ಬುಧವಾರ, ಏಪ್ರಿಲ್ 21, 2021
33 °C

ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರದ ಫಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ‘ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾಗಿರುವ ಅನುದಾನದ ಹಣವನ್ನು ರಾಜ್ಯ ಸರ್ಕಾರ ತನ್ನದೆಂದು ಬಿಂಬಿಸುತ್ತಾ ಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದು ಸಂಸದ ಎಚ್.ವಿಶ್ವನಾಥ್ ಆರೋಪಿಸಿದರು.ಇಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ‘ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ವಿವಿಧ ಯೋಜನೆಗಳಿಗೆ ರೂ. 19 ಸಾವಿರ ಕೋಟಿ ಹಣ ಬಿಡುಗಡೆಯಾಗಿದೆ. ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಯೋಜನೆಗಳಿಗೆ ತಮ್ಮ ಭಾವಚಿತ್ರ ಹಾಕಿಕೊಂಡು ಮಿಂಚುತ್ತಿದ್ದಾರೆ’ ಎಂದು ದೂಷಿಸಿದರು.‘ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ, ಆರೋಗ್ಯ ಕವಚ, ಉದ್ಯೋಗ ಖಾತ್ರಿ, ಗ್ರಾಮ ಸಡಕ್, ನೆರೆ ಹಾವಳಿ ಪರಿಹಾರ ಯೋಜನೆ ಹಾಗೂ ಇನ್ನಿತರ ಯೋಜನೆಗಳೂ ಕೇಂದ್ರ ಸರ್ಕಾರದ್ದೇ ಆಗಿವೆ. ಈ ಹಣದಿಂದಲೇ ರಾಜ್ಯದಲ್ಲಿ ಯಥೇಚ್ಛ ಕಾಮಗಾರಿಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಮಾತ್ರ ಈ ಕಾಮಗಾರಿಗಳು ನಮ್ಮ ಕೊಡುಗೆ ಎಂದು ಪುಕ್ಕಟೆ ಪ್ರಚಾರ ಕೈಗೊಂಡಿದೆ’ ಎಂದರು.ಯುವ ಕಾಂಗ್ರೆಸ್ ವೀಕ್ಷಕ ಆಂಧ್ರಪ್ರದೇಶದ ರಾಮಕೃಷ್ಣ ಗೌಂಡರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಶಾಸಕ ಟಿ.ಜಾನ್, ಕೆಪಿಸಿಸಿ ಸದಸ್ಯೆ ಕೆ.ಪಿ.ಚಂದ್ರಕಲಾ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್, ಟಾಟು ಮೊಣ್ಣಪ್ಪ, ಕೆ.ಎ.ಯಾಕೂಬ್, ತಾಕೇರಿ ಸತೀಶ್, ಎಸ್.ಟಿ.ವಿಜೇತ ಹಾಗೂ ಲಾರೆನ್ಸ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.