ಕೇಕ್ ಕಲಸಿದ ತಾರೆಯರು

7

ಕೇಕ್ ಕಲಸಿದ ತಾರೆಯರು

Published:
Updated:

ಮಧ್ಯಾಹ್ನದ ಬಿಸಿಲಲ್ಲೂ ಅಲ್ಲಿ ಹಿತವಾದ ವಾತಾವರಣವಿತ್ತು. ಕ್ರಿಸ್‌ಮಸ್ ಹಬ್ಬ ಸಮೀಪಿಸುತ್ತಿದೆ ಎಂದೇ ಎಲ್ಲಕ್ಕೂ ವಿಶೇಷ ಮೆರುಗು ನೀಡಲಾಗಿತ್ತು. ಎಲ್ಲೆಲ್ಲೂ ಕೆಂಪು ಬಣ್ಣದಿಂದ ಅಲಂಕಾರ ಮಾಡಲಾಗಿತ್ತು. ಹ್ಯಾಪಿ ಕ್ರಿಸ್‌ಮಸ್ ಎನ್ನುತ್ತಾ ಸಾಂತಾಕ್ಲಾಸ್ ವೇಷಧಾರಿ ಮಹಿಳೆ ಶುಭಾಶಯ ಕೋರುತ್ತಾ ಎಲ್ಲರನ್ನೂ ಸ್ವಾಗತಿಸುತ್ತಿದ್ದಳು.ಸಾಂತಾಕ್ಲಾಸ್ ಉಡುಗೆ ತೊಟ್ಟು ಆಕೆ ಬಂದವರಿಗೆಲ್ಲಾ ಶುಭಾಶಯ ಕೋರುತ್ತಿದ್ದ ರೀತಿಯಿಂದಲೇ ಜನ ಸಂತಸಗೊಂಡಿದ್ದರು. ಹಾಲು ಬಿಳುಪು ಮೈಬಣ್ಣದ ಬೆಡಗಿಯ ಮೈಗಪ್ಪಿದ ಕೆಂಪು ರಂಗಿನ ಬಟ್ಟೆ, ಬಿಳಿಯ ಕೃತಕ ಕೂದಲು, ಅವಳ ಉಡುಗೊರೆ ತುಂಬಿದ ಕೆಂಪು ಕೈಚೀಲ ಎಲ್ಲವೂ ಅವಳತ್ತ ಎಲ್ಲರ ಕಣ್ಣು ಹರಿಯುವಂತೆ ಮಾಡಿತ್ತು.ಇಷ್ಟೆಲ್ಲಾ ದೃಶ್ಯಕ್ಕೆ ಸಾಕ್ಷಿಯಾಗಿದ್ದು ನಗರದ 1 ಎಂ.ಜಿ ರೋಡ್ ಮಾಲ್. ಕ್ರಿಸ್‌ಮಸ್ ಸಂಭ್ರಮಕ್ಕೆ ಮಾಲ್ ಸಜ್ಜಾಗಿದ್ದ ರೀತಿಯದು. ಆದರೆ ಕ್ರಿಸ್‌ಮಸ್ ಹಬ್ಬವೊಂದೇ ಸಂತಸಕ್ಕೆ ಕಾರಣವಾಗಿರಲಿಲ್ಲ. ಹಬ್ಬಕ್ಕೂ ಮೊದಲೇ ನಡೆಯುವ `ಕೇಕ್ ಮಿಕ್ಸಿಂಗ್' ನೋಡಲೆಂದೇ ಅಲ್ಲಿ ಜನ ಸೇರಿದ್ದರು.  ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಕೇಕ್‌ಮಿಕ್ಸಿಂಗ್ ಮಾಡುವುದು ಸಾಮಾನ್ಯ. ಅದರಲ್ಲೇನಿದೆ ವಿಶೇಷ ಎಂದುಕೊಳ್ಳುವವರಿಗೆ ತಾರೆಗಳು `ಕೇಕ್ ಮಿಕ್ಸಿಂಗ್' ಮಾಡಲಿದ್ದಾರೆ ಎಂಬ ಸುದ್ದಿ ಹೊಸತಾಗಿತ್ತು.ಕಾರ್ಯಕ್ರಮ ಆರಂಭವಾಗುವ ಮುನ್ನವೇ ವೇದಿಕೆ ಮೇಲೆ ದೊಡ್ಡ ಟ್ರೇನಲ್ಲಿ ವಿಧವಿಧವಾದ ಸಾಮಗ್ರಿಗಳನ್ನು ಶೆಫ್‌ಗಳು ಜೋಡಿಸಲು ಆರಂಭಿಸಿದ್ದರು. ಒಪ್ಪವಾಗಿ ಜೋಡಿಸುತ್ತಿದ್ದ ಒಣಹಣ್ಣುಗಳನ್ನು ನೋಡುತ್ತಿರುವಾಗಲೇ ಸಕ್ಕರೆಗೆ ಇರುವೆ ಮುತ್ತುವ ಹಾಗೆ ಜನ ಸೇರುತ್ತಿದ್ದರು.ಹಿತವಾದ ಹಿನ್ನೆಲೆ ಸಂಗೀತ ಆರಂಭವಾದಂತೆ ನಿಧಾನವಾಗಿ ತಾರೆಯರೂ ಬರಲಾರಂಭಿಸಿದರು. ನಟಿ ತಮನ್ನಾ ಪಾಷಾ, ರಫಿ ಪಾಷಾ, ನಟ ತರುಣ್ ಅರೋರಾ, ಧನ್ಯಾ, ಫ್ಯಾಷನ್ ಡಿಸೈನರ್ ನಮ್ರತಾ, ನಟಿ ಶಿರಿನ್ ಎಲ್ಲರೂ ಒಬ್ಬರಾದ ನಂತರ ಒಬ್ಬರು ನಗು ಸೂಸುತ್ತಾ ವೇದಿಕೆ ಮೇಲೆ ಬಂದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಕೇಕ್ ಮಿಕ್ಸಿಂಗ್‌ಗೆ ಅಣಿಯಾದರು.ಅಲಂಕರಿಸಿ ಜೋಡಿಸಿದ್ದ ಒಣಹಣ್ಣುಗಳ ಮೇಲೆ ಒಮ್ಮೆಲೇ ವೈನ್ ಸುರಿದು ಎಲ್ಲರೂ ಒಟ್ಟಿಗೆ ಕೂಗುತ್ತಾ ಕೈ ಹಾಕಿದರು. ಹಾಡುತ್ತಾ, ಕುಣಿಯುತ್ತಾ ಕೇಕ್ ಮಿಕ್ಸಿಂಗ್ ಮಾಡಿದ ರೀತಿಗೆ ಎಲ್ಲರ ಕಡೆಯಿಂದಲೂ ಚಪ್ಪಾಳೆ.ಹತ್ತು ನಿಮಿಷ ನಿರಂತರವಾಗಿ ಕೇಕ್‌ಮಿಕ್ಸಿಂಗ್‌ನಲ್ಲಿ ತೊಡಗಿದ್ದ ನಟ ನಟಿಯರ ಫೋಟೊಗೆಂದೂ ಜನ ಮುಗಿಬಿದ್ದರು. ಕೈಗಂಟಿದ ಮಿಶ್ರಣದಲ್ಲಿಯೇ ಹ್ಯಾಪಿ ಕ್ರಿಸ್‌ಮಸ್, ಮೇರಿ ಕ್ರಿಸ್‌ಮಸ್ ಎನ್ನುತ್ತಾ ಎಲ್ಲರತ್ತ ಕೈ ಬೀಸಿ ಶುಭಾಶಯ ಕೋರುತ್ತಿದ್ದ ನಟಿಯರನ್ನು ಅಭಿಮಾನಿಗಳು ಖುಷಿಯಿಂದ ಕಣ್ತುಂಬಿಸಿಕೊಳ್ಳುತ್ತಿದ್ದರು. ಬಟ್ಟೆಗೆ ಅಂಟಿದ ಕೇಕ್ ಮಿಶ್ರಣವನ್ನು ಒರೆಸಿಕೊಳ್ಳುತ್ತಲೇ ನಟಿ ಶಿರಿನ್ ಫೋಟೊಗೆ ಪೋಸ್ ನೀಡಲು ಸಜ್ಜಾಗುತ್ತಿದ್ದರು. ಸಾಂತಾಕ್ಲಾಸ್ ಜೊತೆಗೆ ವಿವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದ ತಾರೆಗಳನ್ನೇ ನೋಡುತ್ತಾ ನಿಂತಿದ್ದ ಜನರಿಗೆ ಕೇಕ್ ಮಿಕ್ಸಿಂಗ್ ವಿಭಿನ್ನ ಅನುಭವ ನೀಡಿತ್ತು.ಇಷ್ಟೆಲ್ಲಾ ಖುಷಿ ಹಂಚಿಕೊಂಡ ನಟ ನಟಿಯರು ಹೊರಟಿದ್ದೇ ತಡ, ಜನರೂ ಚದುರಲು ಆರಂಭಿಸಿದರು. ಸಾಂತಾಕ್ಲಾಸ್ ವೇಷಧಾರಿ ಮಹಿಳೆ ತನ್ನ ಪುಟ್ಟ ಚೀಲದಿಂದ ಎಲ್ಲರಿಗೂ ಚಾಕೊಲೇಟ್‌ನೊಂದಿಗೆ ನಗು ಹಂಚುತ್ತಾ ನಿಂತಿದ್ದಳು. ಚಿಕ್ಕ ಮಕ್ಕಳೆಲ್ಲಾ ಖುಷಿಯಿಂದ ಚಾಕೊಲೇಟ್ ತಿಂದು ಸಾಂತಾಕ್ಲಾಸ್ ವೇಷಧಾರಿಯನ್ನು ಮುಟ್ಟಿ ನೋಡುತ್ತಾ ಸಂತಸ ಪಡುತ್ತಿದ್ದರು. ಇನ್ನು ಕೇಕ್ ರುಚಿ ನೋಡಲು ಆಗುವುದೋ ಇಲ್ಲವೋ, ಚಾಕೊಲೇಟ್ ಸಿಹಿ ನೋಡೋಣ ಎನ್ನುತ್ತಾ ಎಲ್ಲರೂ ಬಾಯಿ ಸಿಹಿ ಮಾಡಿಕೊಂಡು ಹೊರಡಲು ಅಣಿಯಾದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry