ಕೇದಾರನಾಥ ದೇವಸ್ಥಾನ: ಪೂಜೆ ಪುನರಾರಂಭ

7
ಸದ್ಯ ಭಕ್ತರಿಗೆ ಅವಕಾಶವಿಲ್ಲ, 86 ದಿನಗಳು ಮುಚ್ಚಿದ್ದ ಬಾಗಿಲು

ಕೇದಾರನಾಥ ದೇವಸ್ಥಾನ: ಪೂಜೆ ಪುನರಾರಂಭ

Published:
Updated:

ಕೇದಾರನಾಥ (ಪಿಟಿಐ): ಭೀಕರ ಪ್ರವಾಹ ಅಪ್ಪಳಿಸಿದ 86 ದಿನಗಳ ನಂತರ ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥದಲ್ಲಿ ಬುಧವಾರ ವೇದಘೋಷಗಳು ಮೊಳಗಿದವು. ಇದರೊಂದಿಗೆ ದೇವಾಲಯದಲ್ಲಿ ಪೂಜಾ ಕಾರ್ಯ ಪುನರಾರಂಭವಾಯಿತು.



  8ನೇ ಶತಮಾನದ ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ಕೈಗೊಳ್ಳಲು ಪ್ರಧಾನ ಅರ್ಚಕ ರಾವಲ್‌ ಭೀಮಾ ಶಂಕರಲಿಂಗ ಶಿವಾಚಾರ್ಯ ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ದೇವಸ್ಥಾನದ ಬಾಗಿಲು ತೆರೆದರು.



‘ಶುದ್ಧೀಕರಣ’ ಮತ್ತು ‘ಪ್ರಾಯಶ್ಚಿತ್ತೀಕರಣ’ ದೊಂದಿಗೆ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡಿತು.



ಮುಖ್ಯಮಂತ್ರಿ ವಿಜಯ ಬಹುಗುಣ ಅವರು ಸಚಿವರೊಡಗೂಡಿ ದೇವಸ್ಥಾನಕ್ಕೆ ಬರಬೇಕಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಅವರು ದೇವಸ್ಥಾನ ತಲುಪಲು ಸಾಧ್ಯವಾಗಲಿಲ್ಲ.



ದೇವಸ್ಥಾನದ ಪುನರಾರಂಭ ಕಾರ್ಯಕ್ರಮದ ಸುದ್ದಿ ಸಂಗ್ರಹಿಸಲು ಮಾಧ್ಯಮ ಪ್ರತಿನಿಧಿಗಳು ಕೇದಾರನಾಥಕ್ಕೆ ಹೊರಟಿದ್ದರು. ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಎಲ್ಲರೂ ಗುಪ್ತಕಾಶಿಯಲ್ಲೇ ಉಳಿದುಕೊಳ್ಳಬೇಕಾಯಿತು.

ಹಿಮಾಲಯದ ಶೃಂಗದಲ್ಲಿ ಸುಮಾರು 13.500 ಅಡಿ ಎತ್ತರದಲ್ಲಿರುವ ದೇವಸ್ಥಾನಕ್ಕೆ ಸದ್ಯ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.



ಚಾರ್‌ಧಾಮ್‌ ಯಾತ್ರೆ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಇದೇ 30ರಂದು ಸಭೆ ನಡೆಯಲಿದೆ.

ಜೂನ್‌ನಲ್ಲಿ ಹಿಮಾಲಯದ ಶೃಂಗದಲ್ಲಿ ಅಪ್ಪಳಿಸಿದ ಪ್ರವಾಹದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು.



ದುರಂತ ಕಥೆ ಸಾರುವ ಭಗ್ನಾವಶೇಷಗಳು: ದೇವಸ್ಥಾನ ಪುನರಾರಂಭದೊಂದಿಗೆ  ಕೇದಾರನಾಥ ಜೀವಂತಿಕೆ ಪಡೆದುಕೊಂಡರೆ ದೇವಸ್ಥಾನದಿಂದ ಐದೇ ಮೀಟರ್‌ ದೂರದಲ್ಲಿ ಒಡೆದ ಬಾಗಿಲುಗಳು, ಬಿರುಕು ಬಿಟ್ಟಿರುವ ಗೋಡೆಗಳು ಜೂನ್‌ನಲ್ಲಿ ನಡೆದ ಪ್ರಕೃತಿ ವಿಕೋಪದ ದುರಂತದ ಕಥೆ ಹೇಳುತ್ತಿವೆ.



ದೇವಸ್ಥಾನದ ಸಮೀಪ ಭಗ್ನಾವಶೇಷಗಳು ಇವೆ. ಈ ಭಗ್ನಾವಶೇಷಗಳಡಿ ಮೃತದೇಹಗಳು ಸಿಲುಕಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ದೇವಸ್ಥಾನ ಧಕ್ಕೆಯಾಗುವುದನ್ನು ತಡೆದ ದೊಡ್ಡದೊಡ್ಡ ಬಂಡೆಗಳಿಗೆ ಅರ್ಚಕರ ಒಂದು ತಂಡ ಬುಧವಾರ ಪೂಜೆ ಸಲ್ಲಿಸಿತು.



‘ದೇವಸ್ಥಾನದ ಸುತ್ತಮುತ್ತಲ ಗ್ರಾಮಗಳ ಯಾತ್ರಾರ್ಥಿಗಳಿಗಾಗಿ ರಸ್ತೆಗಳನ್ನು ತೆರೆಯಲಾಗಿದೆ’ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ದಿಲೀಪ್‌ ಜವಲ್ಕರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry