ಕೇಂದ್ರ ಸರ್ಕಾರದಲ್ಲಿ 2ನೇ ಪ್ರಭಾವಿ ಸ್ಥಾನ ವಿವಾದ: ಪವಾರ್, ಪ್ರಫುಲ್ ರಾಜೀನಾಮೆ?

ಶನಿವಾರ, ಜೂಲೈ 20, 2019
22 °C

ಕೇಂದ್ರ ಸರ್ಕಾರದಲ್ಲಿ 2ನೇ ಪ್ರಭಾವಿ ಸ್ಥಾನ ವಿವಾದ: ಪವಾರ್, ಪ್ರಫುಲ್ ರಾಜೀನಾಮೆ?

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನಂತರದ ಎರಡನೇ ಪ್ರಭಾವಿ ಸ್ಥಾನವನ್ನು ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರಿಗೆ ನೀಡದ ಕಾರಣಕ್ಕೆ  ಅಸಮಾಧಾನಗೊಂಡ ಎನ್‌ಸಿಪಿ ಸಚಿವರು ಗುರುವಾರ ನಡೆದ ಸಚಿವ ಸಂಪುಟ ಸಭೆಗೆ ಗೈರುಹಾಜರಾದರು.

ಕಾಂಗ್ರೆಸ್ ನಿಲುವಿನಿಂದ ಬೇಸತ್ತ ಪವಾರ್ ಹಾಗೂ ಭಾರಿ ಉದ್ದಿಮೆ ಸಚಿವ ಪ್ರಫುಲ್ ಪಟೇಲ್,  ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುವ ಮೂಲಕ ಆಡಳಿತಾರೂಢ ಯುಪಿಎ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ರಾಷ್ಟ್ರಪತಿ ಚುನಾವಣೆಗಾಗಿ ನಡೆದ ಮತದಾನದ ವೇಳೆ ಯುಪಿಎ ಒಗ್ಗಟ್ಟು ಪ್ರದರ್ಶಿಸಿದ ದಿನದಂದೇ ಎನ್‌ಸಿಪಿ ಸಚಿವರುಗಳ ವರ್ತನೆ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ.

ಆದರೆ, ಪವಾರ್ ಹಾಗೂ ಪಟೇಲ್ ರಾಜೀನಾಮೆ ವರದಿಯನ್ನು ಪಕ್ಷದ ವಕ್ತಾರ ಡಿ. ಪಿ. ತ್ರಿಪಾಠಿ ತಳ್ಳಿಹಾಕಿದ್ದಾರೆ. `ಕಳೆದ ಎಂಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪವಾರ್ ಮತ್ತು ಪ್ರಫುಲ್ ಪಟೇಲ್ ಅವರು ಸಚಿವ ಸಂಪುಟ ಸಭೆಗೆ ಹಾಜರಾಗಲಿಲ್ಲ~ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಪ್ರಧಾನಿ ನಿವಾಸದಲ್ಲಿ ಗುರುವಾರ ಸಂಜೆ 6 ಗಂಟೆಗೆ ಸಚಿವ ಸಂಪುಟ ಸಭೆ ನಡೆಯುತ್ತಿದ್ದ ವೇಳೆ ಪವಾರ್ ಅವರು ಪಕ್ಷದ ಕೆಲವು ಹಿರಿಯ ಸದಸ್ಯರೊಂದಿಗೆ ತಮ್ಮ ನಿವಾಸದಲ್ಲಿ ಚರ್ಚೆ ನಡೆಸುತ್ತಿದ್ದರು.

ಇದುವರೆಗೆ ಎರಡನೇ ಪ್ರಭಾವಿ ಸ್ಥಾನದಲ್ಲಿದ್ದ ಪ್ರಣವ್ ಮುಖರ್ಜಿ ಅವರ ರಾಜೀನಾಮೆಯಿಂದ, ಸಂಪುಟದಲ್ಲಿ   ಮೂರನೇ ಸ್ಥಾನದಲ್ಲಿದ್ದ ತಾವು ಆ ಸ್ಥಾನಕ್ಕೆ ನಿಯುಕ್ತಿ ಹೊಂದಬಹುದು ಎಂದು ಪವಾರ್ ನಿರೀಕ್ಷಿಸಿದ್ದರು. ಅಲ್ಲದೆ ಮುಖರ್ಜಿ ಅವರ ರಾಜೀನಾಮೆ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪವಾರ್ ಎರಡನೇ ಸ್ಥಾನದ್ಲ್ಲಲಿಯೇ  ಕುಳಿತುಕೊಂಡಿದ್ದರು. ಆದರೆ, ಆನಂತರ  ನಡೆದ ಸಂಪುಟ ಸಭೆಯಲ್ಲಿ ರಕ್ಷಣಾ ಸಚಿವ ಎ. ಕೆ. ಆಂಟನಿ ಅವರನ್ನು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಆಂಟನಿ ಅವರು ಎರಡನೇ ಪ್ರಭಾವಿ ವ್ಯಕ್ತಿ ಎಂದು ಸರ್ಕಾರ ಸಾಂಕೇತಿಕವಾಗಿ ತಿಳಿಸಿತ್ತು.

ಇದರಿಂದ ಪವಾರ್ ಹಾಗೂ ಎನ್‌ಸಿಪಿ ಸಚಿವರು ಮುನಿಸಿಕೊಂಡಿದ್ದರು. ಪ್ರಧಾನಿಗೆ ಸಂಬಂಧಿಸಿದ ಸರ್ಕಾರದ ಅಧಿಕೃತ ಅಂತರಜಾಲ ತಾಣಗಳಲ್ಲಿ  ಇರುವ ಸಂಪುಟ ಸಚಿವರುಗಳ ಪಟ್ಟಿಯಲ್ಲಿ ಪವಾರ್ ಹೆಸರು ಎರಡನೇ ಸ್ಥಾನದಲ್ಲಿತ್ತು.  ಈಗ ಕೇವಲ ಪ್ರಧಾನಿ ಅವರ  ಅಧಿಕೃತ ವೆಬ್‌ಸೈಟ್ ಮಾತ್ರವಲ್ಲದೆ ಸಂಪುಟ ಕಾರ್ಯದರ್ಶಿ ಅವರ ಅಧಿಕೃತ ವೆಬ್‌ಸೈಟ್‌ನಿಂದಲೂ ಈ ಪಟ್ಟಿ ಕಣ್ಮರೆಯಾಗಿರುವುದು ಮೊದಲೇ ಕೋಪಗೊಂಡಿದ್ದ ಎನ್‌ಸಿಪಿಯನ್ನು ಮತ್ತಷ್ಟು ಕೆರಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry