ಶನಿವಾರ, ಏಪ್ರಿಲ್ 1, 2023
23 °C

ಕೇಂದ್ರ ಹಗರಣಗಳ ವಿರುದ್ಧ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಹಗರಣಗಳ ವಿರುದ್ಧ ಹೋರಾಟ

ಬೆಂಗಳೂರು: ‘ಎಬಿವಿಪಿ ಒಂದು ಅಖಿಲ ಭಾರತ ಸಂಘಟನೆಯಾಗಿರುವುದರಿಂದ ಕೇಂದ್ರ ಮಟ್ಟದಲ್ಲಿ ನಡೆಯುವ ಹಗರಣಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದೆಯೇ ಹೊರತು ರಾಜ್ಯದಲ್ಲಿ ನಡೆಯು ತ್ತಿರುವ ಹಗರಣಗಳನ್ನಲ್ಲ’ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಡಾ. ಮಿಲಿಂದ್ ಮರಾಠೆ ಸ್ಪಷ್ಟಪಡಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಬಿವಿಪಿ ಶಿಕ್ಷಣದ ವ್ಯಾಪಾರೀಕರಣ, ನಕ್ಸಲ್ ಭಯೋತ್ಪಾದನೆ, ರಾಮಜನ್ಮಭೂಮಿ. ಸರ್ ಎಂ.ವಿ.ವಿಶೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುವುದು ಹಾಗೂ ಯುಪಿಎ ಸರ್ಕಾರದಲ್ಲಿ ಹೊರಬಂದ 2ಜಿ ಸ್ಪೆಕ್ಟ್ರಂ ಹಗರಣದ ಕುರಿತು ಗೊತ್ತುವಳಿಗಳನ್ನು ಸಮ್ಮೇಳನದಲ್ಲಿ ಸ್ವೀಕರಿಸಲಾಗುವುದು’ ಎಂದರು.2ಜಿ ಸ್ಪೆಕ್ಟ್ರಂ ಹಗರಣದಂತೆ ರಾಜ್ಯದಲ್ಲಿಯೂ ಸಹ ನೂರಾರು ಎಕರೆ ಭೂಮಿಯನ್ನು ಡಿನೋಟಿಫೈ ಮಾಡುವ ಮೂಲಕ ಭೂಹಗರಣ ನಡೆಸಲಾಗಿದೆ. ಡಿನೋಟಿಫೈ, ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದದ್ದನ್ನು ರಾಜ್ಯದ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಆ ವಿಷಯವನ್ನು ಏಕೆ ಗೊತ್ತುವಳಿಯಲ್ಲಿ ಸ್ವೀಕರಿಸಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಬಿವಿಪಿ ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುತ್ತಿದೆ ಎಂಬ ಮಾತ್ರಕ್ಕೆ ಇಲ್ಲಿನ ಹಗರಣಗಳ ಬಗ್ಗೆ ಚರ್ಚಿಸಬೇಕೆಂದೇನೂ ಅಲ್ಲ. ಅದೇ ರೀತಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆಸುವ ಪ್ರಸಂಗ ಬಂದರೆ ಅಲ್ಲಿನ ಹಗರಣಗಳನ್ನು ತೆಗೆದುಕೊಳ್ಳಬೇಕೆಂದೇನೂ ಇಲ್ಲ’ ಎಂದರು.ಪತ್ರಕರ್ತರು ಸ್ಪಷ್ಟ ನಿಲುವು ತಿಳಿಸುವಂತೆ ಪಟ್ಟು ಹಿಡಿದಾಗ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್ ಅವರೇ ‘ಕರ್ನಾಟಕದಲ್ಲಿ ನಡೆದ ಭೂಹಗರಣಗಳ ಬಗ್ಗೆಯೂ ಗೊತ್ತುವಳಿ ಸ್ವೀಕರಿಸಲಾಗುವುದು’ ಎಂದು ಭರವಸೆ ನೀಡಿದರು.ಭಾರತದ ಎಲ್ಲ ರಾಜ್ಯಗಳಿಂದಲೂ ಸುಮಾರು 10,000 ಪ್ರತಿನಿಧಿಗಳು ಬರಲಿದ್ದಾರೆ. ಅದಲ್ಲದೇ ಬಹರೇನ್, ಮಾರಿಷಸ್, ಸಿಂಗಪೂರ, ನೇಪಾಳದಿಂದಲೂ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ. ಮರಾಠೆ ತಿಳಿಸಿದರು.ಇದಕ್ಕೂ ಮುನ್ನ ಮಾತನಾಡಿದ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್, ‘ವಿದ್ಯಾರ್ಥಿಗಳ ಸಮ್ಮೇಳನಕ್ಕೆ ಕಾಲೇಜುಗಳನ್ನಲ್ಲದೇ ಇನ್ನು ಯಾವ ಪ್ರದೇಶಗಳನ್ನು ಬಳಸಿಕೊಳ್ಳಲು ಸಾಧ್ಯ? ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಜಾಗದಲ್ಲಿ ಸಮ್ಮೇಳನ ಸಂಘಟಿಸುವಷ್ಟು ಎಬಿವಿಪಿ ಶ್ರೀಮಂತವಾಗಿಲ್ಲ.ಅದಲ್ಲದೇ ನಗರದ ವಿವಿಧ ಕಾಲೇಜುಗಳಿಗೆ ರಜೆ ಘೋಷಿಸಿರುವುದರಿಂದ ನಾವು ಆ ಜಾಗವನ್ನು ಬಳಸಿಕೊಳ್ಳುತ್ತಿದ್ದೇವೆ. ವಿನಾಕಾರಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಟೀಕಿಸಿರುವುದು ದುರದೃಷ್ಟಕರ’ ಎಂದರು.‘ನಾವು ಕಾಲೇಜುಗಳಲ್ಲಿ ಜಾಗ ಪಡೆದುಕೊಂಡಿರುವುದಕ್ಕೆ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯು ಪ್ರತಿಭಟನೆ ನಡೆಸಿದೆ. ಆ ಸಂಘಟನೆಯವರಿಗೆ ನಮ್ಮಂತೆ ಸಮ್ಮೇಳನ ಸಂಘಟಿಸುವ ಸಾಮರ್ಥ್ಯವಿಲ್ಲ. ಸುಮ್ಮನೆ ಇತರರನ್ನು ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದೆ. ಅದು ಸಮ್ಮೇಳನ ಸಂಘಟಿಸುವುದಾದರೆ, ಅದರ ಯಶಸ್ಸಿಗೆ ನಾನೇ ವರ್ಷಾನುಗಟ್ಟಲೇ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ’ ಎಂದು ಅವರು ಸವಾಲು ಹಾಕಿದರು. ಪ್ರತಿಭಟನೆ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ರಾಷ್ಟ್ರೀಯ ಸಮ್ಮೇಳನಕ್ಕೆ ಅನುಮತಿ ನೀಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಎನ್‌ಎಸ್‌ಯುಐ ಸಂಘಟನೆಯ ಸದಸ್ಯರು ನಗರದ ಪುರಭವನದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.ಸಮ್ಮೇಳನಕ್ಕಾಗಿ ವಿವಿಧ ಸರ್ಕಾರಿ ಕಾಲೇಜುಗಳನ್ನು ಪಡೆದುಕೊಂಡಿರುವ ಎಬಿವಿಪಿ ಕಾರ್ಯಕರ್ತರು ಆ ಕಾಲೇಜುಗಳನ್ನು ವಿರೂಪಗೊಳಿಸಿದ್ದಾರೆ. ಆ ಮೂಲಕ ಅವರು ಸರ್ಕಾರಿ ಸ್ವತ್ತನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ‘ಬಿಜೆಪಿ ಸರ್ಕಾರ ತನ್ನ ಅಂಗ ಸಂಸ್ಥೆಯಾದ ಎಬಿವಿಪಿಯ ಸಮ್ಮೇಳನಕ್ಕೆ ಅನುಮತಿ ನೀಡಿರುವುದರ ಜತೆಗೆ ಅನುದಾನವನ್ನೂ ನೀಡಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವಾಗ, ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರ ಸಮ್ಮೇಳನಕ್ಕೆ ಅನುಮತಿ ನೀಡಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ರಾವಣಿಕರ್ ಆರೋಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.