ಬುಧವಾರ, ಏಪ್ರಿಲ್ 14, 2021
24 °C

ಕೇದಾರ ಪೀಠದಲ್ಲಿ ಕರ್ನಾಟಕ ಭವನ: ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಉತ್ತರ ಖಂಡದಲ್ಲಿರುವ ಕೇದಾರ ಪೀಠದಲ್ಲಿ ಕರ್ನಾಟಕ ಭವನ ನಿರ್ಮಿಸುವ ಸಂಬಂಧ ಮುಖ್ಯಮಂತ್ರಿ  ಜತೆ ಚರ್ಚಿಸಿ, ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು. ನಗರದ ಎನ್‌ಡಿವಿ ಹಾಸ್ಟೆಲ್ ಆವರಣದಲ್ಲಿಹಮ್ಮಿಕೊಂಡಿರುವ ನಾಲ್ಕು ದಿನಗಳ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಜಾಗೃತಿ ಸಭೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೇದಾರ ಪೀಠದಲ್ಲಿ ಕರ್ನಾಟಕ ಭವನ ನಿರ್ಮಿಸುವುದರಿಂದ ಪೀಠಕ್ಕೆ ತೆರಳುವ ರಾಜ್ಯದ ಭಕ್ತಾದಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯ ಅಪೇಕ್ಷೆ ಮೇರೆಗೆ ಕೇದಾರ ಪೀಠದಲ್ಲಿ ಕರ್ನಾಟಕ ಭವನ ನಿರ್ಮಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಜತೆಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಎಲ್ಲ ಜಾತಿಗಳಲ್ಲೂ ಮಠ-ಮಂದಿರಗಳು ಇವೆ. ಅವೆಲ್ಲವುಗಳು ಮಾನವ ಧರ್ಮ ಒಂದಾಗಲಿ ಎಂಬ ಸದುದ್ದೇಶವನ್ನು ಹೊಂದಿವೆ.

 

ಈ ಹಿನ್ನೆಲೆಯಲ್ಲಿಯೇ ಸ್ವಾಮೀಜಿಗಳು ಸಮಾಜದ ಮೂಲೆ ಮೂಲೆಗಳಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾಜದಲ್ಲಿ ಧರ್ಮ, ಸಂಸ್ಕಾರಗಳು ಶಾಶ್ವತವಾಗಿ ನೆಲೆಯೂರಲು ಕಾರಣ ಮಠ-ಮಂದಿರಗಳು ಎಂದು ತಿಳಿಸಿದರು. ಯಾರೋ ಒಬ್ಬ ರಾಜಕಾರಣಿ ತಪ್ಪು ಮಾಡಿದರೆ, ಎಲ್ಲ ರಾಜಕಾರಣಿಗಳನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕುತಂತ್ರ ಕೆಲವರಿಂದ ಸಮಾಜದಲ್ಲಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜಕೀಯ ದುರುದ್ದೇಶಕ್ಕೆ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರ ಕಿಡಿಗೇಡಿಗಳಿಂದ ನಡೆಯುತ್ತಿರುತ್ತದೆ. ಇದಾವುದಕ್ಕೂ ಕಿವಿಗೊಡದೆ ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಸಲಹೆ ಮಾಡಿದರು.‘ನಾನು ಕೂಡ ಯಾವುದೇ ಅಧಿಕಾರಕ್ಕೆ, ಸ್ವಾರ್ಥಕ್ಕಾಗಿ ವೈಯಕ್ತಿಕ ಹಿತ ಕಾಪಾಡಿಕೊಳ್ಳಲು ಸೀಮಿತವಾಗದೆ, ಸ್ವಾಮೀಜಿ ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಸೇವೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಕೊಳ್ಳುತ್ತೇನೆ’ ಎಂದರು. ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಳಲಿ ಮಠದ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೆಣ್ಣೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು.ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ‘ಕಾಡಾ’ ಅಧ್ಯಕ್ಷ ಕೆ. ಶೇಖರಪ್ಪ, ನಗರಸಭೆ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ಜಯಶ್ರೀ ಹೊಸಮನಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕೇದಾರ ಮಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಪಲ್ಲಕ್ಕಿಯಲ್ಲಿ ಬೆಕ್ಕಿನ ಕಲ್ಮಠಕ್ಕೆ ಆಗಮಿಸಿದ ಸ್ವಾಮೀಜಿ ಮೆರವಣಿಗೆ, ಗಾಂಧಿಬಜಾರ್‌ನ ಬಸವೇಶ್ವರ ದೇವಸ್ಥಾನಕ್ಕೆ ತೆರಳಿತು. ಅಲ್ಲಿಂದ ವೀರಶೈವ ಕಲ್ಯಾಣ ಮಂದಿರ ತಲುಪಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.