ಮಂಗಳವಾರ, ಏಪ್ರಿಲ್ 13, 2021
31 °C

ಕೇದಾರೇಶ್ವರ ದೇಗುಲಕ್ಕೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ/ ಎಚ್.ಎಸ್.ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

ಹಳೇಬೀಡು: ದ್ವಾರಸಮುದ್ರ ಕೆರೆ ತೀರದಲ್ಲಿ ಸುಂದರ ಪರಿಸರದಲ್ಲಿರುವ ಕೇದಾರೇಶ್ವರ ದೇವಾಲಯ ಸೌಲಭ್ಯಗಳಿಂದ ವಂಚಿತವಾಗಿದ್ದರೂ ಇಲ್ಲಿನ ವಿಗ್ರಹ ಗಳಿಗೆ ರಾಸಾಯನಿಕ ಶುದ್ಧಿಯ ಭಾಗ್ಯ ಒದಗಿ ಬಂದಿದೆ.900 ವರ್ಷ ಹಳೆಯದಾದ ದೇವಾಲಯದಲ್ಲಿ ಬಿಸಿಲು ಮಳೆಗೆ ವಿಗ್ರಹಗಳು ಕಳೆಗುಂದುತ್ತಿದ್ದವು. ಈಗ ರಾಸಾಯನಿಕ ಶುದ್ಧತೆಯಿಂದ ವಿಗ್ರಹಗಳಿಗೆ ರಕ್ಷಣೆ ನೀಡಿದಂತಾಗಿದೆ. ಮೃದು ಬಳಪದ ಕಲ್ಲಿನ ವಿಗ್ರಹಗಳು ಹತ್ತಾರು ವರ್ಷ ಸವೆಯದೆ ಕ್ರೀಮಿ ಕೀಟಗಳ ಉಪಟಳಕ್ಕೆ ಬಲಿಯಾಗದೆ ಹೆಚ್ಚು ಬಾಳಿಕೆ ಬರುತ್ತವೆ ಎನ್ನುತ್ತಾರೆ ಪುರಾತತ್ವ ಅಧಿಕಾರಿಗಳು.ಕಲಾತ್ಮಕ ದೇವಾಲಯ: ಪ್ರಾಚೀನ ಕಾಲದ ದೇವಾಲ ಯವನ್ನು ಹೊಯ್ಸಳ ದೊರೆ 2ನೇ ವೀರಬಲ್ಲಾಳ ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ. ಮೂರು ಗರ್ಭಗುಡಿಯ ತ್ರಿಕೋನಕಾರದ ದೇವಾಲಯ ರಾಜರ ಕಾಲದಲ್ಲೇ ಶತ್ರುಗಳ ದಾಳಿಯಿಂದ ನಲುಗಿತ್ತು.

 

ಗರ್ಭಗುಡಿಯ ಮೂಲ ವಿಗ್ರಹಗಳು ಅಂದಿನ ಕಾಲದಲ್ಲಿಯೇ ಕಣ್ಮರೆಯಾಗಿರುವುದರಿಂದ ದೇವಾಲ ಯದಲ್ಲಿ ಪೂಜೆ ಇಲ್ಲ. ಆದರೆ, ಪುರಾಣ ಪುಣ್ಯಕಥೆ ಗಳನ್ನು ತಿಳಿಸುವ ಕಲಾತ್ಮಕವಾದ ವಿಗ್ರಹಗಳು ಹಾಗೂ ನಯವಾದ ಕುಸುರಿ ಕೆತ್ತನೆ ಕೆಲಸದಿಂದ ದೇವಾಲಯ ನಾಜೂಕಾಗಿದೆ. ಇಲಾಖೆ ದೇವಾಲಯದ ಸುತ್ತ ಉದ್ಯಾನವನವನ್ನು ಸಹ ನಿರ್ಮಿಸಿ ಸೊಬಗನ್ನು ಹೆಚ್ಚಿಸಿದೆ. ಆದರೆ ಪ್ರವಾಸಿಗರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಇಲಾಖೆ ಕಲ್ಪಿಸಿಲ್ಲ.ಕನಿಷ್ಠ ಸೌಲಭ್ಯ ಇಲ್ಲ: ಕೇದಾರೇಶ್ವರ ದೇವಾಲಯಕ್ಕೆ ಆಗಮಿಸಿದವರಿಗೆ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಉದ್ಯಾನವನ ವಿಭಾಗ ಗಿಡಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಮಾತ್ರ ಕುಡಿಯಲು ನೀರು ದೊರಕುತ್ತದೆ. ಶೌಚಾಲಯಕ್ಕಾಗಿ ಒಂದು ಕಿ.ಮೀ. ಬಸ್ ನಿಲ್ದಾಣಕ್ಕೆ ಪ್ರವಾಸಿಗರು ಎಡತಾಕುವಂತಾಗಿದೆ. ಪ್ರಚಾರದ ಕೊರತೆ ಹಾಗೂ ದಾರಿ ತೋರಿಸುವ ಫಲಕಗಳಿಲ್ಲದೆ, ದೇವಾಲಯ ಸುಂದರವಾಗಿದ್ದರೂ ಮೂಲೆ ಗುಂಪಾಗಿದೆ. ಪ್ರವಾಸಿಗರ ವಾಹನ ನಿಲುಗಡೆಗೆ ಸ್ಥಳ ಇಲ್ಲ. ದೊಡ್ಡ ವಾಹನ ಬಂದರೆ ಹಿಂದುರುಗಿ ಹೋಗುವುದು ಅಷ್ಟೇನು ಸುಲಭವಾಗಿಲ್ಲ.ಕಾರ್ಯಗತವಾಗದ ಯೋಜನೆ: ದೇವಾಲಯದ ಮುಂಭಾಗದ ಜಮೀನು ಖರೀದಿಸಿ ಅಲ್ಲಿ ಮ್ಯೂಸಿಯಂ ನಿರ್ಮಿಸಿ, ಹೊಯ್ಸಳೇಶ್ವರ, ಕೇದಾರೇಶ್ವರ ಹಾಗೂ ಜೈನ ಬಸದಿಗಳನ್ನು ಒಂದೇ ಸಂಕಿರ್ಣದಲ್ಲಿ ವೀಕ್ಷಣೆ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿದೆ.`ಕೆಮಿಕಲ್ ಶಾಖೆ ಕೇಂದ್ರ ಪುರಾತತ್ವ ಇಲಾಖೆಯ ಪ್ರತ್ಯೇಕ ವಿಭಾಗ, ಬೇರೆಯವರಿಗೆ ಗುತ್ತಿಗೆ ನೀಡಿದೆ ಹಂತಹಂತವಾಗಿ ಇಲಾಖೆಯ ದೇವಾಲಯಗಳನ್ನು ರಾಸಾಯಿನಿಕ ಶುದ್ಧತೆ ಮಾಡಲಾಗುವುದು ಎನ್ನುತ್ತಾರೆ ರಾಸಾಯಿನಿಕ ವಿಭಾಗ ಉಪ ಅಧೀಕ್ಷಕ ಚೌದರಿ.ಕೇದಾರೇಶ್ವರ ದೇವಾಲಯ ಮಾತ್ರವಲ್ಲದೆ ಇಲಾಖೆ ಆಡಳಿತಕ್ಕೆ ಒಳಪಟ್ಟ ಎಲ್ಲ ಸ್ಮಾರಕಗಳ ಬಳಿ ಕೇಂದ್ರ ಪುರಾತತ್ವ ಇಲಾಖೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯ ಕಲ್ಪಿಸಬೇಕು.ಪ್ರವಾಸೋದ್ಯಮ ಇಲಾಖೆ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಆರ್.ಲಿಂಗಪ್ಪ ಪ್ರೇಮಣ್ಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.