ಬುಧವಾರ, ಜೂಲೈ 8, 2020
27 °C

ಕೇಂದ್ರ ಸಂಪುಟ ಶೀಘ್ರ ಪುನರ್ ರಚನೆ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ ಒಂದು ವಾರದಿಂದ ತೀವ್ರ ಚರ್ಚೆಯಲ್ಲಿರುವ ಬಹು ನಿರೀಕ್ಷಿತ ಕೇಂದ್ರ ಸಂಪುಟ ಪುನರ್ ರಚನೆ ಶೀಘ್ರದಲ್ಲೇ ನಡೆಯಲಿದ್ದು, ಖಾಲಿ ಇರುವ ಸ್ಥಾನಗಳ ಭರ್ತಿ ಒಳಗೊಂಡಂತೆ ಕೆಲವೇ ಕೆಲವು ಬದಲಾವಣೆ ಮಾಡಲು ಪ್ರಧಾನಿ ಮನಮೋಹನ್‌ಸಿಂಗ್ ಬಯಸಿದ್ದಾರೆ.

‘2ಜಿ ತರಂಗಾಂತರ’ ಮತ್ತು ‘ಐಪಿಎಲ್’ ಹಗರಣಗಳಿಂದಾಗಿ ಖಾಲಿಯಾಗಿರುವ ಎ. ರಾಜಾ, ಶಶಿ  ತರೂರ್ ಹಾಗೂ ‘ಆದರ್ಶ ಹೌಸಿಂಗ್’ ಅವ್ಯವಹಾರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿ ನೇಮಕಗೊಂಡ ಪೃಥ್ವಿರಾಜ್ ಚವಾಣ್ ಅವರ ಸ್ಥಾನಗಳಿಗೆ ಹೊಸಬರ ನೇಮಕ ನಡೆಯಲಿದೆ. ಇದರೊಟ್ಟಿಗೆ ದಕ್ಷತೆ ಪರಿಗಣನೆ, ಭ್ರಷ್ಟಾಚಾರ ಆರೋಪ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆ ಅಂಶಗಳನ್ನು ಆಧರಿಸಿ ಕೆಲವು ಬದಲಾವಣೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಪುಟ ಪುನರ್‌ರಚನೆಗೆ ಸಂಬಂಧಿಸಿದಂತೆ ಮನಮೋಹನ್‌ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಹಲವು ಸುತ್ತು ಚರ್ಚಿಸಿದ್ದಾರೆ. ಸೋಮವಾರ ಸಂಜೆ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ‘ಪುನರ್‌ರಚನೆ’ ವದಂತಿಗೆ ಬಲ ಬಂದಂತಾಗಿದೆ.

ರಾಜಾ ರಾಜೀನಾಮೆಯಿಂದ ತೆರವಾದ ಖಾತೆಯನ್ನು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರಿಗೆ ವಹಿಸಲಾಗಿದೆ. ಈ ಮಹತ್ವದ ಖಾತೆಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದ್ದು, ಸಿಬಲ್ ಅವರನ್ನೇ ಮುಂದುವರಿಸುವ ಉದ್ದೇಶ ಹೊಂದಿದೆ. ಇದಾದರೆ ಮಾನವ ಸಂಪನ್ಮೂಲ ಖಾತೆ ಮತ್ತೊಬ್ಬರ ಪಾಲಾಗಲಿದೆ. ಆದರೆ, ಸಿಬಲ್, ಮೂಲ ಖಾತೆ ಬಿಟ್ಟುಕೊಡಲು ಇಷ್ಟಪಡುತ್ತಿಲ್ಲ. ಮತ್ತೊಂದೆಡೆ ಡಿಎಂಕೆ ಎಂದಿನಂತೆ ದೂರ ಸಂಪರ್ಕ ಖಾತೆಯನ್ನು ತನಗೇ ಬಿಟ್ಟುಕೊಡಬೇಕೆಂದು ಒತ್ತಾಯ ಮಾಡುತ್ತಿದೆ. ಆದರೆ, ಆಡಳಿತ ಯುಪಿಎ ಜತೆಗೂಡಲು ಎಐಎಡಿಎಂಕೆ ತುದಿಗಾಲಲ್ಲಿ ನಿಂತಿರುವ ಹಿನ್ನೆಲೆಯಲ್ಲಿ ಕರುಣಾನಿಧಿ ಈ ಖಾತೆಗಾಗಿ ಪಟ್ಟು ಹಿಡಿಯಲಾರರು ಎಂದು ವಿಶ್ಲೇಷಿಸಲಾಗುತ್ತಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡಲು ವಿಫಲರಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರಿಂದ ಕೃಷಿ ಖಾತೆ ಹಿಂದಕ್ಕೆ ಪಡೆದು ಆಹಾರ ಹಾಗೂ ಗ್ರಾಹಕ ವ್ಯವಹಾರದಲ್ಲಿ ಮುಂದುವರಿಸುವ ಸಾಧ್ಯತೆಯಿದೆ. ಐಸಿಸಿ ಅಧ್ಯಕ್ಷರೂ ಆಗಿರುವ ಪವಾರ್ ಸದ್ಯದಲ್ಲೇ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಬಿಜಿಯಾಗಲಿದ್ದು, ಅಧಿಕ ಹೊರೆಯಿಂದ ಅವರನ್ನು ಮುಕ್ತಗೊಳಿಸಲು ಸಿಂಗ್ ಇಚ್ಛಿಸಿದ್ದಾರೆ. ಇದಕ್ಕೆ ಬದಲಾಗಿ ಕೇಂದ್ರ ಸಂಪುಟದಲ್ಲಿರುವ ಮತ್ತೊಬ್ಬ ಎನ್‌ಸಿಪಿ ಸಚಿವ ಪ್ರಫುಲ್ ಪಟೇಲ್ ಸಂಪುಟ ದರ್ಜೆಗೆ ಬಡ್ತಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಎಸ್. ಎಂ. ಕೃಷ್ಣ ವಿದೇಶಾಂಗ ಖಾತೆಯಲ್ಲೇ ಮುಂದುರಿಯುವುದು ಬಹುತೇಕ ಖಚಿತವಾಗಿದೆ. ಸಮರ್ಥ-ಮೃದು ಕೃಷ್ಣ ಅವರ ಕಾರ್ಯಕ್ಷಮತೆ ಪ್ರಧಾನಿ ಮತ್ತು ಸೋನಿಯಾ ಅವರಿಗೆ ತೃಪ್ತಿ ತಂದಿದೆ. ಆರಂಭದಲ್ಲಿ ಸ್ವಲ್ಪ ಎಡವಿದ್ದ ಕೃಷ್ಣ ಅನಂತರ ಖಾತೆಯನ್ನು ಕರಗತ ಮಾಡಿಕೊಂಡು ಎಲ್ಲರೂ ತಲೆದೂಗುವಂತೆ ಕೆಲಸ ಮಾಡುತ್ತಿದ್ದಾರೆ.

ಅಂತರ್‌ರಾಷ್ಟ್ರ ಮಟ್ಟದಲ್ಲಿ ಕೃಷ್ಣ ಅವರಿಗಿರುವ ವರ್ಚಸ್ಸು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಪಡೆಯಲು ಹಾಕುತ್ತಿರುವ ಶ್ರಮ ಅವರಿಗೆ ನೆರವಾಗಲಿದೆ. ಕಳೆದ ವಾರ ವಿದೇಶಾಂಗ ಸಚಿವರು ಸೋನಿಯಾ ಅವರನ್ನು ಭೇಟಿ ಮಾಡಿ ತಮ್ಮ ಇಲಾಖೆಯ ವಿದ್ಯಮಾನಗಳನ್ನು ವಿವರಿಸಿದ್ದಾರೆ.

ಆರೋಗ್ಯ ಖಾತೆ ಸಚಿವ ಗುಲಾಂನಬಿ ಆಜಾದ್ ಅವರನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡಿ ಪಕ್ಷದ ಕೆಲಸಕ್ಕೆ ಹಚ್ಚುವ ಸಂಭವವಿದೆ. ಮಾತುಕತೆ:  ಕೇಂದ್ರ ಮಂತ್ರಿಮಂಡಲ ಪುನರ್‌ರಚನೆ ಊಹಾಪೋಹದ ನಡುವೆ ಪ್ರಧಾನಿ  ಸಿಂಗ್ ಸೋಮವಾರ ಸಂಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಸುಮಾರು 45 ನಿಮಿಷ ಮಾತುಕತೆ ನಡೆಸಿದರು.

ಮಂತ್ರಿ ಮಂಡಲ ಪುನರ್‌ರಚನೆ, ಮುಂಬರುವ ಬಜೆಟ್ ಅಧಿವೇಶನ, ಬೆಲೆ ಏರಿಕೆ ಹಾಗೂ ಆಂತರಿಕ ಭದ್ರತೆ ಕುರಿತು ಇಬ್ಬರು ಸಮಾಲೋಚಿಸಿದರು. ಸದ್ಯದ ಆರ್ಥಿಕ ಸ್ಥಿತಿಗತಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಕುರಿತು ಇಬ್ಬರೂ  ಚರ್ಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.