ಗುರುವಾರ , ನವೆಂಬರ್ 21, 2019
26 °C

`ಕೇಂದ್ರೀಯ ಪಡೆ ನಿಯೋಜಿಸಿ'

Published:
Updated:

ಬೆಂಗಳೂರು: ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ತಕ್ಷಣವೇ ಕೇಂದ್ರೀಯ ಪೊಲೀಸ್ ಪಡೆಗಳನ್ನು ನಿಯೋಜಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಕೆ.ದಿವಾಕರ್, `ಹೊಳೆನರಸೀಪುರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಜಿ.ಅನುಪಮಾ ಅವರ ಮೇಲೆ ಬುಧವಾರ ಜೆಡಿಎಸ್ ಕಾರ್ಯಕರ್ತರು ಮತ್ತು ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಕ್ಷೇತ್ರದ ವಾಸ್ತವ ಪರಿಸ್ಥಿತಿ ಕುರಿತ ವರದಿಯನ್ನು ಕೆಪಿಸಿಸಿ ತರಿಸಿಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಎಚ್.ಡಿ.ರೇವಣ್ಣ ಅವರು ಸೋಲಿನ ಭೀತಿಯಲ್ಲಿರುವುದರಿಂದ ಅವರ ಬೆಂಬಲಿಗರು ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ' ಎಂದು ಆರೋಪಿಸಿದರು.ಹೊಳೆನರಸೀಪುರ ಕ್ಷೇತ್ರದಲ್ಲಿ ಭೀತಿಯ ವಾತಾವರಣ ಇದೆ. ಅಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನವಿದೆ. ಈ ಕಾರಣದಿಂದ ಕ್ಷೇತ್ರವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಲಾಗಿದೆ. ಶುಕ್ರವಾರದಿಂದಲೇ ಇಡೀ ಕ್ಷೇತ್ರದಲ್ಲಿ ಕೇಂದ್ರೀಯ ಪೊಲೀಸ್ ಪಡೆಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.ಶಿವಮೊಗ್ಗ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿ ಪರ ಕೆಲಸ ಮಾಡುವ ಸಾಧ್ಯತೆ ಇರುವ ಅಧಿಕಾರಿಗಳ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಆದರೆ, ಈವರೆಗೂ ಅಂತಹವರನ್ನು ವರ್ಗಾವಣೆ ಮಾಡಿಲ್ಲ. ಚುನಾವಣಾ ಆಯೋಗ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಭೆ ರದ್ದಿಗೆ ಸಂಚು: ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಪ್ರಧಾನಿಯವರ ಬಹಿರಂಗ ಸಭೆಗೆ ಜಿಲ್ಲಾಡಳಿತ ಸ್ಥಳಾವಕಾಶ ಒದಗಿಸುತ್ತಿಲ್ಲ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು ಧಾರವಾಡ ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ ಮೈದಾನ ಬಿಟ್ಟುಕೊಡದಂತೆ ತಡೆಯುತ್ತಿದ್ದಾರೆ. ಪ್ರಧಾನಿಯವರ ಸಭೆ ನಡೆಯದಂತೆ ಮಾಡುವ ಸಂಚು ಇದರ ಹಿಂದಿದೆ ಎಂದು ದಿವಾಕರ್ ದೂರಿದರು.`ರಾಹುಲ್ ಗಾಂಧಿಯವರ ನಾಯಕತ್ವದ ಕುರಿತು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಟೀಕಿಸಿದ್ದಾರೆ. ಆದರೆ, ಬಿಜೆಪಿ ರಾಜ್ಯ ಮುಖಂಡರಿಗೆ ಅಡ್ವಾಣಿ ಅವರ ನಾಯಕತ್ವದಲ್ಲೇ ನಂಬಿಕೆ ಇಲ್ಲ. ಬುಧವಾರ ಸವದತ್ತಿಯಲ್ಲಿ ನಡೆದ ಅಡ್ವಾಣಿಯವರ ಸಭೆಗೆ ವಿಧಾನ ಪರಿಷತ್‌ನ ಒಬ್ಬ ಸದಸ್ಯ ಮಾತ್ರ ಹಾಜರಾಗಿದ್ದರು. ಬಿಜೆಪಿಯ ಯಾವ ಮುಖಂಡರೂ ಅಲ್ಲಿ ಕಾಣಲಿಲ್ಲ. ಇದು ಅವರ ನಾಯಕತ್ವದಲ್ಲಿ ಬಿಜೆಪಿ ಮುಖಂಡರಿಗೆ ವಿಶ್ವಾಸ ಇಲ್ಲ ಎಂಬುದನ್ನು ತೋರಿಸುತ್ತದೆ' ಎಂದು ತಿರುಗೇಟು ನೀಡಿದರು.

ಪ್ರತಿಕ್ರಿಯಿಸಿ (+)