ಕೇಂದ್ರ ಸರ್ಕಾರ ವಿರುದ್ಧ ಹೋತಾ ಕಿಡಿನುಡಿ

7

ಕೇಂದ್ರ ಸರ್ಕಾರ ವಿರುದ್ಧ ಹೋತಾ ಕಿಡಿನುಡಿ

Published:
Updated:

ಮುಡಿಪು: `ಕೇಂದ್ರ ಸರ್ಕಾರ ವಿದೇಶಿ ವಿ.ವಿ.ಗಳ ಜತೆ ಒಪ್ಪಂದ ಮಾಡಿಕೊಂಡು ಖಾಸಗಿ ಸಂಸ್ಥೆಗಳಿಗೆ ಲಕ್ಷ, ಕೋಟಿ ಲೆಕ್ಕದಲ್ಲಿ ಸಬ್ಸಿಡಿ ನೀಡುವುದೇ ಶೈಕ್ಷಣಿಕ ಸಾಧನೆಯೆಂದು ಬಿಂಬಿಸುತ್ತಿರುವುದು ದುರಂತ~ ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ಅಧ್ಯಕ್ಷ, ಮಾಜಿ ಸಂಸದ ಬಿ.ಎಸ್.ಹೋತಾ ಅಸಮಾಧಾನ ವ್ಯಕ್ತಪಡಿಸಿ ದರು.ಮಂಗಳೂರು ವಿಶ್ವವಿದ್ಯಾಲಯ ಶಿಕ್ಷಕೇತರ ಉದ್ಯೋಗಿಗಳ ಸಂಘದ ರಜತ ಮಹೋತ್ಸವ ಪ್ರಯುಕ್ತ ವಿ.ವಿ.ಯ ವಿಜ್ಞಾನ ಸಂಕೀರ್ಣ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿ ಸುಮಾರು ಮೂರು ಲಕ್ಷ ಶಿಕ್ಷಕೇತರ ನೌಕರರಿದ್ದು ಯು.ಜಿ.ಸಿ. ವೇತನ ನೀಡಲು ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇನ್ನು ಖಾಸಗಿ ವಿ.ವಿ.ಗಳಲ್ಲಿ ದೇಶದ ಬೆರಳೆಣಿಕೆ ಸಂಖ್ಯೆಯ ವಿ.ವಿ.ಗಳು ಮಾತ್ರ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ದೇಶದೆಲ್ಲೆಡೆ ಇಂದು ಒಂದು ವೈದ್ಯ ಪದವಿಗೆ ಕಡಿಮೆಯೆಂದರೂ 40 ಲಕ್ಷ ರೂಪಾಯಿ ವ್ಯಯಿಸಬೇಕಾಗಿದೆ. ಅಷ್ಟೊಂದು ಮೊತ್ತ ಭರಿಸುವ ಪೋಷಕರು ಗೊತ್ತಿದ್ದೂ ಸುಲಿಗೆಗೆ ಒಳಗಾಗುತ್ತಿದ್ದಾರೆ~ ಎಂದು ಅವರು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಮಾತನಾಡಿ, `ಭಾರತ ಸೂಪರ್ ಪವರ್ ಎಂಬ ಹೆಗ್ಗಳಿಗೆ ಪಾತ್ರವಾಗಬೇಕಾದರೆ ಆರ್ಥಿಕ ಸದೃಢತೆಗಿಂತಲೂ ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಅಮೂಲಾಗ್ರ ಬದಲಾವಣೆ ಕಾಣುವುದು ಅತಿ ಮುಖ್ಯ~ ಎಂದು ಅಭಿಪ್ರಾಯಪಟ್ಟರು.ಪ್ರಪಂಚದ ಯುವ ದೇಶ ಎಂಬ ಹೆಗ್ಗಳಿಕೆ ನಮ್ಮದಾದರೆ ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ನಮ್ಮ ಸಾಧನೆ ಕೇವಲ ಶೇ 12.4 ಮಾತ್ರ. ಇಲ್ಲಿಗೆ ಇನ್ನೂ ಒಂದು ಸಾವಿರ ವಿ.ವಿ.ಗಳ ಅಗತ್ಯ ಇದೆ. ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ, ಗುಣಮಟ್ಟದ ಶಿಕ್ಷಣ, ಶಿಕ್ಷಣದಲ್ಲಿ ಹಿಂದುಳಿದವರು, ಮಹಿಳೆಯರು ಶಿಕ್ಷಣ ಪಡೆದಾಗ ಜತೆಗೆ ಆರೋಗ್ಯ ಕ್ಷೇತ್ರದಲ್ಲೂ ಬದಲಾವಣೆ ಕಂಡರೆ ಮಾತ್ರ ಮುಂದಿನ 30 ವರ್ಷಗಳಲ್ಲಿ ಶೇ 30ರಷ್ಟು ಬೆಳವಣಿಗೆ ಕಾಣಲು ಸಾಧ್ಯ~ ಎಂದು ವಿವರಿಸಿದರು.ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ್, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಒಕ್ಕೂಟದ ಅಧ್ಯಕ್ಷ ಶಂಕರ್, ಮಂಗಳೂರು ವಿ.ವಿ. ಕುಲಸಚಿವ ಪ್ರೊ.ಕೆ.ಚಿನ್ನಪ್ಪ ಗೌಡ ವೇದಿಕೆಯಲ್ಲಿದ್ದರು.ಮಂಗಳೂರು ವಿವಿ ಶಿಕ್ಷಕೇತರ ಉದ್ಯೋಗಿ ಗಳ ಸಂಘದ ಅಧ್ಯಕ್ಷ ದೇವೇಂದ್ರ ಕುಮಾರ್ , ಕಾರ್ಯದರ್ಶಿ ರವಿಪ್ರಕಾಶ್ ಎಸ್., ವಿಠಲ ಶೆಟ್ಟಿ  ಹರೀಶ್ ಕುಮಾರ್ ಕೆ , ಗೋವಿಂದ ಮಟ್ಟಿ ಇದ್ದರು. ಸಮಾರೋಪದ ಬಳಿಕ ಸಂಘದ ಸದಸ್ಯ, ಸದಸ್ಯೆಯರಿಂದ ನೃತ್ಯ, ತುಳು ನಾಟಕ `ಏರ್ ಮಲ್ತಿನ ತಪ್ಪು~ ಪ್ರದರ್ಶನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry