ಕೇಂದ್ರ ಸಚಿವರ ಜಿಲ್ಲೆಯಲ್ಲಿ ನಿಲ್ಲದ ರೈಲುಗಳು

7

ಕೇಂದ್ರ ಸಚಿವರ ಜಿಲ್ಲೆಯಲ್ಲಿ ನಿಲ್ಲದ ರೈಲುಗಳು

Published:
Updated:

ಯಾದಗಿರಿ: ವಿಭಾಗದಲ್ಲಿಯೇ ಅತಿ ಹೆಚ್ಚು ಆದಾಯ, ನಿತ್ಯ ಸಾವಿರಾರು ಪ್ರಯಾಣಿಕರ ಓಡಾಟ, ಒಂದು ಜಿಲ್ಲೆಗೆ ಇಬ್ಬರು ಸಂಸದರು, ಅದರಲ್ಲಿಯೂ ಒಬ್ಬರು ಕೇಂದ್ರ ಸಚಿವರು. ಇಷ್ಟಾಗಿಯೂ ರೈಲ್ವೆ ಇಲಾಖೆಯ ಶಾಪದಿಂದ ಮಾತ್ರ ಜಿಲ್ಲೆಗೆ ಮುಕ್ತಿ ದೊರೆಯುತ್ತಿಲ್ಲ. ಈ ಮೊದಲು ತಾಲ್ಲೂಕು ಕೇಂದ್ರವಾಗಿದ್ದ ಯಾದಗಿರಿ, ಈಗ ಜಿಲ್ಲಾ ಕೇಂದ್ರ. ಆದರೂ ಯಾದಗಿರಿಯ ರೈಲು ನಿಲ್ದಾಣ ಕೇವಲ ಹೆಸರಿಗೆ ಎಂಬಂತಾಗಿದೆ. ಮುಂಬೈ, ಚೆನ್ನೈ, ಹೈದರಾಬಾದ, ಬೆಂಗಳೂರು, ತಿರುಪತಿ, ಕೊಲ್ಹಾಪುರ ಸೇರಿದಂತೆ ರಾಜ್ಯದ ವಿವಿಧೆಡೆ ಸಂಪರ್ಕ ಕಲ್ಪಿಸುವ ನಿಲ್ದಾಣವೂ ಇದಾಗಿದೆ.ಜನರಿಗೆ ಅತ್ಯವಶ್ಯಕವಾಗಿರುವ ರೈಲುಗಳ ನಿಲುಗಡೆ ಆಗಲಿ, ಅಗತ್ಯವಾಗಿರುವ ರೈಲು ಸಂಚಾರವಾಗಲಿ ಇದುವರೆಗೂ ಜಿಲ್ಲೆಯ ಜನರಿಗೆ ದೊರೆಯದಿರುವುದು ದುರ್ದೈವದ ಸಂಗತಿ ಎನ್ನುತ್ತಾರೆ ಇಲ್ಲಿನ ನಾಗರಿಕರು. ಬೆಂಗಳೂರಿನಿಂದ ದೆಹಲಿಗೆ ಓಡಾಡುವ ಕರ್ನಾಟಕ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ರಾಜಕೋಟ್ ಎಕ್ಸ್‌ಪ್ರೆಸ್, ಸಿಕಂದರಾಬಾದ್‌ನಿಂದ ಬೆಂಗಳೂರಿಗೆ ಸಂಚರಿಸುವ ಗರೀಬ್ ರಥ ರೈಲುಗಳಿಗೆ ಇದುವರೆಗೂ ಯಾದಗಿರಿಯ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಿಲ್ಲ.ಇದರ ಜೊತೆಗೆ 15 ದಿನಗಳ ಹಿಂದಷ್ಟೇ ಆರಂಭಿಸಿರುವ ಪದ್ಮಾವತಿ ಎಕ್ಸ್‌ಪ್ರೆಸ್ ರೈಲೂ ಇಲ್ಲಿ ನಿಲ್ಲುವುದಿಲ್ಲ. ಬಡಜನರಿಗಾಗಿಯೇ ಆರಂಭಿಸಿರುವ ಗರೀಬ್ ರಥ ರೈಲು ಯಾದಗಿರಿಯ ನಿಲ್ದಾಣದಲ್ಲಿ ನಿಲ್ಲದಿರುವುದು ಈ ಭಾಗದ ಜನರಲ್ಲಿ ಬೇಸರ ಮೂಡಿಸಿದೆ. ಇದರ ಜೊತೆಗೆ ಗುಲ್ಬರ್ಗ-ಬೆಂಗಳೂರು, ರಾಯಚೂರು-ಹೈದರಾಬಾದ್‌ಗಳಿಗೆ ನಿತ್ಯ ಸಂಚರಿಸುವ ರೈಲು ಸೇವೆ ಒದಗಿಸುವುದು ಈ ಭಾಗದ ಜನರ ಒತ್ತಾಯವಾಗಿದೆ. ಯಾದಗಿರಿ-ಆಲಮಟ್ಟಿ ಮಾರ್ಗ: ಕಳೆದ 2 ದಶಕಗಳಿಂದಲೂ ಈ ಭಾಗದ ಜನರು ಯಾದಗಿರಿ-ಆಲಮಟ್ಟಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಆಗ್ರಹಿಸುತ್ತಲೇ ಬಂದಿದ್ದಾರೆ. ಕಳೆದ ಬಾರಿ ರೈಲ್ವೆ ಬಜೆಟ್‌ನಲ್ಲಿ ಈ ಮಾರ್ಗದ ಸಮೀಕ್ಷೆ ನಡೆಸಲು ರೈಲ್ವೆ ಸಚಿವಾಲಯ ಅವಕಾಶ ಕಲ್ಪಿಸಿದೆ. ಅದರಂತೆ ಇದೀಗ ಸಮೀಕ್ಷೆಯ ಕಾರ್ಯವೂ ಪೂರ್ಣಗೊಂಡಿದೆ. ವರದಿ ಸಲ್ಲಿಕೆ ಆಗಬೇಕಾಗಿದೆ.ಯಾದಗಿರಿಯಿಂದ ಸುರಪುರ, ಹುಣಸಗಿ, ತಾಳಿಕೋಟಿ, ಮುದ್ದೇಬಿಹಾಳ, ನಿಡಗುಂದಿ ಮಾರ್ಗವಾಗಿ ಆಲಮಟ್ಟಿ ಸೇರುವ ಈ ರೈಲು ಮಾರ್ಗವು ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ನಡುವಿನ ಸಂಪರ್ಕ ಸೇತುವೆ ಆಗಲಿದೆ. ಈ ಮಾರ್ಗ ನಿರ್ಮಾಣವಾದಲ್ಲಿ ಸುತ್ತಿ ಬಳಸಿ ಪ್ರಯಾಣಿಸುವುದು ತಪ್ಪಲಿದೆ. ಸದ್ಯಕ್ಕೆ ಯಾದಗಿರಿಯಿಂದ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಲು ಗುಂತಕಲ್ ಮಾರ್ಗವಾಗಿಯೇ ಹೋಗಬೇಕು. aಾಗಾಗಿ ದೂರ ಮತ್ತು ಸಮಯವೂ ವ್ಯರ್ಥವಾಗುತ್ತಿದೆ. ಯಾದಗಿರಿ-ಆಲಮಟ್ಟಿ ರೈಲು ಮಾರ್ಗ ನಿರ್ಮಾಣ ಆದಲ್ಲಿ ತ್ವರಿತವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಸಂಪರ್ಕಿಸುವುದು ಸಾಧ್ಯವಾಗಲಿದೆ.ಈಗಾಗಲೇ ಈ ಮಾರ್ಗದ ಸಮೀಕ್ಷೆ ಕಾರ್ಯ ಮುಗಿದಿದ್ದು, ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎನ್ನುವ ಒತ್ತಾಯ ಹೆಚ್ಚಾಗುತ್ತಿದೆ. ಅತಿ ಹೆಚ್ಚು ಆದಾಯ: ದಕ್ಷಿಣ ಮಧ್ಯ ರೈಲ್ವೆ ವಲಯದ ವ್ಯಾಪ್ತಿಗೆ ಬರುವ ಯಾದಗಿರಿಯ ರೈಲು ನಿಲ್ದಾಣವು, ಗುಂತಕಲ್ ವಿಭಾಗದಲ್ಲಿಯೇ ಅತಿ ಹೆಚ್ಚು ಆದಾಯ ಗಳಿಸುವ ಎರಡನೇ ನಿಲ್ದಾಣವಾಗಿದೆ. ದಿನಕ್ಕೆ 6 ಜನರು ಈ ನಿಲ್ದಾಣದಿಂದ ಪ್ರಯಾಣಿಸುತ್ತಾರೆ. ಸುಮಾರು 3,500 ಜನರು ಟಿಕೀಟ್ ಖರೀದಿಸಿ ಪ್ರಯಾಣಿಸಿದರೆ, 2,500 ಜನರು ಪಾಸ್ ಸೌಲಭ್ಯ ಹೊಂದಿದ್ದಾರೆ.ನಿತ್ಯ ರೂ.3 ರಿಂದ 3.5 ಲಕ್ಷ ಆದಾಯ ಇಲ್ಲಿಂದಲೇ ಬರುತ್ತದೆ. ತಿಂಗಳಿಗೆ ಬರೋಬ್ಬರಿ ಒಂದು ಕೋಟಿ ಆದಾಯ ತಂದು ಕೊಡುವ ನಿಲ್ದಾಣವೂ ಇದಾಗಿದೆ. ಇಷ್ಟೆಲ್ಲ ಆದರೂ ರೈಲ್ವೆ ಇಲಾಖೆ ಮಾತ್ರ ಯಾವುದೇ ಹೊಸ ಸೌಲಭ್ಯಗಳನ್ನು ನೀಡದಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನ ಉಂಟು ಮಾಡಿದೆ. ಇಬ್ಬರು ಸಂಸದರು: ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ರೈಲ್ವೆ ಇಲಾಖೆಯ ಸೌಲಭ್ಯ ಪಡೆಯುವುದು ಸುಲಭದ ಮಾತಲ್ಲ. ಇದಕ್ಕೆ ಸಂಸದರೇ ಪ್ರಯತ್ನಿಸಬೇಕು. ಆದರೆ ಎಲ್ಲ ಜಿಲ್ಲೆಗಳಲ್ಲೂ ಒಬ್ಬರೇ ಸಂಸದರಿದ್ದರೆ, ಯಾದಗಿರಿಯ ಭಾಗ್ಯ ಎಂಬಂತೆ ಜಿಲ್ಲೆಗೆ ಇಬ್ಬರು ಸಂಸದರಿದ್ದಾರೆ.ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರವು ಗುಲ್ಬರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು, ಉಳಿದ ಮೂರು ವಿಧಾನಸಭಾ ಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ, ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಅವರು ಜಿಲ್ಲೆಯ ರೈಲು ಸೌಲಭ್ಯಗಳ ಬಗೆಗೆ ಗಮನ ನೀಡಬೇಕಾಗಿದೆ ಎಂಬುದು ಜನರ ಆಗ್ರಹ.

ಗುರುಮಠಕಲ್ ಕ್ಷೇತ್ರದಿಂದಲೇ ರಾಜಕೀಯವಾಗಿ ಬೆಳೆದು ಬಂದ ಮಲ್ಲಿಕಾರ್ಜುನ ಖರ್ಗೆ, ಸದ್ಯಕ್ಕೆ ಕೇಂದ್ರ ಸಚಿವರು. ಆದರೆ, ಅವರ ಪ್ರತಿನಿಧಿಸಿದ ಜಿಲ್ಲೆಯ ್ಲಜನರೇ ರೈಲ್ವೆ ಸೌಲಭ್ಯಗಳಿಗಾಗಿ ಪರದಾಡುವಂತಾಗಿರುವುದು ವಿಷಾದದ ಸಂಗತಿ. ಸೌಲಭ್ಯ ಕೊಡಿ: ಯಾದಗಿರಿ ಈಗ ಜಿಲ್ಲೆಯಾಗಿದೆ. ಇಲ್ಲಿಂದ ಬೇರೆ ಕಡೆಗಳಿಗೆ ತೆರಳುವ ಹಾಗೂ ಜಿಲ್ಲೆಗೆ ಬೇರೆಡೆಯಿಂದ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ಜನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಗರೀಬ್‌ರಥನಂತಹ ರೈಲುಗಳಿಗೆ ಯಾದಗಿರಿಯಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಆವಂತಿ.ಅತಿ ಹೆಚ್ಚು ಆದಾಯ ಪಡೆಯುತ್ತಿರುವ ರೈಲ್ವೆ ಇಲಾಖೆಯು, ಯಾದಗಿರಿಗೆ ಸೌಲಭ್ಯ ಕೊಡುವುದರ ಬದಲು, ಇರುವ ಸೌಲಭ್ಯಗಳನ್ನು ಕಡಿತ ಮಾಡುತ್ತಿದೆ. ಹೈದರಾಬಾದ್‌ನಿಂದ ಕೊಲ್ಹಾಪುರಕ್ಕೆ ನಿತ್ಯ ಸಂಚರಿಸುತ್ತಿದ್ದ ರಾಯಲ್ ಸೀಮಾ ಎಕ್ಸ್‌ಪ್ರೆಸ್ ಅನ್ನು ವಾರದಲ್ಲಿ ಎರಡು ದಿನ ಮಾಡಲಾಗಿದೆ. ಇದರಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರೈಲು ಇಲ್ಲದಂತಾಗಿದೆ ಎಂದು ಆರೋಪಿಸುತ್ತಾರೆ. ಈಗಾಗಲೇ ಸಂಸ್ಥೆಯು ರೈಲ್ವೆ ಇಲಾಖೆಗೆ ಮನವಿ ಮಾಡಿದೆ. ಹೊಸ ರೈಲು ಸೇವೆ, ರೈಲುಗಳ ನಿಲುಗಡೆ, ಮುಂಗಡ ಟಿಕೀಟ್ ಕಾಯ್ದಿರಿಸುವ ಕೌಂಟರ್ ಅನ್ನು 12 ಗಂಟೆ ಕಾರ್ಯ ನಿರ್ವಹಿಸುವಂತೆ ಮಾಡುವುದು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಇಲಾಖೆ ಕಲ್ಪಿಸುವುದು ಅತ್ಯವಶ್ಯಕವಾಗಿದೆ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry