ಕೇದಾರೇಶ್ವರ ಪೂಜೆ: ಹಸ್ತಕ್ಷೇಪಕ್ಕೆ ರಂಭಾಪುರಿ ಶ್ರೀ ಆಕ್ಷೇಪ

ಬುಧವಾರ, ಜೂಲೈ 24, 2019
28 °C

ಕೇದಾರೇಶ್ವರ ಪೂಜೆ: ಹಸ್ತಕ್ಷೇಪಕ್ಕೆ ರಂಭಾಪುರಿ ಶ್ರೀ ಆಕ್ಷೇಪ

Published:
Updated:

ಹೊನ್ನಾಳಿ:ಉತ್ತರಾಖಂಡ ರಾಜ್ಯದ ಕೇದಾರಮಠದ ಕೇದಾರೇಶ್ವರಸ್ವಾಮಿ ಪೂಜಾ ವಿಚಾರದಲ್ಲಿ ಜೋಷಿಮಠದ ಸ್ವರೂಪಾನಂದ ಸ್ವಾಮೀಜಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ಬಾಳೇಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಅಸಮಾಧಾನ ಭಾನುವಾರ ವ್ಯಕ್ತಪಡಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇದಾರನಾಥ ದೇವಾಲಯದ ಒಳ-ಹೊರಗೆ ಬಿದ್ದಿರುವ ಶವಗಳನ್ನು ತೆಗೆದು ಸ್ವಚ್ಛತಾ ಕಾರ್ಯ ಮಾಡುವ ಕಡೆಗೆ ಗಮನಹರಿಸಬೇಕಾದ ಸಂದರ್ಭದಲ್ಲಿ ಇಂತಹ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಂಚಪೀಠಗಳಲ್ಲಿ ಒಂದಾಗಿರುವ ಕೇದಾರ ಪೀಠದ ಗುರುಗಳಿಗೆ ಡೆಹರಿಗಢವಾಲ ರಾಜರು ತಿಲಕೋತ್ಸವದಲ್ಲಿ ರಾವಲ್ ಪದವಿ ನೀಡಿ ಗೌರವಿಸುತ್ತಾರೆ. ರಾವಲ್ ಅವರಿಂದ ನಿಯಂತ್ರಣಕ್ಕೆ ಒಳಪಟ್ಟ ಐವರು ಅರ್ಚಕರ ಪೈಕಿ ಒಬ್ಬರು ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ.

ಕೇದಾರದಲ್ಲಿರುವ ಕೇದಾರೇಶ್ವರ, ಗುಪ್ತ ಕಾಶಿಯಲ್ಲಿನ ವಿಶ್ವನಾಥಲಿಂಗ, ಮಧುಮೇಶ್ವರದಲ್ಲಿನ ಶಿವಲಿಂಗ, ಉಕ್ತಿ ಮಠದಲ್ಲಿನ ಓಂಕಾರೇಶ್ವರಲಿಂಗಗಳನ್ನು ಇತರ ನಾಲ್ವರು ಅರ್ಚಕರು ಪೂಜಿಸುವ ಸಂಪ್ರದಾಯ ಇದೆ ಎಂದು ವಿವರ ನೀಡಿದರು.ಪರಿಸ್ಥಿತಿ ಹೀಗಿರುವಾಗ, ಸ್ವರೂಪಾನಂದ ಸ್ವಾಮೀಜಿ ಕೇದಾರೇಶ್ವರನ ಪೂಜೆ ಮತ್ತು ರಾವಲ್ ಬಗೆಗೆ ಅನಗತ್ಯವಾಗಿ ವಿವಾದ ಹುಟ್ಟುಹಾಕುತ್ತಿದ್ದಾರೆ. ಹೀಗೆ ಮಾಡಲು ಅವರಿಗೆ ಯಾವುದೇ  ಅಧಿಕಾರ ಇಲ್ಲ ಎಂದರು.ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ವಿಜಯ ಬಹುಗುಣ ಅವರೊಂದಿಗೆ ಈಗಾಗಲೇ ಕೇದಾರಪೀಠದ ಗುರುಗಳು ಈ ಎಲ್ಲಾ ವಿಷಯಗಳನ್ನು ಚರ್ಚಿಸಿದ್ದಾರೆ ಎಂದು ತಿಳಿಸಿದರು.ಬದ್ರಿಕಾಶ್ರಮದ ಸ್ವಾಮಿ ವಸುದೇವಾನಂದ ಸರಸ್ವತಿ ಅವರು ಜೋಷಿಮಠದ ಸ್ವರೂಪಾನಂದ ಸ್ವಾಮೀಜಿ ಅವರ ಅರ್ಥಹೀನ ಹೇಳಿಕೆ ಖಂಡಿಸಿದ್ದಾರೆ. ವೀರಶೈವ ಧರ್ಮ ಪರಂಪರೆ ಮತ್ತು ಕೇದಾರೇಶ್ವರನ ಪೂಜೆ ಮಾಡುವ ಅಧಿಕಾರ ಕೇದಾರ ರಾವಲ್‌ರಿಂದ ನೇಮಿಸಿದ ಅರ್ಚಕರಿಗೆ ಇದೆ.

ಈ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪವಾಗಲಿ, ವಿವಾದ ಸೃಷ್ಟಿಸುವ ಹುನ್ನಾರವಾಗಲೀ ನಡೆದರೆ ಸಮಸ್ತ ವೀರಶೈವ ಸಮಾಜ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.  ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಾಮಿನಾಳು ಹಿರೇಮಠದ ಸಿದ್ದಪಾದ ಶಿವಾಚಾರ್ಯ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry