ಕೇಕ್‌ನಲ್ಲಿ ಪೆಂಟಗನ್

7

ಕೇಕ್‌ನಲ್ಲಿ ಪೆಂಟಗನ್

Published:
Updated:
ಕೇಕ್‌ನಲ್ಲಿ ಪೆಂಟಗನ್

ಅಮೆರಿಕಾ ರಕ್ಷಣಾ ಪಡೆಯ ಕೇಂದ್ರಸ್ಥಾನವಾಗಿರುವ ಪೆಂಟಗನ್‌ನಂತೆಯೇ ಈಗ ನಗರದಲ್ಲಿ ಪಂಚ ಭುಜಾಕೃತಿಯ ಕಟ್ಟಡ ಮೈದಳೆದಿದ್ದು, ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇದು ಅಮೆರಿಕದ ಪೆಂಟಗನ್ನನ್ನು ಅಕ್ಷರಶಃ ಹೋಲದೇ ಇದ್ದರೂ ಜನ ಅದನ್ನು ನೋಡಲು ಮುಗಿಬೀಳುತ್ತಿದ್ದಾರೆ. ಅಂದಹಾಗೆ, ಸಕ್ಕರೆಯ ಪಾಕದಲ್ಲಿ (ಶುಗರ್ ಮಾಡೆಲ್) ಸುಂದರವಾಗಿ ಮೈದಳೆದಿರುವ ಮಾದರಿ ಇದು.ವಿವಿಧತೆಯಲ್ಲಿ ಏಕತೆ ಅನ್ನುವ ಮಂತ್ರವನ್ನು ಇರಿಸಿಕೊಂಡು ಶುಗರ್ ಮಾಡೆಲ್‌ನಲ್ಲಿ ರೂಪುಗೊಂಡಿರುವ ಕೋಮು ಸಾಮರಸ್ಯದ ಪೆಂಟಗನ್ ಕೇಕ್ ಮಾಡೆಲ್ ವಿಶ್ವದ ಅತಿದೊಡ್ಡ ಕೇಕ್ ಪ್ರದರ್ಶನ ಎಂಬ ಅಗ್ಗಳಿಕೆ ಪಡೆದಿರುವ ನೀಲಗಿರೀಸ್‌ನ 38ನೇ ವರ್ಷದ ಕೇಕ್ ಪ್ರದರ್ಶನದಲ್ಲಿ ಎದ್ದು ನಿಂತಿದೆ. ಪಂಚ ಭುಜವನ್ನು ಹೊಂದಿರುವ ಈ ಪೆಂಟಗನ್‌ನ ಒಂದು ಭುಜದಲ್ಲಿ ಹಿಂದೂ ಧರ್ಮವನ್ನು ಬಿಂಬಿಸುವ ದೇವಾಲಯವಿದ್ದರೆ, ಇತರೆ ನಾಲ್ಕು ಭುಜದಲ್ಲಿ ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಹಾಗೂ ಬೌದ್ಧಮತವನ್ನು ಬಿಂಬಿಸುವ ಗೋಪುರಗಳಿವೆ. 22 ಅಡಿ ಅಗಲ, 22 ಅಡಿ ಉದ್ದ ಮತ್ತು 16 ಅಡಿ ಎತ್ತರದ ಪೆಂಟಗನ್ ಸಂಪೂರ್ಣವಾಗಿ ಸಕ್ಕರೆ ಪಾಕದಲ್ಲಿಯೇ ಎದ್ದು ನಿಂತಿದೆ ಎಂಬುದು ವಿಶೇಷ.ನಗರದಲ್ಲಿ ಪ್ರತಿವರ್ಷ ನಡೆವ ಕರಗ, ಕಡಲೆಕಾಯಿ ಪರಿಷೆಯಂತೆ ನೀಲಗಿರೀಸ್ ಆಯೋಜಿಸುವ ಕೇಕ್ ಶೋ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿರುತ್ತಾರೆ. ಪ್ರತಿವರ್ಷ ಒಂದಿಲ್ಲೊಂದು ವೈವಿಧ್ಯದಿಂದ ಗಮನ ಸೆಳೆವ ಈ ಶೋನಲ್ಲಿ ಕೇಕ್‌ಪ್ರಿಯರಿಗೆ ಕೇಕ್‌ನಲ್ಲಿ ರೂಪುಗೊಂಡ ಬೃಹತ್ ಮಾದರಿಗಳನ್ನು ಕಣ್ತುಂಬಿಕೊಳ್ಳುವ ಸಂಭ್ರಮ. ಅಂದಹಾಗೆ, ಈ ವರ್ಷ ಕೂಡ ನೀಲಗಿರೀಸ್ ತನ್ನ ಹೊಸತನದಿಂದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಪೆಂಟಗನ್ ಮಾದರಿ ಅಲ್ಲದೇ ಇನ್ನೂ ಅನೇಕ ಬಗೆಯ, ವಿವಿಧ ಆಕಾರದ ಕೇಕುಗಳು ಅನಾವರಣಗೊಂಡಿವೆ.ಪೆಂಟಗನ್‌ನಂತೆ ಜನಾಕರ್ಷಣೆಯ ಕೇಂದ್ರ ಬಿಂದುವಾಗಿರುವುದು ಪಗೋಡಾ ಕೇಕ್ ನಗರಿ (ನಗರ ಮತ್ತು ಅದರ ಸುತ್ತಮುತ್ತ ಆಟದ ರೈಲು). ಇದರ ಜತೆಗೆ ಸಿಂಬಾ ಸಿಂಹ, ಹಾಗ್‌ವರ್ಟ್ ಕ್ಯಾಸಲ್, ಹಾರುತ್ತಿರುವ ಸ್ಪೈಡರ್ ಮನ್, ಅಲೈಸ್ ಇನ್ ವಂಡರ್‌ಲ್ಯಾಂಡ್, ವೆಡ್ಡಿಂಗ್ ಬ್ರೈಡ್, ಮೋಟಾರ್ ಸೈಕಲ್, ಸ್ವೀಟ್ ಟ್ರೆಡಿಷನಲ್ ದೋಸಾ, ರಾಕ್ ಆನ್ ಡ್ರಮ್ ಸೆಟ್, ಚಾರಿಯಟ್, ವೆಜಿಟೆಬಲ್ ಸ್ಟ್ಯಾಂಡ್ ವಿಶೇಷ ಆಕರ್ಷಣೆಯನ್ನು ಒಡ್ಡುತ್ತಿವೆ. ದೊಡ್ಡವರು, ಮಕ್ಕಳು ಎನ್ನದಂತೆ ಎಲ್ಲರಿಗೂ ಮುದ ನೀಡುತ್ತಿವೆ.`ಪೆಂಟಗನ್ ಜತೆಗೆ ವಿವಿಧ ಬಗೆಯ ಕೇಕ್‌ಗಳು ಅನಾವರಣಗೊಂಡಿರುವ ಪ್ರದರ್ಶನದ ಸ್ಥಳ ಸುಮಾರು 10 ಸಾವಿರಕ್ಕೂ ಅಧಿಕ ಚದರ ಅಡಿಯಲ್ಲಿ ವ್ಯಾಪಿಸಿದೆ. ಈ ಎಲ್ಲ ಕೇಕುಗಳನ್ನು ತಯಾರಿಸಲು ತಗುಲಿದ ಸಮಯ 30 ಸಾವಿರ ಗಂಟೆ. ದಿನಕ್ಕೆ 12 ಗಂಟೆಯಂತೆ 40 ಜನ ಕೇಕ್ ಕಲಾವಿದರು 60 ದಿನ ಕೆಲಸ ಮಾಡಿ ಈ ಅದ್ಭುತವನ್ನು ಸೃಷ್ಟಿಸಿದ್ದಾರೆ' ಎನ್ನುತ್ತಾರೆ ಬ್ಲೂಹಿಲ್ ಗ್ರೂಪ್‌ನ ಅಧ್ಯಕ್ಷ ಹಾಗೂ ನೀಲಗಿರೀಸ್‌ನ ಮಾಜಿ ನಿರ್ದೇಶಕ ಸಿ.ರಾಮಚಂದ್ರನ್. ಅಂದಹಾಗೆ, ಈ ಹಿಂದೆ ನಡೆದ ನೀಲಗೀರಸ್ ಕೇಕ್ ಶೋನಲ್ಲಿ ವಿಧಾನ ಸೌಧ, ಬೆಂಗಳೂರು ಅರಮನೆ, ತಾಜ್‌ಮಹಲ್, ಬಂಕಿಂಗ್‌ಹ್ಯಾಂ ಅರಮನೆ, ಗೋಲ್ ಗುಂಬಜ್, ವೇಲಾಂಕಣಿ ಚರ್ಚ್, ಐಫೆಲ್ ಟವರ್, ಕ್ರೈಸ್ಟ್ ದಿ ರಿಡೀಮರ್, ಟೈಟಾನಿಕ್ ಹಡಗುಗಳನ್ನು ನಿರ್ಮಾಣ ಮಾಡಿ ಬೆಂಗಳೂರಿಗರ ಹುಬ್ಬೇರುವಂತೆ ಮಾಡಿದ್ದರು. ಈ ಬಾರಿಯ ಪೆಂಟಗನ್ ಎಲ್ಲ ಕೇಕ್ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಕೇಕ್‌ನಲ್ಲಿ ಮೈದಳೆದಿರುವ ಕಲಾಸಿರಿಯನ್ನು ಕಣ್ತುಂಬಿಕೊಳ್ಳುವ ಸರದಿ ಈಗ ನಿಮ್ಮದು.ಯುಬಿ ಸಿಟಿ ಎದುರಿನಲ್ಲಿರುವ ಸೆಂಟ್ ಜೋಸೆಫ್ ಪ್ರೌಢಶಾಲಾ ಮೈದಾನದಲ್ಲಿ ಡಿಸೆಂಬರ್ 30ರವರೆಗೆ ಕೇಕ್ ಶೋ ನಡೆಯಲಿದೆ. ಸಮಯ ಬೆಳಿಗ್ಗೆ 11ರಿಂದ 9.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry