ಭಾನುವಾರ, ಏಪ್ರಿಲ್ 11, 2021
20 °C

ಕೇಂದ್ರ ಸರ್ಕಾರ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲದು: ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವ ದಹೆಲಿ (ಪಿಟಿಐ): ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜೀನಾಮನೆ ನೀಡುವವರೆಗೂ ಪ್ರತಿಭಟನೆ ನಿಲ್ಲದು ಎಂದು ಮಂಗಳವಾರ ಬಿಜೆಪಿ ತಿಳಿಸಿದೆ.

`ಸರ್ಕಾರ ಹಾಗೂ ಪ್ರಧಾನಿ ಇಬ್ಬರೂ ರಾಜೀನಾಮೆ ನೀಡಬೇಕನ್ನುವುದು ನಮ್ಮ ಬೇಡಿಕೆ. ಸಿಎಜಿ ವರದಿಯೊಂದೇ ನಮ್ಮ ಬೇಡಿಕೆಗೆ ಕಾರಣವಲ್ಲ. ಇದರೊಂದಿಗೆ ಹಲವಾರು ದೂರು ಹಾಗೂ ಭ್ರಷ್ಟಾಚಾರದ ಆರೋಪಗಳು ಕೇಂದ್ರದ ಮೇಲಿವೆ~ ಎಂದು ಅದು ಆರೋಪಿಸಿದೆ.

`ಲಕ್ಷ ಕೋಟಿ ರೂಪಾಯಿ ಮೊತ್ತದ ಹಗರಣಗಳು ಇವೆ. ಆದರೆ ಇಂಥ ಆರೋಪ ಹೊತ್ತ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ. ಹೀಗಾಗಿ ಸರ್ಕಾರ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು~ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಸಂಸತ್ ಭವನದ ಎದುರು ಸುದ್ದಿಗಾರರಿಗೆ ತಿಳಿಸಿದರು.

`ತಮ್ಮ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಕ್ಷುಲ್ಲಕ ಕಾರಣಗಳನ್ನು ನೀಡುತ್ತಿದೆ. ಆದರೆ ಸಿಎಜಿ ನೀಡಿದ ವರದಿಯನ್ನು ಪರಿಷ್ಕರಿಸಲು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಗೆ ನೀಡುವ ಯಾವ ನಿಯಮಾವಳಿಗಳಿಗೂ ಅರ್ಥವಿಲ್ಲದಂತಾಗಿದೆ~ ಎಂದು ಅವರು ಆರೋಪಿಸಿದರು.

`ಯಾವುದಾದರೂ ಪ್ರಕರಣ ಪಿಎಸಿಗೆ ಕಳುಹಿಸುತ್ತಿದ್ದಂತೆ ಆಡಳಿತಾರೂಢ ಸರ್ಕಾರಗಳು ಸಮಿತಿಯನ್ನು ಸರಿಯಾಗಿ ಕೆಲಸ ಮಾಡಲು ಬಿಡದೆ ಅಂತಿಮವಾಗಿ ಸಮಿತಿ ಅಧ್ಯಕ್ಷರು ನೀಡಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸದ ಹಲವಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಹೀಗಾಗಿ ಪಿಎಸಿ ಅಥವಾ ಜೆಪಿಸಿಗಾಗಲೀ ಶಿಫಾರಸು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಸರ್ಕಾರ ಒಂದು ಕ್ಷಣವೂ ಅಧಿಕಾರ ನಡೆಸುವ ಹಕ್ಕನ್ನು ಕಳೆದುಕೊಂಡಿರುವುದರಿಂದ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು~ ಎಂದು ವೆಂಕಯ್ಯ ನಾಯ್ಡು ಅವರು ಕೇಂದ್ರವನ್ನು ಆಗ್ರಹಿಸಿದರು.

ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳೂ ಕಲ್ಲಿದ್ದಲ್ಲು ಹಗಣದಲ್ಲಿ ಭಾಗಿಯಾಗಿದೆ ಎಂಬ ಆರೋಪ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ `ಬಿಜೆಪಿ ಆಡಳಿತ ನಡೆಸುತ್ತಿರುವ ಏಕೈಕ ರಾಜ್ಯವೂ ಸಹ ಈ ಹಗರಣದಲ್ಲಿ ಭಾಗಿಯಾಗಿಲ್ಲ. ಇದಕ್ಕೆಲ್ಲಾ ಕೇಂದ್ರ ಸರ್ಕಾರವೇ ಹೊಣೆ~ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.