ಸೋಮವಾರ, ಜೂನ್ 14, 2021
27 °C
ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ‘ಆಪ್‌’ನ ಹೊಸ ಕಾರ್ಯತಂತ್ರ

ಕೇಜ್ರಿವಾಲ್‌ ಜತೆ ಊಟಕ್ಕೆ ರೂ 20 ಸಾವಿರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಕ್ಷಕ್ಕೆ ದೇಣಿಗೆ  ಸಂಗ್ರಹಿಸಲು ಆಮ್‌ ಆದ್ಮಿ ಪಕ್ಷ ಈಗ ಹೊಸ ತಂತ್ರ ಕಂಡು­ಕೊಂಡಿದೆ.ದೆಹಲಿ ಮಾಜಿ ಮುಖ್ಯ ಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ  ಮುಖ್ಯಸ್ಥ ಅರವಿಂದ್‌  ಕೇಜ್ರಿವಾಲ್‌ ಅವರ ಜತೆ ಭೋಜನ ಸವಿಯುವ ಅವ­ಕಾಶವನ್ನು ಕಲ್ಪಿಸಿದೆ. ಆದರೆ, ಇದೊಂದು ದುಬಾರಿ ಭೋಜ­ನ­ಕೂಟ. ಆಹ್ವಾನಿತರಿಗೆ ಮಾತ್ರ ಸೀಮಿತ-­ವಾಗ­ಲಿರುವ ಈ ಭೋಜನಕೂಟದಲ್ಲಿ ರೂ. 20 ಸಾವಿರ ದೇಣಿಗೆ ಕೊಟ್ಟವರಿಗೆ ಮಾತ್ರ ಅವಕಾಶ.ದೇಶದಲ್ಲೇ ಪ್ರಥಮ ಬಾರಿ ಇಂಥ ರೀತಿಯ ಪ್ರಯೋಗ ಕೈಗೊಳ್ಳಲಾಗಿದೆ ಎನ್ನುತ್ತಾರೆ ಎಎಪಿ ಮುಖಂಡರೊಬ್ಬರು.

ಇದೇ 15ರಂದು  ಕೇಜ್ರಿವಾಲ್‌ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಂದು ರಾತ್ರಿ ನಡೆಯುವ ಭೋಜ­­ನಕೂಟದಲ್ಲಿ ಪಾಲ್ಗೊಳ್ಳುವಂತೆ ಉದ್ದಿಮೆ­ದಾರರು, ಖಾಸಗಿ ಕಂಪೆನಿಗಳಲ್ಲಿರುವ ಪ್ರಮುಖರು ಮತ್ತು ಪಕ್ಷದ ಬೆಳವಣಿಗೆಗೆ ಸಹಕರಿಸಲು ಆಸಕ್ತಿ ಇರುವವರನ್ನು ಆಹ್ವಾನಿಸುವ ಮೂಲಕ ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ.ಇತ್ತೀಚೆಗೆ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆ­ಯಾಗಿ­ರುವ ಇನ್ಫೋಸಿಸ್‌ ಆಡಳಿತ ಮಂಡಳಿಯ ಮಾಜಿ ಸದಸ್ಯ ವಿ. ಬಾಲಕೃಷ್ಣನ್ ಅವರು ಈ  ಪ್ರಯೋಗವನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವ ಜವಾಬ್ದಾರಿ ವಹಿಸಿಕೊಂಡಿರುವ ಬಾಲಕೃಷ್ಣ ಅವರು, ಭೋಜನ­ಕೂಟದಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ಹಲವರಿಗೆ ಆಹ್ವಾನ  ನೀಡಿದ್ದಾರೆ.‌200ರಿಂದ 300 ಜನರು ಈ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಕೇವಲ ಭೋಜ­ನಕ್ಕೆ ಮಾತ್ರ ಸೀಮಿತವಾಗಿಲ್ಲ. ಕೇಜ್ರಿವಾಲ್‌ ಜತೆ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ. ಸುಮಾರು ಒಂದು ಗಂಟೆ ಕಾಲ ಕೇಜ್ರಿವಾಲ್‌ ಜತೆ ಸಂವಾದ ನಡೆ­ಯ­ಲಿದೆ. ಭೋಜನ ಕೂಟಕ್ಕೆ ಇನ್ನೂ ಸ್ಥಳ ನಿಗದಿ

­ಪಡಿ­ಸಿಲ್ಲ. ಪಾಲ್ಗೊಳ್ಳುವವರ ಸಂಖ್ಯೆಯ ಆಧಾರದ ಮೇಲೆ ಸ್ಥಳ ನಿಗದಿಪಡಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.‘ನಾವು ಪಾರದರ್ಶಕವಾಗಿಯೇ ಹಣ ಸಂಗ್ರಹಿಸು­ತ್ತಿದ್ದೇವೆ. ಚುನಾವಣೆ ವೆಚ್ಚ ಹೆಚ್ಚಿರುವುದರಿಂದ ಸಂಪ-­ನ್ಮೂಲ ಸಂಗ್ರಹ ಅನಿವಾರ್ಯ. ಸ್ವಯಂ ಪ್ರೇರಿತ­ರಾಗಿ ಹಣ ನೀಡಲು ಇಚ್ಛಿಸುವವರಿಗೆ ನಾವು ಒಂದು ವೇದಿಕೆ ಕಲ್ಪಿಸಿದ್ದೇವೆ. ಸಮಾಜದಲ್ಲಿ ಪ್ರಾಮಾಣಿಕ­ವಾಗಿ, ನ್ಯಾಯ­ಯುತವಾಗಿ ದುಡಿಯುವವರಿಂದ ಪಕ್ಷಕ್ಕೆ ಹಣ ಸಂಗ್ರಹಿಸಲಾಗುತ್ತಿದೆ’ ಎಂದು ಪಕ್ಷದ ವಕ್ತಾರ ಮಹಾಂತೇಶ್‌ ತಿಳಿಸಿದರು.ಭೋಜನಕೂಟಗಳ ಮೂಲಕ ಹಣ ಸಂಗ್ರಹಿಸುವ ವ್ಯವಸ್ಥೆ ವಿದೇಶಗಳಲ್ಲಿ ಹೆಚ್ಚು ಜಾರಿಯಲ್ಲಿದೆ. ದೇಶ­ದಲ್ಲಿ ಇದು ಹೊಸ ಪ್ರಯೋಗ. ಪಕ್ಷದ ನಿರೀಕ್ಷೆಯಂತೆ ನಡೆದರೆ ಬೆಂಗಳೂರಿನಲ್ಲಿ ಕನಿಷ್ಠ ರೂ. 40ರಿಂದ 50 ಲಕ್ಷ  ಸಂಗ್ರಹವಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈ ಪ್ರಯೋಗ ಯಶಸ್ವಿಯಾದರೆ ಉಳಿದ ರಾಜ್ಯಗಳಲ್ಲೂ ಇದೇ ಪ್ರಯೋಗವನ್ನು ಕೈಗೊಳ್ಳುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಭೋಜನ ಶುಲ್ಕಕ್ಕೆ ಅಪಸ್ವರ

‘ಆಮ್‌ ಆದ್ಮಿ ಪಕ್ಷ ಭೋಜನಕೂಟ ಆಯೋಜಿ­ಸಿಲ್ಲ. ಬೆಂಗಳೂರಿನಲ್ಲಿರುವ ಪಕ್ಷದ ಸ್ನೇಹಿತರು ಭೋಜ­ನಕೂಟ ಆಯೋಜಿಸಿದ್ದಾರೆ’ ಎಂದು ಪಕ್ಷದ ಖಜಾಂಚಿ ಕೆ.ಎನ್‌. ಚಂದ್ರಕಾಂತ್‌ ಸ್ಪಷ್ಟಪಡಿಸಿದ್ದಾರೆ.‘ನಾವು ಎಲ್ಲ ಕಡೆ, ಎಲ್ಲರಲ್ಲೂ ಪಕ್ಷಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದೇವೆ. ದೇಣಿಗೆಯನ್ನು ಪಾರದರ್ಶಕವಾಗಿ ಪಡೆಯುತ್ತಿದ್ದೇವೆ. ಆದರೆ, ಟಿಕೆ­ಟ್‌­ಗಳನ್ನು ಮಾರಾಟ ಮಾಡಿ ಭೋಜನಕೂಟ ಆಯೋ­ಜಿಸುವಂತಹ ಪರಿಸ್ಥಿತಿ ಪ.ಕ್ಷಕ್ಕೆ ಬಂದಿಲ್ಲ. ಅಂತಹ ಪರಿಸ್ಥಿತಿ ಅಥವಾ ಸನ್ನಿವೇಶ ಉಂಟಾದರೆ ಪಕ್ಷಕ್ಕೆ ನಾವೇ ಗುಡ್‌ಬೈ ಹೇಳುತ್ತೇವೆ’ ಎಂದರು.‘ಎಲ್ಲರನ್ನು ಕೇಳುವಂತೆ ಭೋಜನಕೂಟದಲ್ಲಿ ಪಾಲ್ಗೊ­ಳ್ಳುವವರಲ್ಲೂ ದೇಣಿಗೆ ಕೊಡಿ ಎಂದು ಮನವಿ ಮಾಡುತ್ತೇವೆ. ಆದರೆ, ಕೆಲವರು ಇದು ವ್ಯಾಪಾರ ಎನ್ನುವಂತೆ ಅಪಪ್ರಚಾರ ಮಾಡುತ್ತಿ­ದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.