ಕೇಂದ್ರದ ಧೋರಣೆ ವಿರುದ್ಧ ಬಿಜೆಪಿ ಸಭಾತ್ಯಾಗ

7

ಕೇಂದ್ರದ ಧೋರಣೆ ವಿರುದ್ಧ ಬಿಜೆಪಿ ಸಭಾತ್ಯಾಗ

Published:
Updated:
ಕೇಂದ್ರದ ಧೋರಣೆ ವಿರುದ್ಧ ಬಿಜೆಪಿ ಸಭಾತ್ಯಾಗ

ನವದೆಹಲಿ: ರಾಜ್ಯದ ಬರಗಾಲ ಪರಿಸ್ಥಿತಿ 10 ದಿನಗಳಲ್ಲಿ ಎರಡನೇ ಸಲ ಸಂಸತ್ತಿನಲ್ಲಿ ಪ್ರಸ್ತಾಪವಾಯಿತು. ಮುಂಗಾರು ಮತ್ತು ಹಿಂಗಾರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರದ ಸರ್ಕಾರದ ಧೋರಣೆ ಪ್ರತಿಭಟಿಸಿ ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ಶುಕ್ರವಾರ ಸಭಾತ್ಯಾಗ ಮಾಡಿದರು. `ಕರ್ನಾಟಕದ ವಿಷಯದಲ್ಲಿ ಸರ್ಕಾರ ರಾಜಕೀಯ ಮಾಡುತ್ತಿದೆ~ ಎಂದು ಆರೋಪ ಮಾಡಿದರು.ಆದರೆ, ಬಿಜೆಪಿ ಸದಸ್ಯರ ಆರೋಪಗಳನ್ನು ಸರ್ಕಾರ ತಳ್ಳಿಹಾಕಿತು. ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ಗಂಭೀರವಾಗಿದ್ದು, ವಾಸ್ತವ ಸ್ಥಿತಿ ಅಧ್ಯಯನಕ್ಕೆ ತಜ್ಞರ ತಂಡ ಕಳುಹಿಸಲಾಗಿದೆ. ಈ ತಂಡದ ವರದಿ ಆಧರಿಸಿ ಹಿರಿಯ ಸಚಿವರನ್ನು ಒಳಗೊಂಡ `ಉನ್ನತಾಧಿಕಾರ ಸಮಿತಿ~ ಸೂಕ್ತ ನೆರವು ನೀಡುವ ಕುರಿತು ತ್ವರಿತ ತೀರ್ಮಾನ ಮಾಡಲಿದೆ ಎಂದು ಕೃಷಿ ಸಚಿವ ಹರೀಶ್ ರಾವತ್ ಭರವಸೆ ನೀಡಿದರು.ಶೂನ್ಯವೇಳೆಯಲ್ಲಿ ಗಮನ ಸೆಳೆಯುವ ಸೂಚನೆ ಮೇಲೆ ಚರ್ಚೆ ಆರಂಭಿಸಿದ ಬಿಜೆಪಿ ಸದಸ್ಯ ಪ್ರಹ್ಲಾದ್ ಜೋಶಿ, ಕರ್ನಾಟಕ ತೀವ್ರ ಬರಗಾಲಕ್ಕೆ ಸಿಕ್ಕಿದ್ದು ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸಿದೆ ಎಂದು ಕೇಳಿದರು. ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಹರೀಶ್ ರಾವತ್ ವಿವರಿಸಿದರು. `ರಾಜ್ಯ ಸಂಕಷ್ಟ ಪರಿಹಾರ ನಿಧಿ~ಯಿಂದ 70ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.`ಕರ್ನಾಟಕದ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ~ ಎಂಬ ಆರೋಪವನ್ನು ರಾವತ್ ತಳ್ಳಿಹಾಕಿದರು. ಈ ಆರೋಪಕ್ಕೆ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ ಹಾಗೂ ಸುಶೀಲ್‌ಕುಮಾರ್ ಶಿಂಧೆ ಆಕ್ಷೇಪಿಸಿದರು. ಪರಿಸ್ಥಿತಿ ಅಧ್ಯಯನಕ್ಕೆ ರಚಿಸಲಾಗಿರುವ ಕೇಂದ್ರದ ಎರಡನೇ ತಂಡ ಈ ತಿಂಗಳ 13ರಿಂದ 17ವರೆಗೆ ಬರಗಾಲದ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ. ವರದಿ ಬಂದ ತಕ್ಷಣ ಹಿರಿಯ ಸಚಿವರ ಉನ್ನತಾಧಿಕಾರ ಸಮಿತಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.ಡಿಸೆಂಬರ್‌ನಲ್ಲಿ ಕೇಂದ್ರದ ಮೊದಲ ತಂಡ ಕರ್ನಾಟಕಕ್ಕೆ ಭೇಟಿ ನೀಡಿತ್ತು. ಈ ತಂಡಕ್ಕೆ ರೂ. 2605 ಕೋಟಿ ಮೊತ್ತದ ಬೆಳೆ ನಷ್ಟವಾಗಿದ್ದು 700ಕೋಟಿ ರೂಪಾಯಿ ನೆರವು ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು.

 

ಆದರೆ, ಕೇಂದ್ರ ತಂಡ 296 ಕೋಟಿ ಬಿಡುಗಡೆಗೆ ಶಿಫಾರಸು ಮಾಡಿತು. ಅಂತಿಮವಾಗಿ ಕೇಂದ್ರ ಸರ್ಕಾರ 186 ಕೋಟಿ ನಿಗದಿ ಮಾಡಿ ತಕ್ಷಣ 70 ಕೋಟಿ ನೀಡಿ 116 ಕೋಟಿ ರಾಜ್ಯ ಸಂಕಷ್ಟ ಪರಿಹಾರ ನಿಧಿಯ ಬಾಕಿಗೆ ಹೊಂದಾಣಿಕೆ ಮಾಡಿತು ಎಂದು ರಾವತ್ ವಿವರಿಸಿದರು.ಈಚೆಗೆ ಮುಖ್ಯಮಂತ್ರಿ ಸದಾನಂದಗೌಡರ ನೇತೃತ್ವದಲ್ಲಿ ಆಗಮಿಸಿದ್ದ ಸರ್ವಪಕ್ಷ ನಿಯೋಗ ಮುಂಗಾರು ಹಾಗೂ ಹಿಂಗಾರು ಒಳಗೊಂಡಂತೆ 5965 ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ಮೇವು- ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರವಾಗಿ 1500 ಕೋಟಿ ಹಾಗೂ ಮೂರು ಲಕ್ಷ ಟನ್ ಅಕ್ಕಿ ಮತ್ತು 55 ಸಾವಿರ ಟನ್ ಗೋದಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದೆ ಎಂದು ಸಚಿವರು ತಿಳಿಸಿದರು.ಸಚಿವರ ಉತ್ತರ ಬಿಜೆಪಿ ಸದಸ್ಯರಿಗೆ ಸಮಾಧಾನ ತರಲಿಲ್ಲ. ಹಣ ಹಾಗೂ ಆಹಾರಧಾನ್ಯ ಬಿಡುಗಡೆಗೆ ಸಂಬಂಧಿಸಿದಂತೆ ಸಚಿವರು ನಿರ್ದಿಷ್ಟ ಭರವಸೆ ನೀಡಲಿಲ್ಲ. ಗೋದಾಮುಗಳಲ್ಲಿ ಆಹಾರ ಧಾನ್ಯ ಕೊಳೆಯುತ್ತಿದ್ದರೂ ತೊಂದರೆಗೊಳಗಾದ ಜನರಿಗೆ ಹಂಚಿಕೆ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಬಿಜೆಪಿ ಹಾಗೂ ಜೆಡಿಯು ಸದಸ್ಯರು ಅವರನ್ನು ಹಿಂಬಾಲಿಸಿದರು.ಸುಮಾರು 75 ನಿಮಿಷ ಕರ್ನಾಟಕದ ಬರಗಾಲದ ವಿಷಯ ಚರ್ಚೆಯಾಯಿತು. ಚರ್ಚೆಯಲ್ಲಿ ಭಾಗವಹಿಸಿದ ಪ್ರಹ್ಲಾದ್ ಜೋಶಿ ಹಾಗೂ ಅನಂತಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕದ ಬಗೆಗೆ ಏಕೆ ಈ ಉದಾಸೀನ ಭಾವನೆ. ಕೇಂದ್ರದ ನಕಾಶೆಯಲ್ಲಿ ಕರ್ನಾಟಕ ಇಲ್ಲವೆ? ಹೀಗಾದರೆ ಜನ ಏನು ಆಲೋಚಿಸಬಹುದು. ಕರ್ನಾಟಕದಲ್ಲಿ ಬೇರೆ ಸರ್ಕಾರವಿದೆ. ಹೀಗಾಗಿ ಕೇಂದ್ರ ನೆರವಿಗೆ ಧಾವಿಸುತ್ತಿಲ್ಲ ಎಂದು ಭಾವಿಸುವುದಿಲ್ಲವೆ ಎಂದು ಜೋಶಿ ಕೇಳಿದರು. ಇದಕ್ಕೆ ಕಾಂಗ್ರೆಸ್ ಸದಸ್ಯ ಎಚ್. ವಿಶ್ವನಾಥ್ ಆಕ್ಷೇಪ ಎತ್ತಿದರು.ಜೋಶಿ ಬೆಂಬಲಕ್ಕೆ ನಿಂತ ಅನಂತ ಕುಮಾರ್, `ಒಂದು ವರ್ಷದಿಂದ ರಾಜ್ಯದಲ್ಲಿ ಬರಗಾಲವಿದ್ದರೂ ಒಂದೇ ಒಂದು ಕಾಳು ಆಹಾರ ಧಾನ್ಯ ಬಿಡುಗಡೆ ಆಗಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ರಾಜ್ಯದ ಬರಪೀಡಿತ ಪ್ರದೇಶವನ್ನು ವೀಕ್ಷಿಸಿದ್ದಾರೆ. ಈ ಭೇಟಿ ಹಿಂದೆ ರಾಜಕೀಯ ಉದ್ದೇಶವಿದೆಯೇ ಅಥವಾ ನಿಜವಾದ ಕಾಳಜಿ ಇದೆಯೇ~ ಎಂದು ಚುಚ್ಚಿದರು. ಸಚಿವ ಸುಶೀಲ್ ಕುಮಾರ್ ಶಿಂಧೆ, `ಎಐಸಿಸಿ ಅಧ್ಯಕ್ಷರು ಸಂಬಂಧಪಟ್ಟ ಸಚಿವರ ಜತೆ ಮಾತನಾಡಿದ್ದಾರೆ~ ಎಂದು ಸಮಜಾಯಿಷಿ ನೀಡಿದರು.`ವಿದರ್ಭ, ಬುಂದೇಲ್‌ಖಂಡ್‌ಗಳಿಗೆ ಪ್ಯಾಕೇಜ್ ಕೊಡುವುದಾದರೆ ಕರ್ನಾಟಕಕ್ಕೆ ಏಕಿಲ್ಲ~ ಎಂದು ಅನಂತ ಕುಮಾರ್ ಸಚಿವರನ್ನು ಕೇಳಿದರು. `ಕೃಷಿ ಸಚಿವ ಶರದ್ ಪವಾರ್ ಒಂದೇ ದಿನದಲ್ಲಿ ಮಹಾರಾಷ್ಟ್ರದಿಂದ ಉತ್ತರ ಕರ್ನಾಟಕಕ್ಕೆ ಕುಡಿಯುವ ಉದ್ದೇಶಕ್ಕೆ ನೀರು ಬಿಡುಗಡೆ ಮಾಡಿಸಿದ್ದಾರೆ. ಅದಕ್ಕಾಗಿ ಅವರಿಗೆ ಈ ವೇದಿಕೆಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಏನೂ ಮಾಡದ ಸೋನಿಯಾ ಅವರಿಗೆ ಹೇಗೆ ಕೃತಜ್ಞತೆ ಹೇಳಲಿ~ ಎಂದು ಕಾಂಗ್ರೆಸ್ ಸದಸ್ಯರನ್ನು ಕೆಣಕಿದರು.`ನೀವು ಹೀಗೆ ರಾಜಕೀಯ ಮಾಡಬಾರದು~ ಎಂದು ವೀರಪ್ಪ ಮೊಯಿಲಿ ಹೇಳಿದರು. `ನಾವು ರಾಜಕೀಯ ಮಾಡುತ್ತಿಲ್ಲ~ ಎಂದು ಅನಂತ್ ತಿರುಗೇಟು ಕೊಟ್ಟರು. `ಇನ್ನೊಂದು ವಾರದಲ್ಲಿ ರಾಜ್ಯಕ್ಕೆ ಹಣ ಹಾಗೂ ಆಹಾರಧಾನ್ಯ ಬಿಡುಗಡೆ ಆಗುವುದೇ?~ ಎಂದು ಅನಂತ ಕುಮಾರ್ ಕೇಳಿದರು. ಬಿಜೆಪಿ ಸದಸ್ಯರಾದ ಶಿವರಾಮಗೌಡ ಹಾಗೂ ಶಿವಕುಮಾರ ಉದಾಸಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಮೇ 8ರಂದು ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರು ವಿಷಯ ಪ್ರಸ್ತಾಪಿಸಿ ಸಭಾತ್ಯಾಗ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry