್ರತಿಕ್ರಿಯಿಸಿದ ಆಸ್ಕರ್ ಅವರು, ತಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಹಣಕಾಸು ಸಚಿವಾಲಯವನ್ನು ಕೇಳಿಕೊಳ್ಳೋಣ. ಅದಕ್ಕಾಗಿ ಹೊಸ ಪ್ರಸ್ತಾವನೆ ಸಲ್ಲಿಸೋಣ ಎಂದರು.ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಪ್ರತಿ ಹಳ್ಳಿಗಳಿಗೂ ರೂ 50 ಲಕ್ಷದವರೆಗೆ ಅನುದಾನ ನೀಡಲು ಅವಕಾಶವಿದೆ. ಪ್ರಸ್ತಾವನೆಗಳೊಂದಿಗೆ ಬನ್ನಿ, ಕೇಂದ್ರ ಸರ್ಕಾರ ನಿಮಗ ಸಹಾಯ ಮಾಡುತ್ತದೆ ಎಂದು ಅವರು ಆಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry