ಕೇಜ್ರಿವಾಲ್ ಅಭ್ಯರ್ಥಿಗಳ ಪರ ಪ್ರಚಾರ: ಅಣ್ಣಾ ಹಜಾರೆ

7

ಕೇಜ್ರಿವಾಲ್ ಅಭ್ಯರ್ಥಿಗಳ ಪರ ಪ್ರಚಾರ: ಅಣ್ಣಾ ಹಜಾರೆ

Published:
Updated:
ಕೇಜ್ರಿವಾಲ್ ಅಭ್ಯರ್ಥಿಗಳ ಪರ ಪ್ರಚಾರ: ಅಣ್ಣಾ ಹಜಾರೆ

ಭುವನೇಶ್ವರ (ಐಎಎನ್ಎಸ್): ಅರವಿಂದ ಕೇಜ್ರಿವಾಲ್ ಅವರು ಕಣಕ್ಕಿಳಿಸುವ ಅಭ್ಯರ್ಥಿಗಳ ಪರವಾಗಿ ಮಾತ್ರವೇ ತಾವು ಪ್ರಚಾರ ಮಾಡುವುದಾಗಿ ಶನಿವಾರ ಇಲ್ಲಿ ಸ್ಪಷ್ಟ ಪಡಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಇತರ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸುವ ಸಾಧ್ಯತೆಗಳನ್ನು ತಳ್ಳಿಹಾಕಿದರು.

'ನಾನು ಕೇಜ್ರಿವಾಲ್ ಅವರ ಅಭ್ಯರ್ಥಿಗಳ ಪರವಾಗಿ ಮಾತ್ರವೇ ಪ್ರಚಾರ ಮಾಡುವೆ' ಎಂದು ಹಜಾರೆ ಇಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. 'ಇತರ ಪಕ್ಷಗಳಲ್ಲಿಯೂ ಒಳ್ಳೆಯವರು ಇರಬಹುದು. ಆದರೆ ನಿಯಂತ್ರಣ ಯಾರ ಕೈಯಲ್ಲಿದೆ?' ಎಂದು ಪ್ರಶ್ನಿಸಿದ 75ರ ಹರೆಯದ ನಾಯಕ, 'ರಾಜಕೀಯ ಪಕ್ಷಗಳು ಜಾತಿ ಮತ್ತು ಸಮುದಾಯಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ. ಅಕ್ರಮ ಮಾರ್ಗಗಳಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿವೆ' ಎಂದು ಟೀಕಿಸಿದರು.

ಇತರ ಪಕ್ಷಗಳು ಸ್ಥಾಪಿತ ಹಿತಾಸಕ್ತಿಗಳು ಮತ್ತು ಕಂಪೆನಿಗಳಿಂದ ಭಾರಿ ಮೊತ್ತದ ದೇಣಿಗೆ ಸಂಗ್ರಹಿಸಿವೆ. ಆದರೆ ದಾನಿಗಳು ಗುರುತು ಮರೆ ಮಾಚಲು ಈ ಮೊತ್ತವನ್ನು ತಲಾ 20,000 ರೂಪಾಯಿಗಳಿಗಿಂತ ಕಡಿಮೆ ಮೊತ್ತದ ದೇಣಿಗೆಯಾಗಿ ಒಡೆದಿವೆ ಎಂದು ಅಣ್ಣಾ ಹೇಳಿದರು.

ರಾಜಕೀಯ ಪಕ್ಷಗಳು ವ್ಯಕ್ತಿ ನಿಯಂತ್ರಣಕ್ಕೆ ಒಳಪಟ್ಟಿವೆ ಎಂಬುದಾಗಿಯೂ ಹಜಾರೆ ದೂರಿದರು. 'ನನಗೆ ಕೇಜ್ರಿವಾಲ್ ಗೊತ್ತು. ಕೇಜ್ರಿವಾಲ್ ತನಗೋಸ್ಕರ ಏನನ್ನೂ ಮಾಡಿಲ್ಲ. ರಾಷ್ಟ್ರಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.

ಏನಿದ್ದರೂ ಅಭ್ಯರ್ಥಿಗಳನ್ನು ಪರಿಶೀಲಿಸುವುದಾಗಿ ಹೇಳಿದ ಅಣ್ಣಾ 'ಯೋಗ್ಯರನ್ನು ಮಾತ್ರವೇ ಬೆಂಬಲಿಸುವೆ' ಎಂದು ನುಡಿದರು.

'ನಾನು ಅವರನ್ನು ಪರಿಶೀಲಿಸುವೆ. ಒಳ್ಳೆಯವರು ಮತ್ತು ಯೋಗ್ಯ ಅಭ್ಯರ್ಥಿಗಳು ಎಂಬುದು ಕಂಡು ಬಂದರೆ ಅಂತಹ ಅಭ್ಯರ್ಥಿಗಳಿಗಾಗಿ ಪ್ರಚಾರ ಮಾಡುವೆ' ಎಂದು ಅವರು ಹೇಳಿದರು.

ಒಡಿಶಾಕ್ಕೆ ಗುರುವಾರದಿಂದ ಮೂರು ದಿನಗಳ ಭೇಟಿ ನೀಡುತ್ತಿರುವ ಭ್ರಷ್ಟಾಚಾರ ವಿರುದ್ಧ ಭಾರತ ಸ್ಥಾಪಕ ಹಜಾರೆ ವಿದ್ಯಾರ್ಥಿಗಳು, ರೈತರು ಮತ್ತು ಇತರರನ್ನು ಉದ್ದೇಶಿಸಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry