ಕೇಂದ್ರದ ನೀತಿ ವಿರುದ್ಧ ಫೆಬ್ರುವರಿಯಲ್ಲಿ ಮುಷ್ಕರ

7

ಕೇಂದ್ರದ ನೀತಿ ವಿರುದ್ಧ ಫೆಬ್ರುವರಿಯಲ್ಲಿ ಮುಷ್ಕರ

Published:
Updated:

ಬೆಂಗಳೂರು: `ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಲು ಮುಂದಾಗಿದೆ' ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಆಕ್ರೋಶ ವ್ಯಕ್ತಪಡಿಸಿದರು.ಸಿಐಟಿಯು ನಗರ ಜಿಲ್ಲಾ ಸಮಿತಿಯು ನಗರದ ಕೆ.ಆರ್.ಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹತ್ತನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ  ಮಾತನಾಡಿದರು.`ಜನಪರ ಕಾಳಜಿ ಇಲ್ಲದ ಕೇಂದ್ರ ಸರ್ಕಾರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಸಿಲಿಂಡರ್‌ಗಳ ಮಿತಿಯನ್ನು ಕಡಿತಗೊಳಿಸಿದೆ. ಅಲ್ಲದೇ, ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುತ್ತಿದೆ. ಸರ್ಕಾರದ ಈ ಜನವಿರೋಧಿ ದೋರಣೆಗಳನ್ನು ಖಂಡಿಸಿ ಎಲ್ಲಾ ಕಾರ್ಮಿಕ ಸಂಘಟನೆಗಳು ಫೆ. 20 ಮತ್ತು 21ರಂದು ದೇಶವ್ಯಾಪಿ ಮುಷ್ಕರ ನಡೆಸಲಿದ್ದು, ಈ ಹೋರಾಟಕ್ಕೆ ಜನಸಾಮಾನ್ಯರು ಸಹ ಬೆಂಬಲ ವ್ಯಕ್ತಪಡಿಸಬೇಕು' ಎಂದು ಕರೆ ನೀಡಿದರು.ಬಳಿಕ ಮಾತನಾಡಿದ ಸಿಪಿಐನ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ರಾಮರೆಡ್ಡಿ, `ಸರ್ಕಾರ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಇದರಿಂದ ಅವರ ಬದುಕು ದುಸ್ತರವಾಗಿದೆ. ಹೀಗಾಗಿ ಕಾರ್ಮಿಕರಿಗೆ ಕನಿಷ್ಠ ಹತ್ತು ಸಾವಿರ ರೂಪಾಯಿ ವೇತನ ನಿಗದಿ ಮಾಡಬೇಕು ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು' ಎಂದು ಆಗ್ರಹಿಸಿದರು.`ಹಣ ಗಳಿಕೆಯನ್ನು ಉದ್ದೇಶವನ್ನಾಗಿಸಿಕೊಂಡು ದುರಾಡಳಿತದಲ್ಲಿ ತೊಡಗಿರುವ ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಜನಸಾಮಾನ್ಯರ ಸಂಕಷ್ಟಗಳು ಅರ್ಥವಾಗುತ್ತಿಲ್ಲ. ಸಾರ್ವಜನಿಕರು ವಿವೇಚನೆಯಿಂದ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು' ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ.ಎನ್. ಉಮೇಶ್ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry