ಕೇಂದ್ರ ಸರ್ಕಾರದಿಂದ ಕಲ್ಲಿದ್ದಲು, ವಿದ್ಯುತ್ ಪೂರೈಕೆಯಲ್ಲಿ ರಾಜಕೀಯ

7

ಕೇಂದ್ರ ಸರ್ಕಾರದಿಂದ ಕಲ್ಲಿದ್ದಲು, ವಿದ್ಯುತ್ ಪೂರೈಕೆಯಲ್ಲಿ ರಾಜಕೀಯ

Published:
Updated:

ನವದೆಹಲಿ: `ಕೇಂದ್ರ ಸರ್ಕಾರ ರಾಜ್ಯಕ್ಕೆ ಕಲ್ಲಿದ್ದಲು ಮತ್ತು ವಿದ್ಯುತ್ ಪೂರೈಸುವ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಆರೋಪಿಸಿದರು.

ಕೇಂದ್ರ ಇಂಧನ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೇಂದ್ರ ಸರ್ಕಾರ ನಮ್ಮ ಉಷ್ಣ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದಲನ್ನು ಸರಬರಾಜು ಮಾಡುತ್ತಿಲ್ಲ. ಹೊಸ ಜಾಲದಿಂದ ವಿದ್ಯುತ್ ಪೂರೈಕೆ ಮಾಡದೆ ಅನ್ಯಾಯ ಮಾಡಲಾಗುತ್ತಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ 2ನೇ ಘಟಕವನ್ನು ಈ ತಿಂಗಳ 25ರಿಂದ ಆರಂಭಿಸಲು ಉದ್ದೇಶಿಸಲಾಗಿದೆ. ಆದರೆ, ನಮ್ಮ ಬಳಿ ಕಲ್ಲಿದ್ದಲೇ ಇಲ್ಲ. ತಕ್ಷಣ ಕಲ್ಲಿದ್ದಲು ಪೂರೈಸಲು ಮನವಿ ಮಾಡಲಾಗಿದೆ. ಒಂದೆರಡು ವರ್ಷ ಕಾಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಹೀಗಾದರೆ ವಿದ್ಯುತ್ ಘಟಕ ಆರಂಭಿಸುವುದಾದರೂ ಹೇಗೆ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಬಳ್ಳಾರಿ 2ನೇ ಘಟಕಕ್ಕೆ ಕಲ್ಲಿದ್ದಲು ಗಣಿ ಮಂಜೂರಾಗಿದೆ. ಆದರೆ, ಪರಿಸರ ಇಲಾಖೆ ಅನುಮೋದನೆ ಒಳಗೊಂಡಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡು ಕಲ್ಲಿದ್ದಲು ಸ್ಥಾವರಕ್ಕೆ ಬರಲು ನಾಲ್ಕೈದು ವರ್ಷ ಬೇಕಾಗಲಿದೆ ಎಂದು ಸ್ಪಷ್ಟಪಡಿಸಿದರು.

ಛತ್ತೀಸ್‌ಗಡದ ಜತೆ 250 ಮೆ.ವಾ ಮತ್ತು ಮಧ್ಯಪ್ರದೇಶದ ಜತೆ 250ಮೆ.ವಾ. ವಿದ್ಯುತ್ ಉತ್ಪಾದನೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿತರಣಾ ಜಾಲ ಸಿಗದಿದ್ದರಿಂದ ಶೇ. 25ರಿಂದ 30 ರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಆಂಧ್ರಕ್ಕೆ ಮಾತ್ರ ಆದ್ಯತೆ ಮೇಲೆ ವಿತರಣಾ ಜಾಲ ನೀಡಲಾಗುತ್ತಿದೆ ಎಂದು ಟೀಕಿಸಿದರು.

ಕೇಂದ್ರದ ಹೊಸ ವಿದ್ಯುತ್ ಜಾಲಗಳಿಂದ ಆಂಧ್ರ, ತಮಿಳುನಾಡಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಒಂದೇ ಒಂದು ಯೂನಿಟ್ ನಿಗದಿಯಾಗಿಲ್ಲ. ಕಳೆದ ಜುಲೈ 7 ರಂದು ಹೊರಡಿಸಿರುವ ಆದೇಶದಲ್ಲಿ ಜಜ್ಜಾರ್ ವಿದ್ಯುತ್ ಗ್ರಿಡ್‌ನಿಂದ ಆಂಧ್ರಕ್ಕೆ 231 ಮೆ.ವಾ ಮತ್ತು ದಾಬ್ರಿ ವಿದ್ಯುತ್ ಸ್ಥಾವರದಿಂದ ತಮಿಳುನಾಡಿಗೆ 735 ಮೆ.ವಾ ನಿಗದಿಪಡಿಸಿದೆ. ಕರ್ನಾಟಕಕ್ಕೆ ಬರೀಗೈ ಸಿಕ್ಕಿದೆ ಎಂದು ವಿಷಾದಿಸಿದರು.

ಬಳ್ಳಾರಿ, ರಾಯಚೂರು ಉಷ್ಣ ವಿದ್ಯುತ್ ಸ್ಥಾವರಗಳಿಗೂ ಸರಿಯಾಗಿ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ. ದಿನನಿತ್ಯದ ಆಧಾರದಲ್ಲಿ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ. ನಮ್ಮಲ್ಲಿದ್ದ 4 ಲಕ್ಷ ಟನ್ ದಾಸ್ತಾನು ಖಾಲಿಯಾಗಿದೆ. ಈಗ 20 ಸಾವಿರ ಟನ್ ಕಲ್ಲಿದ್ದಲು ಉಳಿದಿದೆ. ಇದು ಐದು ಯೂನಿಟ್‌ಗೆ ಒಂದು ದಿನಕ್ಕೆ ಸಾಕಾಗಲಿದೆ ಎಂದು ಸಚಿವರು ಹೇಳಿದರು.

ಕಳೆದ ಏಪ್ರಿಲ್‌ನಿಂದ ಜನವರಿವರೆಗೆ ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಶೇ. 71 ಹಾಗೂ ಮಹಾನದಿ ಕಲ್ಲಿದ್ದಲು ಗಣಿಯಿಂದ ಶೇ. 64 ರಷ್ಟು ಕಲ್ಲಿದ್ದಲು ಮಾತ್ರ ಪೂರೈಕೆಯಾಗಿದೆ. ಇದರಿಂದ ದಾಸ್ತಾನಿಡಲು ಸಾಧ್ಯವಾಗಿಲ್ಲ. ಶೇ.90ರಿಂದ 95ರಷ್ಟು ಕಲ್ಲಿದ್ದಲು ಬಂದಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಅಥವಾ ಯುಪಿಎ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಮಾತ್ರ ಕಲ್ಲಿದ್ದಲು ಮತ್ತು ವಿದ್ಯುತ್ ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಈ ತಾರತಮ್ಯದ ವಿರುದ್ಧ ಸಂಘರ್ಷಕ್ಕೆ ಇಳಿಯುವುದೊಂದೇ ಉಳಿದಿರುವ ಮಾರ್ಗ. ನಾಲ್ಕಾರು ಬಾರಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಅನ್ಯಾಯ ಸರಿಪಡಿಸುವ ಕೆಲಸ ಆಗಿಲ್ಲ. ನಮಗೆ ನ್ಯಾಯ ಸಿಗಬೇಕಾದರೆ ಧರಣಿ, ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ನೆರೆಯ ರಾಜ್ಯಗಳಿಗೆ ಪೂರೈಕೆ

`ಕೇಂದ್ರದ ಹೊಸ ವಿದ್ಯುತ್ ಜಾಲಗಳಿಂದ ಆಂಧ್ರ, ತಮಿಳುನಾಡಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಒಂದೇ ಒಂದು ಯೂನಿಟ್ ನಿಗದಿಯಾಗಿಲ್ಲ. ಕಲ್ಲಿದ್ದಲು ಪೂರೈಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry