ಶನಿವಾರ, ಮೇ 28, 2022
26 °C

ಕೇದಾರನಾಥಕ್ಕೆ ಹೊಸ ಮಾರ್ಗ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಹಠಾತ್ ಪ್ರವಾಹದಿಂದ ತತ್ತರಿಸಿರುವ ಕೇದಾರನಾಥ ಕಣಿವೆಗೆ ಸುಮಾರು 20 ಕಿ.ಮೀ. ಹೊಸ ಮಾರ್ಗ ನಿರ್ಮಿಸುವ ಕಾರ್ಯವನ್ನು ಇಲ್ಲಿ ನೆಲೆ ನಿಂತಿರುವ ಸೇನೆಯ ಕೇಂದ್ರ ಕಮಾಂಡ್ ತಂಡ ಆರಂಭಿಸಿದೆ.ಪ್ರತಿಕೂಲ ಹವಾಮಾನವು ವೈಮಾನಿಕ ಪರಿಹಾರ ಕಾರ್ಯಗಳಿಗೆ ತೀವ್ರ ಅಡ್ಡಿಯಾಗಿದೆ. ಅಲ್ಲದೆ ಹವಾಮಾನ ಇಲಾಖೆಯು ಇನ್ನೂ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ನೀಡಿರುವುದರಿಂದ 8ನೇ ಶತಮಾನದ ಕೇದಾರನಾಥ ದೇಗುಲಕ್ಕೆ ತೆರಳಲು `ಹೊಸ ಮಾರ್ಗ ನಿರ್ಮಾಣವೊಂದೇ ಉಳಿದಿರುವ ದಾರಿ' ಎಂದು ಗುರುವಾರ ಸೇನೆ ಪ್ರಕಟಣೆ ತಿಳಿಸಿದೆ. ಉತ್ತರಾಖಂಡ ಆಡಳಿತ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಮನವಿ ಮೇರೆಗೆ ಇಲ್ಲಿರುವ ಸೇನಾ ಸೂರ್ಯ ಕಮಾಂಡ್ ತಂಡವು ಭೂಮಾರ್ಗದ ಸ್ಥಳಾನ್ವೇಷಣೆ ಮತ್ತು ನಿರ್ಮಾಣ ಕಾರ್ಯವನ್ನು ಬದಿಯಲ್ಲಿ ಸಾಲುಕಂಬಿಗಳನ್ನು ಅಳವಡಿಸಿ ಮಾಡುತ್ತಿದೆ ಎಂದು ಅದು ಹೇಳಿದೆ.ಸೇನೆಯ ಮೊದಲ ತಂಡ ಬುಧವಾರ ಸೋನ್‌ಪ್ರಯಾಗ್‌ನಲ್ಲಿ ವಾಸುಕಿ ಗಂಗಾವನ್ನು ದಾಟಿದೆ. 21 ಜನರ ಈ ತಂಡವು ನದಿಯನ್ನು ದಾಟಿ, ಗೋಂಕಾರವನ್ನು ತಲುಪಿದ್ದು, ಅಲ್ಲೇ ಬಿಡಾರ ಹೂಡಿದೆ. ಇನ್ನೊಂದು ತಂಡವು ವ್ಯವಸ್ಥಾಪನ ತಂತ್ರದೊಂದಿಗೆ ಗುರುವಾರ ಸೋನ್‌ಪ್ರಯಾಗ್‌ನಲ್ಲಿ ನದಿ ದಾಟಿ, ಮೊದಲನೇ ತಂಡ ನಿರ್ಮಿಸಿದ ಮಾರ್ಗದಲ್ಲಿ ಸಾಗುತ್ತಿದೆ. ಮುಂದೆ ಸಾಗಿದ ಮೊದಲ ತಂಡವು ದೇವಿ ವಿಷ್ಣುವನ್ನು ದಾಟಿ, ಕೇದಾರನಾಥಕ್ಕೆ ಮಾರ್ಗವನ್ನು ನಿರ್ಮಿಸಿದ ನಂತರ ಕೇದಾರನಾಥದತ್ತ ಪ್ರಯಾಣ ಬೆಳೆಸಲಿದೆ.ಹೊಸ ಮಾರ್ಗ ಸೋನ್‌ಪ್ರಯಾಗ್- ಗೋಂಕಾರ-ದೇವಿ ವಿಷ್ಣು- ಧುಂಗಾಜ್ ಗಿರಿ- ಕೇದಾರನಾಥ ಮೂಲಕ ಸುಮಾರು 13 ಸಾವಿರ ಅಡಿ ಎತ್ತರದಲ್ಲಿ 20 ಕಿ.ಮೀ. ದೂರ ಸಾಗಲಿದೆ. ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ಹೆಲಿಕಾಪ್ಟರ್ ಹಾರಾಟ ಮತ್ತು ಪರಿಹಾರ ಕಾರ್ಯಕ್ಕೆ ಅಡಚಣೆಯಾಗಿದೆ.ಜೂನ್ 16-17ರಂದು ಸಂಭವಿಸಿದ ಮೇಘಸ್ಫೋಟ, ಮಹಾಮಳೆ ಮತ್ತು ಹಠಾತ್ ಪ್ರವಾಹದಿಂದ ಭೂಮಾರ್ಗ ಸಂಪೂರ್ಣ ಹಾನಿಗೊಂಡು, ಕೇದಾರನಾಥ ದೇಗುಲಕ್ಕೆ ಸಂಪರ್ಕ ಕಡಿದುಹೋಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.