ಕೇಬಲ್ ಟಿ.ವಿ.ಗೆ ಸೆಟ್ ಟಾಪ್ ಬಾಕ್ಸ್: ಮಾ.31 ಗಡುವು

7

ಕೇಬಲ್ ಟಿ.ವಿ.ಗೆ ಸೆಟ್ ಟಾಪ್ ಬಾಕ್ಸ್: ಮಾ.31 ಗಡುವು

Published:
Updated:
ಕೇಬಲ್ ಟಿ.ವಿ.ಗೆ ಸೆಟ್ ಟಾಪ್ ಬಾಕ್ಸ್: ಮಾ.31 ಗಡುವು

ಬೆಂಗಳೂರು: ಬೆಂಗಳೂರು ಮತ್ತು ಮೈಸೂರಿನ ಟಿವಿ ವೀಕ್ಷಕರು ಇನ್ನು ಮುಂದೆ ತಮ್ಮ ಇಚ್ಛೆಯ ಚಾನೆಲ್‌ಗಳನ್ನು ಉತ್ತಮ ಗುಣಮಟ್ಟದಲ್ಲಿ ವೀಕ್ಷಿಸಬಹುದು. ಕೇಬಲ್ ಟಿವಿ ಸಂಪರ್ಕದಾರರಿಗೆ ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಭಾರತೀಯ ದೂರಸಂಪರ್ಕ ಪ್ರಾಧಿಕಾರವು ಕೇಬಲ್ ಸಂಪರ್ಕದ ಡಿಜಿಟಲ್ ಆಡ್ರೆಸಬಲ್ ಸಿಸ್ಟಮ್ (ಡಿಎಎಸ್) ಯೋಜನೆ ರೂಪಿಸಿದ್ದು, ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮಾರ್ಚ್ 31ರೊಳಗೆ ಸೆಟ್ ಟಾಪ್ ಬಾಕ್ಸ್ ಅಳವಡಿಕೆಗೆ ಅಂತಿಮ ದಿನವನ್ನು ನಿಗದಿಪಡಿಸಿದೆ.ನೂತನ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಹಾನಗರಗಳಲ್ಲಿ ಜಾರಿಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಬೆಂಗಳೂರು ಮತ್ತು ಮೈಸೂರು ಸೇರಿದಂತೆ ದೇಶದ 36 ಮಹಾನಗರಗಳಲ್ಲಿ ಈ ವ್ಯವಸ್ಥೆ ಕಾರ್ಯಗತವಾಗಲಿದೆ.ಮಾರ್ಚ್ 31ರೊಳಗೆ ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳದ ಕೇಬಲ್ ಸಂಪರ್ಕಕಾರ್ಯ ಸ್ಥಗಿತಗೊಳ್ಳಲಿದೆ. ಹೀಗಾಗಿ ವೀಕ್ಷಕರು ಈಗಿರುವ ಕೇಬಲ್ ಸಂಪರ್ಕಕ್ಕೆ ಸೆಟ್‌ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೊಸ ವ್ಯವಸ್ಥೆಯಿಂದ ಒಂದೇ ಕೇಬಲ್ ಮೂಲಕ ದೂರವಾಣಿ ಸೇವೆ, ಇಂಟರ್‌ನೆಟ್, ವಿಡಿಯೊ ಆನ್ ಡಿಮ್ಯಾಂಡ್ ಸೇರಿದಂತೆ ಗ್ರಾಹಕರು ಬಯಸುವ ಬಹುಮಾಧ್ಯಮ ಸೇವೆಗಳು ದೊರೆಯಲಿವೆ.ನೂತನ ವ್ಯವಸ್ಥೆಯ ಬಗ್ಗೆ ಮಾತನಾಡಿದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಸೊಸೈಟಿಯ ಬೆಂಗಳೂರು ಪ್ರಾದೇಶಿಕ ವಿಭಾಗದ ಅಧ್ಯಕ್ಷ ಅನಿಲ್ ಕುಮಾರ್ ಮಂಗಲಗಿ, `ಹೊಸ ವ್ಯವಸ್ಥೆಯು ವೀಕ್ಷಕರಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸಲಿದೆ. ಸೆಟ್‌ಟಾಪ್ ಬಾಕ್ಸ್ ಅಳವಡಿಕೆಯಿಂದ ವೀಕ್ಷಕರಿಗೆ ಗುಣಮಟ್ಟದ ಚಿತ್ರ ವೀಕ್ಷಣೆ ಸಾಧ್ಯವಾಗುತ್ತದೆ. ಜತೆಗೆ ಎಚ್‌ಡಿ ಗುಣಮಟ್ಟ, ತ್ರಿಡಿ ಟಿವಿ ಸೇವೆಯೂ ಲಭ್ಯವಾಗಲಿದೆ. ಹೊಸ ವ್ಯವಸ್ಥೆಯಿಂದ ವೀಕ್ಷಕರಿಗೆ ಈಗಿರುವ ಕೇಬಲ್ ಜಾಲದಲ್ಲಿ ದೊರೆಯುವ ಚಾನೆಲ್‌ಗಳಿಗಿಂತ ಹೆಚ್ಚಿನ ಚಾನೆಲ್‌ಗಳು ಸಿಗಲಿವೆ' ಎಂದು ತಿಳಿಸಿದರು.`ಹೊಸ ವ್ಯವಸ್ಥೆಯ ಮೂಲಕ ತಮಗೆ ಬೇಕಾದ ಚಾನೆಲ್‌ಗಳನ್ನು ಆರಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ವೀಕ್ಷಕರಿಗಿದೆ. ಬೇಸಿಕ್ ಪ್ಲಾನ್‌ನಲ್ಲಿ 100 ಚಾನೆಲ್‌ಗಳು ಉತ್ತಮ ಗುಣಮಟ್ಟದೊಂದಿಗೆ ಸಿಗಲಿವೆ. ಆನಂತರ ವಿವಿಧ ಪ್ಲಾನ್‌ಗಳನ್ನು ವೀಕ್ಷಕರು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಸುಮಾರು 800 ಚಾನೆಲ್‌ಗಳನ್ನು ಆಯ್ದುಕೊಳ್ಳುವ ಅವಕಾಶ ವೀಕ್ಷಕರಿಗೆ ಲಭ್ಯವಾಗಲಿದೆ. ಆದರೆ, ಚಾನೆಲ್‌ಗಳ ಆಯ್ಕೆಯು ವಿವಿಧ ಪ್ಲಾನ್‌ಗಳಿಗೆ ಅನುಗುಣವಾಗಿರಲಿದೆ. ವಿವಿಧ ಪ್ಲಾನ್‌ಗಳಿಗೆ ವಿವಿಧ ದರಗಳನ್ನು ಸೇವೆ ಒದಗಿಸುವ ಕಂಪೆನಿಗಳು (ಸರ್ವಿಸ್ ಪ್ರೊವೈಡರ್ಸ್‌) ನಿಗದಿಪಡಿಸಲಿವೆ' ಎಂದು ಅವರು ವಿವರಿಸಿದರು.ಕೇಬಲ್ ಆಪರೇಟರ್ ಅಶೋಕ್ ಮಾತನಾಡಿ, `ಸೆಟ್‌ಟಾಪ್ ಬಾಕ್ಸ್‌ಗಳ ಬೆಲೆ ್ಙ 1 ಸಾವಿರದಿಂದ 2 ಸಾವಿರದವರೆಗಿದೆ. ಬೇರೆ ಬೇರೆ ಕಂಪೆನಿಗಳ ಸೆಟ್‌ಟಾಪ್ ಬಾಕ್ಸ್‌ಗಳಿಗೆ ಬೇರೆ ಬೇರೆ ಬೆಲೆಯಿದೆ. ಸೆಟ್‌ಟಾಪ್ ಬಾಕ್ಸ್‌ಗಳನ್ನು ಕೇಬಲ್ ಆಪರೇಟರ್ಸ್‌ ಅಥವಾ ಸೇವೆ ಒದಗಿಸುವ ಕಂಪೆನಿಗಳ ಮೂಲಕ ಕೊಂಡುಕೊಳ್ಳಬೇಕು. ಸದ್ಯ ಬೇಸಿಕ್ ಪ್ಲಾನ್‌ಗೆ ತಿಂಗಳಿಗೆ ರೂ. 150 ನಿಗದಿಪಡಿಸುವ ಬಗ್ಗೆ ಸರ್ವಿಸ್ ಪ್ರೊವೈಡರ್ಸ್‌ ಚಿಂತನೆ ನಡೆಸಿವೆ' ಎಂದು ಹೇಳಿದರು.ಆರು ತಿಂಗಳು ವಿಸ್ತರಣೆಗೆ ಒತ್ತಾಯ: ಹೊಸ ವ್ಯವಸ್ಥೆಯು ಅನೇಕ ಗೊಂದಲಗಳಿಂದ ಕೂಡಿದೆ ಎಂದು ಆಕ್ಷೇಪಿಸಿರುವ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್‌ ಅಸೋಸಿಯೇಷನ್ (ಕೆಎಸ್‌ಸಿಒಎ), ರಾಜ್ಯದಲ್ಲಿ ನೂತನ ವ್ಯವಸ್ಥೆ ಜಾರಿಗೊಳಿಸುವುದನ್ನು ಕನಿಷ್ಠ ಆರು ತಿಂಗಳು ಮುಂದೂಡಬೇಕು ಎಂದು ಒತ್ತಾಯಿಸಿದೆ.`ಬೆಂಗಳೂರಿನಲ್ಲಿ ಸುಮಾರು 24 ಲಕ್ಷ ಹಾಗೂ ಮೈಸೂರಿನಲ್ಲಿ 9 ಲಕ್ಷ ಕೇಬಲ್ ಟಿವಿ ಸಂಪರ್ಕದಾರರಿದ್ದಾರೆ. ಹೊಸ ವ್ಯವಸ್ಥೆಯಿಂದ ಟಿವಿ ವೀಕ್ಷಕರಿಗೆ ಸಾಕಷ್ಟು ಅನುಕೂಲಗಳಿವೆ. ಆದರೆ, ಹೊಸ ಸೇವೆಗಳಿಗೆ ದರ ಪಟ್ಟಿಯನ್ನು ಈವರೆಗೂ ನಿಗದಿಪಡಿಸಿಲ್ಲ. ಇದರಿಂದ ವೀಕ್ಷಕರು ಹಾಗೂ ಕೇಬಲ್ ಆಪರೇಟರ್‌ಗಳಲ್ಲಿ ಗೊಂದಲ ಉಂಟಾಗಿದೆ' ಎಂದು ಕೆಎಸ್‌ಸಿಒಎ ಅಧ್ಯಕ್ಷ ವಿ.ಎಸ್.ಪ್ಯಾಟ್ರಿಕ್ ರಾಜು ಹೇಳಿದರು.`ಮೊದಲ ಹಂತದಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿರುವ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳಿಗೂ ಈವರೆಗೆ ವಿವಿಧ ಪ್ಲಾನ್‌ಗಳ ದರಪಟ್ಟಿಯನ್ನು ರೂಪಿಸಿಲ್ಲ. ಈ ನಾಲ್ಕು ಮಹಾನಗರಗಳಲ್ಲಿ ಮೊದಲು ದರ ಪಟ್ಟಿಯನ್ನು ಜಾರಿಗೆ ತಂದು ಆನಂತರ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಅಲ್ಲದೇ ಹೊಸ ವ್ಯವಸ್ಥೆಯಿಂದ ದೊಡ್ಡ ಕೇಬಲ್ ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗಲಿದ್ದು, ಕೇಬಲ್ ಆಪರೇಟರ್‌ಗಳಿಗೆ ತೊಂದರೆಯಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಹೊಸ ವ್ಯವಸ್ಥೆಯ ಬಗ್ಗೆ ಪುನರ್‌ಪರಿಶೀಲನೆ ನಡೆಸಬೇಕು' ಎಂದು ಅವರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry